ಈ ಒಡೆಯರ್ ಕಾಲದ ಸೋಪಿನ ಬಗ್ಗೆ ನೀವು ತಿಳ್ಕೊಬೇಕಾದ 13 ಘಮಘಮ ಅನ್ನೋ ಸತ್ಯಗಳು

ಹ್ಯಾಪಿ ಬರ್ತ್ ಡೇ - 101 ವರ್ಷ

ಮಾರುಕಟ್ಟೆಗೆ ಅದೆಷ್ಟೋ ಸೌಂದರ್ಯ ಸಾಬೂನುಗಳು ಬಂದ್ವು ಹೋದ್ವು. ಆದ್ರೆ ನೂರು ವರ್ಷಗಳಿಂದ ಮಾರ್ಕೆಟಲ್ಲಿ ರಾಣಿ ತರಹ ಮೆರೀತಿರೋ ಸೋಪು ಅಂದ್ರೆ ಅದು ಮೈಸೂರು ಸ್ಯಾಂಡಲ್. ಈ ಸೋಪು ಬಂದು ನೂರು ವರ್ಷದ ಮೇಲೆ ಆಗಿದೆ ಅಂದ್ರೆ ಸುಮ್ನೆ ಮಾತಾ? ನಮ್ಮ ಗಂಧದ ಬೀಡಿನ ಹೆಮ್ಮೆಯ ಸೋಪು ಮೈಸೂರು ಸ್ಯಾಂಡಲ್. ಹ್ಯಾಪಿ ಬರ್ತ್ ಡೇ ಹೇಳುತ್ತಾ ಜನ ಈ ಸೋಪಿನ ಬಗ್ಗೆ ತಿಳ್ಕೋಬೇಕಾದ 13 ವಿಷಯಗಳಿವೆ.  

 

1. ಇದನ್ನ 100% ಶುದ್ಧ ಗಂಧದೆಣ್ಣೆಯಿಂದ ಮಾಡ್ತಾರೆ

ಶೇ.100ರಷ್ಟು ಶುದ್ಧವಾದ ಗಂಧದ ಎಣ್ಣೆಯಿಂದ ತಯಾರಾಗೋ ಈ ಜಗತ್ತಿನಲ್ಲಿ ಸಿಗೋ ಏಕೈಕ ಸೋಪು ಅಂದ್ರೆ ಮೈಸೂರು ಸ್ಯಾಂಡಲ್.

2. ಇದು ಕರ್ನಾಟಕ ಸರ್ಕಾರದ ಒಂದು ಉದ್ದಿಮೆ

ಕರ್ನಾಟಕ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸೋಪ್ಸ್ ಮತ್ತು ಡಿಜರ್ಜೆಂಟ್ಸ್ ಲಿಮಿಟೆಡ್ (KSDL) ತಯಾರಿಸುವ ಬ್ರ್ಯಾಂಡ್ ಇದು. ಗೌರ್ನಮೆಂಟ್ ಸೋಪ್ ಫ್ಯಾಕ್ಟರಿಯೊಂದಿಗೆ ಶಿವಮೊಗ್ಗ ಮತ್ತು ಮೈಸೂರಿನ ಗಂಧದೆಣ್ಣೆ ಫ್ಯಾಕ್ಟರಿಗಳು 1980ರಲ್ಲಿ ವಿಲೀನವಾಗುವ ಮೂಲಕ ಸ್ಥಾಪನೆಯಾಯ್ತು ಕೆಎಸ್ ಡಿಎಲ್.  

3. ಗೌರ್ನಮೆಂಟ್ ಸೋಪ್ ಫ್ಯಾಕ್ಟರಿ ಕಟ್ಟಿಸಿದ್ದು ನಾಲ್ವಡಿ ಕೃಷ್ಣರಾಜ ಒಡೆಯರು

ನಾಲ್ಕನೇ ಕೃಷ್ಣರಾಜ ಒಡೆಯರು ಬೆಂಗಳೂರಿನಲ್ಲಿ ಗೌರ್ನಮೆಂಟ್ ಸೋಪ್ ಫ್ಯಾಕ್ಟರಿ ಸ್ಥಾಪಿಸಿದ ಮೇಲೆ ಈ ಸೋಪನ್ನು 1916ರಿಂದ ತಯಾರಿಸಲಾಗುತ್ತಿದೆ. ಮೊದಲನೇ ಮಹಾಯುದ್ಧದಿಂದಾಗಿ ಯೂರೋಪ್ ಗೆ ಗಂಧದ ರಫ್ತು ನಿಂತೋಯ್ತು. ಆಗ ಇಲ್ಲೇ ಸಂಗ್ರಹವಾದ ಗಂಧದ ಮರಗಳನ್ನು ಬಳಸಿಕೊಳ್ಳುವ ಉದ್ದೇಶದಿಂದ ಈ ಫ್ಯಾಕ್ಟರಿ ಆರಂಭಿಸಿದರು.

4. ಯಾರೋ ಕೊಟ್ಟ ಸ್ಯಾಂಡಲ್ ಸೋಪ್ ಉಡುಗೊರೆಯಿಂದ ಅವರಿಗೆ ಸೋಪ್ ತಯಾರಿಸೋ ಐಡಿಯಾ ಬಂತು

ಒಮ್ಮೆ ಮೈಸೂರಿನ ಮಹಾರಾಜಗೆ ಭಾರತದಲ್ಲೇ ತೆಗೆದ ಗಂಧದ ಎಣ್ಣೆಯಿಂದ ತಯಾರಿಸಿದ ಸೋಪ್ ಉಡುಗೊರೆಯಾಗಿ ಸಿಕ್ತು. ಅರೆ ಗಂಧದೆಣ್ಣೆಯಿಂದ ನಾವೂ ಯಾಕೆ ಸೋಪ್ ತಯಾರಿಸ್ಬಾರ್ದು ಎಂಬ ಐಡಿಯಾ ಹೊಳೆದದ್ದು ಆಗ್ಲೆ.     

5. ಬರೀ 2 ವರ್ಷದಲ್ಲಿ ಐಡಿಯಾನ ಕಾರ್ಯರೂಪಕ್ಕೆ ತಂದರು

ಈ ಗಂಧದೆಣ್ಣೆ ಸೋಪ್ ಏನೋ ಉಡುಗೊರೆಯಾಗಿ ಅವರ ಕೈಗೆ ಸಿಕ್ತು, ಮೈಸೂರು ಸ್ಯಾಂಡಲ್ ಸೋಪ್ ತಯಾರಿಸೋ ಐಡಿಯಾನೂ ಬಂತು. ಆದ್ರದು ಕಾರ್ಯರೂಪಕ್ಕೆ ತರಲು ಎರಡು ವರ್ಷ ಬೇಕಾಯ್ತು. 

6. ಮೊದಲನೆ ಮೈಸೂರು ಸ್ಯಾಂಡಲ್ ಸೋಪ್ ತಯಾರಾಗಿದ್ದು 1918ರಲ್ಲಿ

ಗಂಧದೆಣ್ಣೆ ಬಳಸಿ ಸೋಪ್ ತಯಾರಿಸಕ್ಕೆ ರಸಾಯನಶಾಸ್ತ್ರಜ್ಞರಾದ ಎಸ್ ಜಿ ಶಾಸ್ತ್ರಿ ಮುಂದಾದ್ರು. 1918ರಲ್ಲಿ ಮೊದಲ ಮೈಸೂರು ಸ್ಯಾಂಡಲ್ ಸೋಪ್ ಹಾಗೂ ಗಂಧದೆಣ್ಣೆ ಪರಿಮಳದ ನೋಟನ್ನು ಮಾರುಕಟ್ಟೆಗೆ ಬಿಡಲಾಯಿತು. 

7. ಮೈಸೂರು ಸ್ಯಾಂಡಲ್ ಸೋಪಿನ ಮೊದಲ ರಾಯಭಾರಿ ಎಂ.ಎಸ್.ಧೋನಿ

2006ರಲ್ಲಿ ಮೈಸೂರು ಸ್ಯಾಂಡಲ್ ಸೋಪ್ ನ ಮೊದಲ ರಾಯಭಾರಿಯಾಗಿ ಭಾರತ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಆಯ್ಕೆಯಾದರು.
 

8. ನೈಸರ್ಗಿಕ ಗಂಧದೆಣ್ಣೆಯಿಂದ ತಯಾರಾಗೋ ಏಕೈಕ ಸೋಪ್ ಇದು

ನೈಸರ್ಗಿಕ ಗಂಧದೆಣ್ಣೆಯಿಂದ ತಯಾರಾದ ಇಡೀ ಜಗತ್ತಲ್ಲಿ ಸಿಗೋ ಏಕೈಕ ಸೋಪ್ ಇದು ಅಂತ 2006ರಲ್ಲಿ ಇದನ್ನು ಭೌಗೋಳಿಕವಾಗಿ ಗುರುತಿಸಲಾಗಿದೆ. ಅದೇ ರೀತಿ ಮೈಸೂರು ಸ್ಯಾಂಡಲ್ ವುಡ್ ಆಯಿಲ್ ಹಾಗೂ ಮೈಸೂರು ಕಸೂತಿಯನ್ನೂ ಗುರುತಿಸಲಾಗಿದೆ. 

9. KSDL ಸೋಪ್ ಫ್ಯಾಕ್ಟರೀಲಿ ವರ್ಷಕ್ಕೆ 26,000 ಟನ್ ಸೋಪು ತಯಾರಿಸ್ತಾರೆ

ಮಾರ್ಚ್ 2006ರ ಪ್ರಕಾರ, ಭಾರತದಲ್ಲಿ ತಯಾರಾಗುವ ಹಾಗೂ ಮಾರುಕಟ್ಟೆ ಬರುವ 450 ಸಾವಿರ ಟನ್ ಸೋಪ್ ಗಳಲ್ಲಿ ಮೈಸೂರು ಸ್ಯಾಂಡಲ್ ವುಡ್ ಸೋಪಿನ ಪಾಲು 6,500 ಟನ್. ಬೆಂಗಳೂರಿನ ಕೆಎಸ್ ಡಿಎಲ್ ಸೋಪ್ ಫ್ಯಾಕ್ಟರಿಗೆ ದೇಶದಲ್ಲೇ ಅತ್ಯಧಿಕ ಉತ್ಪದನಾ ಸಾಮರ್ಥ್ಯವಿದ್ದು ವರ್ಷಕ್ಕೆ 26,000 ಟನ್ ಉತ್ಪಾದಿಸಲಾಗುತ್ತೆ. 

10. ಈ ಕಂಪನಿ 2013-14ರಲ್ಲಿ ರೂ. 32.84 ಕೋಟಿ ಲಾಭ ಮಾಡ್ತು

2013-14ರಲ್ಲಿ ಈ ಕಂಪನಿ 315.72 ಕೋಟಿ ರೂಪಾಯಿ ಸರಕನ್ನು ಮಾರಾಟ ಮಾಡುವ ಮೂಲಕ ಒಟ್ಟು ರೂ. 32.84 ಕೋಟಿ ಲಾಭ ಗಳಿಸಿತ್ತು. 
 

11. ಮಿಲೇನಿಯಂ ಅನ್ನೋ ಹೆಸರಿನ ಸೂಪರ್ ಪ್ರೀಮಿಯಂ ಸೋಪ್ ಬೆಲೆ ರೂ. 720!!!

2012ರಲ್ಲಿ ಕೆಎಸ್ ಡಿಎಲ್, ಅತ್ಯಧಿಕ ಬೆಲೆಯ ಮಿಲೇನಿಯಂ ಹೆಸರಿನ ಸೂಪರ್ ಪ್ರೀಮಿಯಂ ಸೋಪ್ ಬಿಡುಗಡೆ ಮಾಡಿತು. 150 ಗ್ರಾಂ ಬಾರಿನ ಬೆಲೆ ರೂ.720, ದೇಶದಲ್ಲಿ ತಯಾರಾದ ಅತ್ಯಧಿಕ ಬೆಲೆಯ ಸೋಪ್ ಇದಾಗಿದ್ದು, ಪ್ರತಿ ಸೋಪ್ ಬಾರ್ ಶೇ.3ರಷ್ಟು ಶುದ್ಧ ಗಂಧದೆಣ್ಣೆಯಿಂದ ತಯಾರಿಸಲಾಗಿತ್ತು. 

12. ಸೋಪ್ ಅಷ್ಟೇ ಅಲ್ಲ ಡಿಟರ್ಜೆಂಟ್ ಗಳು, ಕಾಸ್ಮೆಟಿಕ್ ಗಳ್ನ ಕೂಡ ಇದೇ ಕಂಪನಿ ತಯಾರಿಸುತ್ತೆ

ಬೆಂಗಳೂರು, ಮೈಸೂರು ಮತ್ತು ಶಿವಮೊಗ್ಗದಲ್ಲಿ ಕೆಎಸ್ ಡಿಎಲ್ ಘಟಕಗಳಿದ್ದು ಸೋಪ್ ಗಳು, ಡಿಟರ್ಜೆಂಟ್ ಗಳು ಹಾಗೂ ಕಾಸ್ಮೆಟಿಕ್ ಗಳನ್ನು ತಯಾರಿಸಲಾಗುತ್ತೆ.

13. ಈಗ ಮೈಸೂರು ಸ್ಯಾಂಡಲ್ ಸೋಪ್ಗೆ 100 ವರ್ಷ

ಮೇ.10, 2016ಕ್ಕೆ ಕೆಎಸ್ ಡಿಎಲ್ ಮೈಸೂರು ಸ್ಯಾಂಡಲ್ ಸೋಪ್ ತಯಾರಿಸಲು ಶುರುಮಾಡಿ 100 ವರ್ಷಗಳಾಗಿವೆ. ನಮ್ಮ ಮೈಸೂರು ಸೋಪ್ ಬಗ್ಗೆ ಕರ್ನಾಟಕದ ಜನ ಹೆಮ್ಮೆ ಪಡುವ ದಿನ ಇದು. 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಬರೀ 20,000 ರೂಪಾಯಿಗೆ ಸಿಗೋ ಈ ಹೊಸ ಸೋಲಾರ್ ಹಾಕಿಸಿದರೆ ನಿಮ್ಮ ಕರೆಂಟ್ ಬಿಲ್ ಅರ್ಧ

IIT ಮದ್ರಾಸ್ ಕರಾಮತ್ತು

ದಿನ ಬೆಳಗಾದ್ರೆ, ಈ ನ್ಯೂಸ್ ಪೇಪರ್ಗಳಲ್ಲಿ  ಕೊಲೆ, ಸುಲಿಗೆ, ದರೋಡೆ ಜೊತೆಗೆ ತಪ್ಪದೇ ಬರೋ ಇನ್ನೊಂದು ಸುದ್ದಿ ಅಂದ್ರೆ, ಲೋಡ್ ಶೆಡ್ಡಿಂಗ್ದು. ಇದನ್ನ ಓದಿ ನಾವು ಬೇಜಾರ್ ಮಾಡ್ಕೊಳೋದೂ ಸರ್ವೇಸಾಮಾನ್ಯ ಆಗೋಗ್ಬಿಟ್ಟಿದೆ. ಇದಕ್ಕೆಲ್ಲ ಇತಿಶ್ರೀ ಹಾಡೋ ಅಂತ ಸಮಯ ಬಂದಿದೆ. ಇದು IIT ಮದ್ರಾಸ್ ಸಿಬ್ಬಂದಿ ಕೃಪೆ! ನಾವೇನ್ ಹೇಳ್ತಾ ಇದ್ದೀವಿ ಅಂತ ತಲೆಕೆಡ್ತಾ ಇದ್ಯಾ? ಮುಂದೋದಿ...ನಿಮಗೇ ಗೊತ್ತಾಗತ್ತೆ.

ಎಕನಾಮಿಕ್ ಟೈಮ್ಸ್ ವರದಿ ಮಾಡಿರೋ ಪ್ರಕಾರ IIT ಮದ್ರಾಸಲ್ಲಿ ಒಂದಿಷ್ಟು ಜನ ಪುಣ್ಯಾತ್ಮರು ಸೇರ್ಕೊಂಡು ನಮ್ಮನೆ ಟೀಪಾಯ್ ಅಷ್ಟಗಲದ್ದು ಸೋಲಾರ್ ಪ್ಲಾಂಟ್ ತಯಾರು ಮಾಡಿದ್ದಾರೆ. ಈ ಸೋಲಾರ್ ಪ್ಲಾಂಟನ್ನ ನಮ್ಮನೆ ತಾರ್ಸಿ ಮೇಲೆ ಅಳವಡಿಸೋದ್ರಿಂದ ಕರೆಂಟ್ ಹೋಗೋ ಸಮಸ್ಯೆ ಇಂದ ಮುಕ್ತಿ ಸಿಗತ್ತೆ. ಇದರ ಜೊತೆಗೆ, ಕರೆಂಟ್ ಬಿಲ್ಲೂ ಅರ್ಧಕ್ಕರ್ಧ ಕಡಿಮೆ ಆಗುತ್ತಂತೆ. ಇದನ್ನ ಹಾಕ್ಸಕ್ಕೆ 20,000ದಷ್ಟು ದುಡ್ಡಿದ್ರೆ ಸಾಕು. ಇದರಲ್ಲಿ 125W ಪ್ಯಾನೆಲ್ ಜೊತೆಗೆ 0.5kWh ಬ್ಯಾಟರಿ ಇರುತ್ತೆ.

ಮೂಲ

ಏನು... ಇದನ್ನ ಕೇಳಿ ನಿಮಗೂ ಖುಷಿ ಆಯ್ತೋ ಇಲ್ವೋ? ಯಾಕಂದ್ರೆ, ಈಗಿರೋ ಮಾರ್ಕೆಟ್ ರೇಟ್ ಪ್ರಕಾರ, ಇದೇ ರೀತಿ ಪ್ಯಾನಲ್ ಹಾಕ್ಸಕ್ಕೆ ಬರೋಬ್ಬರಿ 1,20,000 ರುಪಾಯಿ ಬೇಕು ಅಂತ ಸೋಲಾರ್ ಎನರ್ಜಿ ಕಾರ್ಪೊರೇಶನ್ ಆಫ್ ಇಂಡಿಯಾದೋರು ಹೇಳ್ತಾರೆ. ಆದ್ರೆ, ಈ ಪ್ಲಾಂಟ್ ಅದಕ್ಕಿಂತ ಎಷ್ಟು ಪಟ್ಟು ಕಡಿಮೆ ನೋಡಿದ್ರಾ?

ಈ ಸೋಲಾರ್ ಪ್ಯಾನಲ್ ಇಂದ ಒಂದೆರ್ಡು ಟ್ಯೂಬ್ಲೈಟು, ಫ್ಯಾನು, ಚಾರ್ಜಿಂಗ್ ಪಾಯಿಂಟು, ಟೀವಿ ಎಲ್ಲಾನೂ ಓಡಿಸ್ಬೋದಂತೆ. ಇದಕ್ಕಿಂತ ಸ್ವಲ್ಪ ದೊಡ್ದ ಮಾಡೆಲ್ ತಗೊಂಡ್ರೆ, AC ಮತ್ತು ವಾಶಿಂಗ್ ಮಷಿನ್ ಬಿಟ್ಟು ಇನ್ನೆಲ್ಲಾ ಸಲಕರಣೆಗಳನ್ನೂ ಓಡಿಸ್ಬೋದಂತೆ ಕಣ್ರೀ!

ಪ್ರೊಫೆಸರ್ ಅಶೋಕ್ ಝುಂಝುಂನ್ವಾಲಾ ಹೇಳೋ ಪ್ರಕಾರ, ಈ ಸೋಲಾರ್ ಪ್ಲಾಂಟು ಪೂರ್ತಿ DC ವೈರಿಂಗ್ ಜೊತೆ ಬರೋದ್ರಿಂದ, ಬೇರೆ ಸೋಲಾರ್ ಪ್ಯಾನಲ್ಗಳ ಥರ DCನ ACಗೆ ಪರಿವರ್ತಿಸಲ್ಲ. ಇದ್ರಿಂದ ತುಂಬ ಎನರ್ಜಿ ಉಳಿತಾಯ ಆಗಿ ಕರೆಂಟ್ ಬಿಲ್ಲು ಕಮ್ಮಿ ಆಗುತ್ತೆ. ಗಮನಿಸಿ: ಸಾಮಾನ್ಯವಾಗಿ ನಮ್ಮ ಮನೆಗಳಲ್ಲೆಲ್ಲ AC ವೈರಿಂಗ್ ಮತ್ತು ಎಲೆಕ್ಟ್ರಿಕ್ ಸಾಮನುಗಳು ಇರೋದ್ರಿಂದ ಅದನ್ನೆಲ್ಲ ನೇರವಾಗಿ ಇದಕ್ಕೆ ಅಳವಡಿಸಕ್ಕೆ ಆಗಲ್ಲ.

ತಮಿಳುನಾಡು ಸರ್ಕಾರ, ದೊಡ್ಡ ದೊಡ್ದ MNCಗಳ ಜೊತೆ ಸೇರಿ  ಆಗ್ಲೇ 15,000 ಹಳ್ಳಿ ಮನೆಗಳಿಗೆ ಇದನ್ನ ಅಳವಡಿಸಿದ್ದಾರಂತೆ. ಮದ್ರಾಸಲ್ಲಿ 2015ರಲ್ಲಿ ಪ್ರವಾಹ ಬಂದಾಗ, ಇದರ ಸಹಾಯದಿಂದ 3 ದಿನ ಕರೆಂಟ್ ತೊಂದರೆ ಆಗ್ಲಿಲ್ವಂತೆ. ಇದರ ಜೊತೆ ರಾಜಸ್ಥಾನ್, ಅಸ್ಸಾಮಲ್ಲೂ ಹಾಕಿದ್ದಾರೆ. ಇನ್ಮುಂದೆ, ಕರ್ನಾಟಕ, ಆಂಧ್ರ ತೆಲಂಗಾಣ ಮತ್ತು ಒರಿಸ್ಸಾಲೂ ಇವುಗಳನ್ನ ಅಳವಡಿಸ್ತಾರಂತೆ.

IIT ಅವರ ಈ ಕೆಲಸ ಇಷ್ಟ ಆಗಿ, ನ್ಯೂಯಾರ್ಕಲ್ಲಿರೋ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ ಎಂಜಿನಿಯರ್ಸ್ (IEEE) ಇವರು ಈ ಯೋಜನೆಗೆ '2017ರ ಅತ್ಯುತ್ತಮ ಜನಸೇವಾ ತಂತ್ರಜ್ಞಾನ' ಅನ್ನೋ ಪ್ರಶಸ್ತಿ ಕೊಟ್ಟಿದ್ದಾರೆ.

ನಂಗಂತೂ ಇದನ್ನ ಕೇಳಿ ತುಂಬಾನೇ ಖುಷಿಯಾಯ್ತಪ್ಪ. ನಿಮಗೆ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: