ಈ ಸಲ ನಂದಿ ಬೆಟ್ಟಕ್ಕೆ ಹೋದಾಗ ಇದ್ಯಾವುದೂ ಬಿಡಬೇಡಿ

ನೋಡೋದು ಮಾಡೋದು ಎರಡೂ

ನಮ್ಮಲ್ಲೊಂದು ಜನಪ್ರಿಯ ಮಾತಿದೆ ''ನಂದಿ ನೋಡ್ದೋನು ಹಂದಿಗಿಂತ್ಲೂ ಕಡೆ'' ಅಂತ. ಅಂದ್ರೆ ನಂದಿ ಬೆಟ್ಟದ ಮಹತ್ವ ಹೇಳಕ್ಕೆ ಆ ಮಾತ್ನ ಬಳಸ್ತಾರೆ ಅಷ್ಟೇ. ಹಾಗಂತ ನೋಡ್ದೆ ಇರೋರೆಲ್ಲಾ ಹಂದಿ ಅಂತ ಅಲ್ಲ. ಬೆಂಗಳೂರಿನಿಂದ ಬಹಳ ದೂರ ಏನಿಲ್ಲ ನಂದಿಬೆಟ್ಟ. ಸುಮಾರು 45 ಕಿ.ಮೀ ಅಷ್ಟೇ. ಚಿಕ್ಕಬಳ್ಳಾಪುರ ನಗರದಿಂದ 10 ಕಿ.ಮೀ ದೂರದಲ್ಲಿದೆ. ಅರ್ಕಾವತಿ ನದಿ ಹುಟ್ಟು ಇಲ್ಲೇ ಅಂತಾರೆ. ಅದೆಲ್ಲಾ ಇರ್ಲಿ. ನಂದಿಬೆಟ್ಟ ಅಂದ್ರೆ ಸಾಮಾನ್ಯವಾಗಿ ಟಿಪ್ಪು ಡ್ರಾಪ್ ಕೇಳೇ ಇರ್ತೀರ. ಅಲ್ಲಿರೋದು ಅದೊಂದೇ ಅಲ್ಲ. ನೋಡೋ ಅಂತಾದ್ದು ಬಹಳ ಇದೆ. ನಂದಿಬೆಟ್ಟದಲ್ಲಿ ಏನೇನೆಲ್ಲಾ ನೋಡಿ ಮಜಾ ಮಾಡ್ಬೋದು ಗೊತ್ತಾ?

1. ಟಿಪ್ಪು ಡ್ರಾಪ್

ಮೈಸೂರು ಹುಲಿ ಅಂತ ಕರೆಸಿಕೊಂಡಿರೋ ಟಿಪ್ಪು ಸುಲ್ತಾನ್ ಹೆಸರಿಂದ್ಲೇ ಇದನ್ನ ಕರೀತಾರೆ. ಅವನ ಕಾಲದಲ್ಲಿ ಖೈದಿಗಳನ್ನ ಇಲ್ಲಿಂದ ತಳ್ಳಿ ಕ್ರೂರವಾಗಿ ಸಾಯಿಸ್ತಿದ್ರು. ಈಗ ಜಾಗ ನೋಡ್ತಾನೋಡ್ತಾ ಆಗ ಎಷ್ಟೆಲ್ಲಾ ಜನ ಸತ್ರೋ ಏನೋ ಅಂದ್ಕೊಂಡು ಅಯ್ಯೋ ಪಾಪ ಅನ್ನಿಸ್ತದೆ. 

2. ಟಿಪ್ಪುವಿನ ಬೇಸಿಗೆ ಅರಮನೆ ಮತ್ತೆ ಕೋಟೆ

ಗಂಗರ ಕಾಲದಲ್ಲಿ ಚಿಕ್ಕಬಳ್ಳಾಪುರದ ಮುಖ್ಯಸ್ಥರು ಇದನ್ನ ಕಟ್ಟಿಸಿದ್ರು. ಟಿಪ್ಪು ಸುಲ್ತಾನ್ ಕಾಲದಲ್ಲಿ ಇದನ್ನ ಇನ್ನಷ್ಟು ರಿಪೇರಿ ಮಾಡ್ಸಿ ಇಲ್ಲೊಂದು ವಿಶ್ರಾಂತಿ ಗೃಹವನ್ನ ಕಟ್ಟಿಸಿದ. ಬೇಸಿಗೆ ಕಾಲದಲ್ಲಿ ಇಲ್ಲಿ ತಣ್ಣಗಿರ್ತಿತ್ತು. ಟಿಪ್ಪೂನ ಬೇಸಿಗೆ ಬಂಗಲೆಯಾಗಿ ಬಳಸ್ತಿದ್ರು. ಇದು ಸಾಮಾನ್ಯ ಜನರ ಬಳಕೆಗೆ ಇಲ್ಲ. ಛೇ! ನಾನೂ ಒಂದ್ಸಲ ಇಲ್ಲಿ ಹಾಯಾಗಿ ಮಲಗ್ಬೇಕಾಗಿತ್ತು ಅಂದ್ಕೋತೀರ.

3. ಕುದುರೆ ಮೆಟ್ಟಿಲು

ಬೆಟ್ಟದ ಈಶಾನ್ಯ ಭಾಗದಲ್ಲಿ ಕಲ್ಲಿನ ಬಾಗಿಲಿದೆ. ಇದನ್ನ ಕುದುರೆಗಳ ಬೆನ್ ಮೇಲೆ ಕೂತು ಹತ್ತಲು ಸೈನಿಕರು ಬಳಸುತ್ತಿದ್ದರಂತೆ. ಹಾಗಾಗಿ ಇದಕ್ಕೆ ಕುದುರೆ ಮೆಟ್ಟಿಲು ಅಂತ ಕರೀತಾರೆ. ಈ ದಾರೀನ ನೋಡ್ತಾ ಸೈನಿಕರು ಏನೆಲ್ಲಾ ಮಾಡ್ತಿದ್ರು ಅಂತ ನೆನೆಸ್ಕೊಂಡು ಥ್ರಿಲ್ ಆಗ್ತೀರ.

4. ಶತ್ರುಗಳಿಂದ ತಪ್ಪಿಸಿಕೊಳ್ಳೋಕೆ ರಹಸ್ಯ ದಾರಿ

ಪಶ್ಚಿಮ ದಿಕ್ಕಲ್ಲಿ ಈ ರಹಸ್ಯ ದಾರಿ ಇದೆ. ಆಗಿನ ಕಾಲದಲ್ಲಿ ರಾಜರು ಇಲ್ಲಿಗೆ ಬಂದಾಗ ಏನಾದ್ರೂ ಅವರ ಮೇಲೆ ಅನಿರೀಕ್ಷಿತ ದಾಳಿ ನಡೆದ್ರೆ, ಅಲ್ಲಿಂದ ತಪ್ಪಿಸಿಕೊಳ್ಳಕ್ಕೆ ಇದನ್ನ ಬಳಸ್ತಿದ್ರಂತೆ. ಆಗಿನ ಕಾಲ್ದಲ್ಲಿ ಏನೆಲ್ಲಾ ಟ್ರಿಕ್ಸ್ ಇತ್ತು ಅಂತ ತಿಳ್ಕೊಂಡ್ ಖುಷಿ ಪಡ್ತೀರ.

5. ದೇವಾಲಯಗಳು

ಇಲ್ಲಿ ಶ್ರೀ ಭೋಗನರಸಿಂಹ, ಶ್ರೀ ಉಗ್ರ ನರಸಿಂಹ ಮತ್ತೆ ಯೋಗ ನರಸಿಂಹ ದೇವಾಲಯಗಳಿವೆ. ಪುರಾತನ ಕಾಲದ ಈ ದೇವಸ್ಥಾನಗಳು ನೋಡಲು ಸುಂದರವಾಗಿವೆ.

6. ಗವಿ ವೀರಭದ್ರಸ್ವಾಮಿ ದೇವಸ್ಥಾನ

ಇದು ಬೆಟ್ಟದ ತುದಿಯಲ್ಲಿದೆ. ಟಿಪ್ಪು ಅರಮನೆಯಿಂದ ಸುಲ್ತಾನ್ ಪೇಟೆಗೆ ಹೋಗೋ ದಾರಿಯಲ್ಲಿ ಇದನ್ನ ಕಾಣ್ಬೋದು. ಸ್ವಾಭಾವಿಕವಾಗಿ ದೊಡ್ಡ ಬಂಡೆಗಳಿಂದ ನಿರ್ಮಾಣ ಆಗಿರೋ ದೇವಸ್ಥಾನ ಇದು. ನಿಮ್ಮಲ್ಲಿ ಭಕ್ತಿ ಉಕ್ಕಿ ಬರುವಂತೆ ಮಾಡ್ತಾನೆ ಗವಿ ವೀರಭದ್ರಸ್ವಾಮಿ.

7. ಮಕ್ಕಳ ಆಟದ ಮೈದಾನ

ತೋಟಗಾರಿಕೆ ಇಲಾಖೆ ಇದನ್ನ ನೋಡ್ಕೊಳ್ತಿದೆ. ಇಲ್ಲಿ ಮಕ್ಕಳು ಆಡೋಕೆ ಜಾರೋಬಂಡಿ, ಉಯ್ಯಾಲೆ, ರಂಕರಾಟೆ ಎಲ್ಲ ಇದೆ. ಇಲ್ಲಿ ಮಕ್ಕಳ ಜೊತೆ ನೀವೂ ಮಕ್ಕಳ ತರಹ ಆಗ್ಬೋದು.

8. ನೆಹರು ನಿಲಯ

ಜವಾಹರ್ ಲಾಲ್ ನೆಹರು ಇಲ್ಲಿಗೆ ಬಂದಾಗ ತೋಟಗಾರಿಕೆ ಇಲಾಖೆ ಪ್ರವಾಸಿ ಮಂದಿರದಲ್ಲಿ ಉಳ್ಕೊಂಡಿದ್ರು. ಹಾಗಾಗಿ ಇದನ್ನ ನೆಹರು ನಿಲಯ ಅಂತ ಕರೀತಾರೆ. ನೋಡ್ತಾ ನೋಡ್ತಾ ಆಹಾ ಎಷ್ಟ್ ಚೆನ್ನಾಗಿದೆ ಅಂದ್ಕೋತೀರ.

9. ಗಾಂಧಿ ಹೌಸ್

ಮಹಾತ್ಮಗಾಂಧಿ ಇಲ್ಲಿ ಉಳ್ಕೊಂಡಿದ್ರು. ಈಗ ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನೋಡ್ಕೊಳ್ತಿದೆ. ಗಣ್ಯರಿಗೆ ಮಾತ್ರ ಇದನ್ನ ಮೀಸಲಾಗಿದೆ. ಛೇ ನಮ್ಗೂ ಸಿಕ್ಕಿದ್ರೆ ಇಲ್ಲಿ ಒಂದ್ ದಿನ ಕಳೀಬೋದಾಗಿತ್ತಲ್ಲಾ ಅಂದ್ಕೋತೀವಿ. (ಚಿತ್ರದಲ್ಲಿ ನೀವ್ ನೋಡ್ತಿರೋದು ನಂದಿಬೆಟ್ಟದ ಎಂಟ್ರಸ್)

10. ಮಯೂರ ಹೋಟೆಲ್

ತೋಟಗಾರಿಕೆ ಮತ್ತೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಗಳು ಇದನ್ನ ನಡೆಸ್ತಿವೆ. ಇಲ್ಲಿ ವೆಜ್  ಮತ್ತು ನಾನ್-ವೆಜ್ ಎರಡೂ ಸಿಗುತ್ತೆ. ಕಾಫಿ, ಟೀ, ತಿಂಡಿ ತಿಂದು ಸುಧಾರಿಸ್ಕೋಬಹುದಿಲ್ಲಿ.

11. ನದಿಗಳು

ಪೆನ್ನಾರ್, ಪಾಲಾರ್ ಮತ್ತೆ ಅರ್ಕಾವತಿ ನದಿಗಳು ಹುಟ್ಟೋದು ಇಲ್ಲೇ. ಆದ್ರೆ ಅವೆಲ್ಲಾ ಈಗಿಲ್ಲ. ಯಾಕಂದ್ರೆ ಅವೆಲ್ಲಾ ಒಣಗಿ ಹೋಗಿವೆ.

12. ಅಮೃತ ಸರೋವರ

ಬೆಟ್ಟದ ಮೇಲೆ ಈ ಸರೋವರ ಇದೆ. ವರ್ಷ ಪೂರ್ತಿ ಇಲ್ಲಿ ನೀರನ್ನ ಕಾಣ್ಬೋದು. ಸೂರ್ಯನ ಬಿಸಿಲಿಗೆ ಇಲ್ಲಿನ ನೀರು ಹೊಳೀತಾ ಕಣ್ಣಿಗೆ ಸುಂದರವಾಗಿ ಕಾಣುತ್ತೆ.

13. ಬ್ರಹ್ಮಾಶ್ರಮ

ಮುನಿಗಳಾದ ರಾಮಕೃಷ್ಣರು ಇಲ್ಲಿ ಧ್ಯಾನ ಮಾಡ್ತಿದ್ರಂತೆ. ಇಲ್ಲಿ ತಂಪಾದ ಗುಹೆ ಇದೆ. ಆಶ್ರಮದಲ್ಲಿರೋ ಋಷಿ ಮುನಿಗಳು ಮುಂಜಾನೆ ಬೆಟ್ಟದ ಮೇಲೆ ಜೊತೆಯಾಗಿ ಕುಳಿತು ಭಂಗಿ ಸೇದಿ ಮುಂದಿನ ಕೆಲ್ಸಗಳಿಗೆ ಹೋಗ್ತಿದ್ರು ಅಂತ ಹೇಳ್ತಾರೆ.

14. ಪ್ಯಾರಾಗ್ಲೈಡಿಂಗ್, ಸೈಕ್ಲಿಂಗ್, ಬೈಕಿಂಗ್

ಕರ್ನಾಟಕದಲ್ಲಿ ಪ್ಯಾರಾಗ್ಲೈಡಿಂಗ್ ಮಾಡಲು ಸೂಕ್ತವಾದ ತಾಣ ಇದು (ಈಗ ಅಲ್ಲಿ ಪ್ಯಾರಾಗ್ಲೈಡಿಂಗ್ ಮಾಡ್ತಿಲ್ಲ). ಇನ್ನು ಸೈಕ್ಲಿಂಗ್ ಮಾಡೋರಿಗೆ ಇದು ಸ್ವರ್ಗ ಇದ್ದಂತೆ. ~7 ಕಿ.ಮೀ ಸೈಕಲ್ ತುಳಿದ್ರೆ 400 ಮೀಟರ್ ಎತ್ತರದ ಬೆಟ್ಟ ತಲುಪ್ತೀವಿ. ರಜಾ ದಿನಗಳಲ್ಲಿ ಬೆಂಗ್ಳೂರಿಂದ ಸೈಕ್ಲಿಸ್ಟ್‌ಗಳು/ಬೈಕರ್‌ಗಳು ಬರ್ತಾರೆ. ನಿಮಗೂ ಆ ರೀತಿ ಮಾಡ್ಬೇಕು ಅನ್ನಿಸಿದ್ರೆ ಬೈಕ್ ಅಥ್ವಾ ಸೈಕಲಲ್ಲಿ ಬರ್ಬೋದು.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ನಾನು ಜೀವನದಲ್ಲಿ ಹಿಂದೆ ಬೀಳ್ತಾ ಇದೀನಿ ಅನ್ನೋ ಮುಳ್ಳು ಚುಚ್ತಾ ಇದ್ರೆ ಈ 30 ಮಾತು ನೆನಪಿಸಿಕೊಳ್ಳಿ

ವೇದಾಂತ ಗೀದಾಂತ ಅಲ್ಲ, ಸಿಂಪಲ್ ವಿಷಯಗಳು

ನಮ್ಮ ಪ್ರಕಾರ ನಾವು ಜೀವನದಲ್ಲಿ ಎಷ್ಟೇ ಗೆಲುವು ಸಾಧಿಸಿದ್ದರೂ… ನಮ್ಮ ಪ್ರಕಾರ ನಮಗೆ ಬೇಕಾದ್ದೆಲ್ಲ ಇದ್ದರೂ… ಬೇಕಾದೋರೆಲ್ಲ ಇದ್ದರೂ… ಜೀವನ ಒಂದೊಂದ್ಸಲ ನಮಗೆ "ನೀನು ಹಿಂದೆ ಬಿದ್ದಿದೀಯ" ಅನ್ನೋ ಸಂದೇಶ ಕೊಡುತ್ತೆ. ಈ ಸ್ಪರ್ಧಾತ್ಮಕ ಜಗತ್ತಿನ ವಿಚಿತ್ರ ಇದು. ಇಂಥ ಪ್ರಪಂಚದಲ್ಲಿ ಅನವಶ್ಯಕವಾಗಿ ಕೀಳರಿಮೆ ಮೂಡಬಾರದು ಅನ್ನೋದಾದರೆ ಈ 30 ಮಾತು ನೆನಪಿಸಿಕೊಳ್ಳಿ. ಇವೆಲ್ಲ ಏನು ದೊಡ್ಡ ವೇದಾಂತ ಅಲ್ಲ, ಆದರೂ ನಿಮಗೆ ತುಂಬ ಉಪಯೋಗಕ್ಕೆ ಬರುತ್ತವೆ:

  1. ನೀವು ನಿಮ್ಮ ಕೈಯಲ್ಲಿ ಆಗೋದೆಲ್ಲ ಮಾಡ್ತಿದೀರಿ.
  2. ನಿಮ್ಮ ಕೈಯಲ್ಲಿ ಆಗೋದೆಲ್ಲ ಮಾಡ್ತಿಲ್ಲ ಅನ್ನಿಸಿದರೆ ಇನ್ನೇನ್ ಮಾಡ್ಬೋದು ಅಂತ ಯೋಚನೆ ಮಾಡಿ, ಕೆಲಸದಲ್ಲಿ ತೊಡಗಿಕೊಳ್ಳಿ.
  3. ತುಂಬಾ ಅನುಭವ ಇರೋರು ಅಥವಾ ನಿಮಗಿಂತ ತುಂಬಾ ಹಿಂದೆ ಶುರು ಮಾಡ್ಕೊಂಡೋರ್ನ ನೋಡಿ ನಾನು ಹಿಂದೆ ಇದೀನಿ ಅನ್ಕೋಬೇಡಿ. ಅವರ ಜೊತೆ ಪೈಪೋಟಿಗೆ ಇಳಿಯೋದು ಪೆದ್ದತನ.
  4. ಎಲ್ಲರಿಗೂ ಅವರದೇ ಆದ ವೇಗ ಅಂತ ಇರುತ್ತೆ.
  5. ನಿಮಗೆ ತುಂಬ ಇಷ್ಟವಿದ್ದ ಕೆಲಸ ಸಿಗದೆ ಹೋದರೆ ನೀವು ವೇಸ್ಟು ಅಂತೆನಲ್ಲ. ಜಾತಕ ಹೊಂದಲಿಲ್ಲ ಅಂತ ಅರ್ಥ!
  6. ಈಗಲೂ ನೀವು ತುಂಬಾ ಜನರಿಗಿಂತ ಮುಂದಿದೀರಿ. ನೀವು ಹಿಂದೆ ಆಗಿದ್ದ ವ್ಯಕ್ತೀನೂ ಆ ಪಟ್ಟಿಯಲ್ಲಿ ಇದಾನೆ/ಳೆ.
  7. ನಿಮಗೆ ಯಾವ ತರಹದ ಭವಿಷ್ಯ ಬೇಕಾದರೂ ರೂಪಿಸಿಕೊಳಕ್ಕೆ ಅನುಮತಿ ಇದೆ.
  8. ಜೀವನ ಅಂದ್ರೆ ಹೀಗೇ ಇರಬೇಕು ಅಂತೆನಿಲ್ಲ, ನೀವು ನಡೆಸಿದ್ದೇ ಜೀವನ.
  9. ಮೂವತ್ತನೇ ವಯಸ್ಸಿಗಿಂತ ಮುಂಚೆ ಮದುವೆ ಆಗದೆ ಹೋದರೆ ಮುಗೀತು ಕಥೆ ಅನ್ಕೋಬೇಡಿ.
  10. ಏನಾದರೂ ಆಗಿಬಿಡೋಷ್ಟು ಶ್ರಮ ಪಟ್ಟು ಕೆಲಸ ಮಾಡಿ ಉಪಯೋಗ ಇಲ್ಲ. ಅದರಿಂದ ಸಿಗೋದು ಗೆಲುವಲ್ಲ, ನಿಃಶಕ್ತಿ.
  11. ಮನಸ್ಥಿತಿ ಸರಿಯಾಗಿಲ್ಲದೆ ಇದ್ದರೆ ನಿಮಗೆ ನೀವೇ ಎಷ್ಟು ಹೇಳಿಕೊಂಡರೂ ಸ್ಫೂರ್ತಿ ಬರಲ್ಲ.
  12. ನಿಮ್ಮ ವಯಸ್ಸು ಇಪ್ಪತ್ತು-ಚಿಲ್ಲರೆ ಆದರೆ ನಿಮ್ಮ ಮುಂದೆ ಇನ್ನೂ ಇಡೀ ಜೀವನವೇ ಇದೆ, ಅದರಲ್ಲಿ ಎಂಥ ಅದ್ಭುತಗಳಾಗುತ್ತವೆ ಅಂತ ಈಗಲೇ ಹೇಳಕ್ಕಾಗಲ್ಲ.
  13. ನಿಮಗೆ ಬೇಕಾದ ಸ್ಫೂರ್ತಿ ಸಿಕ್ಕಿಲ್ಲದೆ ಇರಕ್ಕೆ ಕಾರಣ ಸರಿಯಾದ ವ್ಯಕ್ತಿ ಇನ್ನೂ‌ ಸಿಕ್ಕಿಲ್ಲದೆ ಇರೋದು ಅನ್ನಿಸುತ್ತೆ.
  14. ಯಾವಾಗಲೂ ಹೀಗೇ ತುಸುಕ್ ಅಂತ ಕೂತಿರಲ್ಲ  ನೀವು.
  15. ನಿಮ್ಮ ಭಾವನೆಗಳು ಇನ್ನಷ್ಟು ಕೆಲಸ ಮಾಡೋದಕ್ಕೆ ಪ್ರೇರಣೆ ಆಗಬೇಕು, ಕಡಿಮೆ ಕೆಲಸ ಮಾಡಕ್ಕಲ್ಲ.
  16. ಸರಿಯಾದ ಜೀವನ, ತಪ್ಪು ಜೀವನ ಅಂತ ಏನೂ ಇರಲ್ಲ.
  17. ಸಮಯ ನಿಮ್ಮ ಹತೋಟಿಗೆ ಮೀರಿದ್ದು.
  18. ಮುಂದಿನ 24 ಗಂಟೆ ಬಗ್ಗೆ ಯೋಚನೆ ಮಾಡಿ. ಅದರಲ್ಲಿ ಸಾಧಿಸಕ್ಕೆ ಆಗೋದನ್ನೆಲ್ಲ ಸಾಧಿಸಿ.
  19. ಸಾಮಾಜಿಕ ತಾಣಗಳಲ್ಲಿ ಜನ ಬರೀ ಒಳ್ಳೇ ಸುದ್ದಿಗಳು, ಒಳ್ಳೇ ಫೋಟೋಗಳ್ನೇ ಹಂಚಿಕೊಳ್ಳೋದು. ಒಳಗೆ ಏನಿರುತ್ತೋ ಯಾರಿಗ್ ಗೊತ್ತು?
  20. ಇಲ್ಲೀವರೆಗೆ ನೀವು ಏನೇನು ಸಾಧಿಸಿದ್ದೀರಿ ಅಂತ ಮೆಲಕು ಹಾಕಿ.
  21. ಸದ್ಯಕ್ಕೆ ಒಂದು ದಿನಕ್ಕಿಂತ ಹೆಚ್ಚು ಪ್ಲಾನ್ ಮಾಡಬೇಡಿ.
  22. ಇನ್ನೂ ಮಾಡಕ್ಕೆ ತುಂಬಾ ಇದೆ ಅಂತ ಯೋಚನೆ ಮಾಡ್ಕೊಂಡ್ ಕೂತ್ಕೋಬೇಡಿ. ಅದರಿಂದ ಕೆಲಸ ಬೇಗೇನು ಆಗಲ್ಲ.
  23. ಬೇಕಾದಾಗ ಸಲಹೆ, ಸಹಾಯ ಕೇಳೋದ್ರಿಂದ ನೀವು ಇನ್ನಷ್ಟು ಬುದ್ಧಿವಂತರಾಗ್ತೀರಿ, ಇನ್ನಷ್ಟು ಗಟ್ಟಿ ಆಗ್ತೀರಿ.
  24. ನಿಮಗೆ ಸಹಾಯ ಮಾಡ್ದೋರ್ನ ನೆನಪಿಸಿಕೊಳ್ಳಿ. ಆಗ ಗೊತ್ತಾಗುತ್ತೆ, ನೀವು ಒಂಟಿ ಅಲ್ಲ ಅಂತ.
  25. ಕೆಲಸ ಮುಂದಕ್ಕೆ ಹೋಗ್ತಿಲ್ಲ ಅಂದಾಗ ನಿಮ್ಮ ಪ್ರಕಾರ ಅದ್ಭುತವಾಗಿ ಕೆಲಸ ಮಾಡೋರು ಯಾರನ್ನಾದರೂ ನೆನಪಿಸಿಕೊಳ್ಳಿ. ಆಗ ಮುಂದಕ್ಕೆ ಹೋಗುತ್ತೆ.
  26. ಕಾಲೇಜ್ ಮುಗಿಸಿದ ತಕ್ಷಣ ಕೆಲಸ ಸಿಕ್ಕಿಲ್ಲದೆ ಹೋದರೆ ನೀವು ವೇಸ್ಟು ಅಂತಲ್ಲ. ನಿಮಗೆ ಸರಿ ಹೋಗೋ‌ ಕೆಲಸಗಳು ಇನ್ನೂ‌ ನಿಮ್ಮ ಕಣ್ಣಿಗೆ ಬಿದ್ದಿಲ್ಲ ಅಂತ ಅರ್ಥ.
  27. ಚೆನ್ನಾಗಿ ಜೀವನ ಮಾಡೋದು ಅಂದ್ರೆ ಯಾವುದೇ ಚಿಂತೆ ಇಲ್ಲದೆ ಜೀವನ ಮಾಡೋದು.
  28. ನಿಮ್ಮ ತಂದೆ-ತಾಯಿ ಹೇಳಿದ್ದನ್ನೇ ನೀವು ಮಾಡಬೇಕು ಅಂತಿಲ್ಲ. ನಿಮ್ಮ ದಾರಿ ನೀವು ಕಂಡ್ಕೊಳಿ.
  29. ಎಷ್ಟು ಸಲ ಬೇಕಾದರೂ, ಯಾವಾಗ ಬೇಕಾದರೂ ನಿಮ್ಮ ಮನಸ್ಸು ಬದಲಾಯಿಸಿ. ಬೇಡ ಅನ್ನೋನ್ ಯಾವನು?
  30. ಎಲ್ಲಾ ಬೇಗ್-ಬೇಗ ಮಾಡೋದೇ ಪ್ರಗತಿ ಅನ್ನೋದು ಮೂರ್ಖತನ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: