1878ರಿಂದ ಇವತ್ತಿನ ವರೆಗೆ ಮೈಸೂರಿನ ಮಹಾರಾಣೀರಾಗಿ ಬಂದ ನಾರೀಮಣಿಗಳ ರೋಮಾಂಚಕ ಕಥೆ

ರಾಜನ ಬಗ್ಗೆ ಗೊತ್ತಾದ್ರೆ ರಾಣಿ ಬಗ್ಗೆ ಗೊತ್ತಾದಂಗಲ್ಲವಲ್ಲ, ಅದಕ್ಕೆ

ರಾಣೀರು

ಮೈಸೂರು ಒಡೆಯರ ಬಗ್ಗೆ ಸಿಗೋ ಅಷ್ಟು ಮಾಹಿತಿ ಅವರ ಹೆಂಡ್ತೀರ ಬಗ್ಗೆ ಸಿಗೋದು ಕಷ್ಟ. ಇತಿಹಾಸದ ಪುಟಗಳನ್ನು ಕೆದಕ್ತಾ ಹೋದ್ರೆ ಅವರ ಅರ್ಧಾಂಗಿಯರ ಬಗ್ಗೆ ಸಿಗೋದು ಅರ್ಧಂಬರ್ಧ ಮಾಹಿತಿ ಅಷ್ಟೇ. ಈಗ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವರಿಸಿರುವ ತ್ರಿಷಿಕಾ ಕುಮಾರಿ ಸಿಂಗ್ ಅವರ ವಿಚಾರವೇ ತಗೊಳ್ಳಿ. ಅವ್ರ ವಿವರಗಳನ್ನ ಬಹಳ ಗುಟ್ಟಾಗಿ ಇಟ್ಟಿದ್ರು. ಈಗ್ಲೂ ಅಷ್ಟೇ ರಾಜಸ್ಥಾನದ ದುಂಗಾರಪುರ ರಾಜವಂಶಸ್ಥೆ ಎಂಬುದನ್ನು ಬಿಟ್ಟರೆ ಹೆಚ್ಚಿನ ಮಾಹಿತಿ ಸಿಗೋದು ಕಷ್ಟ. ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರ ಪತ್ನಿ ಪ್ರಮೋದಾ ದೇವಿ ಅವರ ಬಗ್ಗೆಯೂ ಅಷ್ಟಕ್ಕಷ್ಟೇ. ಹಾಗಂತ ಇವ್ರು ಮದುವೆಯಾದವರೆಲ್ಲಾ ರಾಜವಂಶಸ್ಥರೇನಲ್ಲ. ಎಲ್ಲೆಲ್ಲಿಂದಲೋ ಹೆಣ್ಣು ತಂದಿದ್ದಾರೆ. ಕಂಕುಳಲ್ಲಿ ಮಗು ಇಟ್ಕೊಂಡ್ ಊರೆಲ್ಲಾ ಅಲೆಯೋದು ಯಾಕೆ ಅಂತ ನಮ್ಮ ರಾಜ್ಯದವರನ್ನೇ ಮದ್ವೆ ಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರು ಒಡೆಯರ ಹೆಂಡ್ತೀರ ಬಗ್ಗೆ ಒಂದಿಷ್ಟು. 

1. ಮಹಾರಾಣಿ ಕೆಂಪ ನಂಜಮ್ಮಣ್ಣಿ ವಾಣಿ ವಿಲಾಸ ಸನ್ನಿಧಾನ (10ನೇ ಚಾಮರಾಜ ಒಡೆಯರ್ ಹೆಂಡ್ತಿ): 1866-1934  

ಮೂಲ

ಮೈಸೂರು ರಾಣಿಯರಲ್ಲೇ ಬಹಳ ಫೇಮಸ್ಸು. ಮೈಸೂರು ಸಂಸ್ಥಾನದಲ್ಲೇ ಒಂದು ಅಪರೂಪದ ರತ್ನ ಅಂತ ಇರ್ವನ್ನ ಬಣ್ಣಿಸಲಾಗಿದೆ. ಯಾಕಂದ್ರೆ ಇವ್ರ ಪರಿಪಾಲನೆ, ಮೈಸೂರು ರಾಜಪ್ರತಿನಿಧಿಯಾಗಿ, ಮಗನಿಗೆ (ನಾಲ್ವಡಿ ಕೃಷ್ಣರಾಜ ಒಡೆಯರ್) ಸೂಕ್ತ ವಿದ್ಯಾಭ್ಯಾಸ, ಆಡಳಿತ ತರಬೇತಿ ಇವುಗಳನ್ನು ಮಹಾರಾಣಿಯವರು ತೀವ್ರ ನಿಗಾ ವಹಿಸಿ ನಡೆಸಿದುದರ ಪರಿಣಾಮವಾಗಿ, ಮೈಸೂರು ರಾಜ್ಯಕ್ಕೆ ಒಬ್ಬ ಸಮರ್ಥ ಆಡಳಿತಗಾರರಾಗಿ ನಾಲ್ವಡಿ ಕೃಷ್ಣರಾಜ ಒಡೆಯರು ದೊರಕಿದರು.

ಕೆಂಪನಂಜಮ್ಮಣ್ಣಿ ಹುಟ್ಟಿದ್ದು 1866ರಲ್ಲಿ. ಅವರ ತಂದೆತಾಯಿ ನರಸೇ ಅರಸು ಹಾಗೂ ಕೆಂಪನಂಜಮ್ಮಣ್ಣಿ. 26.5.1878ರಲ್ಲಿ ಚಾಮರಾಜ ಒಡೆಯರ್ ಅವರನ್ನು ಮದುವೆಯಾದರು. 1884ರಲ್ಲಿ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರಿಗೆ ಜನ್ಮ ನೀಡಿದರು. ಇವರಿಗೆ ಕಂಠೀರವ ನರಸಿಂಹರಾಜ ಒಡೆಯರ್ ಸೇರಿ ಮೂವರು ಪುತ್ರಿಯರೂ ಇದ್ದಾರೆ. 

ತಮ್ಮ 69ನೇ ವಯಸ್ಸಿನಲ್ಲಿ ಅನಾರೋಗ್ಯದ ಕಾರಣ ಮಹಾರಾಣಿ ಕೆಂಪ ನಂಜಮ್ಮಣ್ಣಿ ಅವರು ಜುಲೈ 7, 1934ರಲ್ಲಿ ವಿಧಿವಶರಾದರು. ಅವರು ಏಕಾದಶಿ, ಉತ್ತರಾಯಣ ಕಾಲದಲ್ಲಿ ತೀರಿಕೊಂಡ ಕಾರಣ ಬಹಳ ಶುಭಕರವಾದ ಹಾಗೂ ಅಪರೂಪದ ಘಳಿಗೆ ಎಂದು ಅಂದಿನ ಜನ ಭಾವಿಸಿದ್ದರು.  

2. ಮಹಾರಾಣಿ ಲಕ್ಷ್ಮೀವಿಲಾಸ ಸನ್ನಿಧಾನ ಶ್ರೀ ಪ್ರತಾಪಕುಮಾರೀ ಅಮ್ಮಣ್ಣಿ (ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಂಡ್ತಿ): 1889 - ?

ಮೂಲ

ಜೂನ್ 6, 1900ರಲ್ಲಿ ಇವರ ಮದುವೆಯಾಯಿತು. ಅಂದಿನ ಕಾಥಿಯಾವಾಡ ಪ್ರದೇಶದ (ಇಂದಿನ ಗುಜರಾತ್) ರಾಣಾ ಶ್ರೀ ಬನೆ ಸಿನ್ಹಜಿ ಸಾಹಿಬ್ ಅವರ ಕಿರಿಯ ಮಗಳು ಈಕೆ. ಇದಕ್ಕಿಂತ ಹೆಚ್ಚಿನ ಮಾಹಿತಿ ನಮಗೆ ಸಿಕ್ಕಿಲ್ಲ.  

3. ಮಹಾರಾಣಿ ತ್ರಿಪುರ ಸುಂದರಿ ಅಮ್ಮಣ್ಣಿ (ಜಯ ಚಾಮರಾಜ ಒಡೆಯರ್ ಹೆಂಡ್ತಿ): ? - 1982 

ಮೂಲ
ಮಹಾರಾಣಿಯಾಗಿದ್ದ ಇವರು ಬಳಿಕ ಮೈಸೂರಿನ ರಾಜಮಾತೆ ಅನ್ನಿಸಿಕೊಂಡರು. ಇವರ ಮೂಲ ಮೈಸೂರು. ತಂದೆ ಬಾಲ ನಂಜರಾಜ ಅರಸ್ ಮೈಸೂರು ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ರಜಪೂತ ವಂಶಸ್ಥರ ರಾಜಕುಮಾರಿ ಚಾರ್ಕರಿ ಅವರನ್ನ ಜಯ ಚಾಮರಾಜೇಂದ್ರ ಒಡೆಯರ್ 1938ರಲ್ಲಿ ಮದುವೆಯಾಗಿದ್ದರು. ಆದ್ರೆ ಇವರಿಗೆ ಮಕ್ಕಳಾಗಲಿಲ್ಲ. ಎರಡನೇ ಮದುವೆಗೆ ಶ್ರೀಮಂತ ಮನೆತನದ, ಶಾಸ್ತ್ರ ಸಂಪ್ರದಾಯಗಳು ಗೊತ್ತಿರೋ ಕನ್ನಡದ ವಧುವನ್ನು ಮದುವೆಯಾಗಲು ನಿರ್ಧರಿಸಿದ್ರು. ಆದ್ರೆ ವಧು ಕಡೆಯವರು ಅಷ್ಟು ಬೇಗ ತಮ್ಮ ಮಗಳನ್ನು ಕೊಡಲು ಒಪ್ಪಲಿಲ್ಲ. ಜಾತಕಗಳನ್ನು ಪರಿಶೀಲಿಸಿ, ಕುಂಡಲಿಗಳನ್ನು ತಿರುವಿಹಾಕಿ ಕಡೆಗೆ ಒಪ್ಪಿದ್ರು. ಪಕ್ಕಾ ಸಂಪ್ರದಾಯದ ಪ್ರಕಾರ ಏಪ್ರಿಲ್ 30, 1944ರಲ್ಲಿ ಮದುವೆ ಮಾಡಿಕೊಟ್ರು. 

ಆ ಕಾಲದಲ್ಲೇ ನೂರಾರು ಜನ ಗಣ್ಯಾತಿಗಣ್ಯರು ಮದ್ವೆಗೆ ಬಂದಿದ್ರು. ಮೈಸೂರಿನ ಅಂಬಾ ವಿಲಾಸ ಅರಮನೆಯಲ್ಲಿ ಮದ್ವೆ ಅದ್ದೂರಿಯಾಗಿ ನಡೀತು. ಈ ದಂಪತಿಗಳಿಗೆ ಆರು ಜನ ಮಕ್ಕಳು. ಮದುವೆ ಬಳಿಕವೂ ಮಹಾರಾಜರ ಸಪತ್ನಿಯಾದ ಚಾರ್ಕರಿ ಜೊತೆಗೂ ಹೊಂದಿಕೊಂಡು ಹೋಗಿದ್ದು ಇವ್ರ ದೊಡ್ಡಗುಣ.   

4. ಮಹಾರಾಣಿ ಪ್ರಮೋದಾ ದೇವಿ (ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಹೆಂಡ್ತಿ)

ಮೂಲ

ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ 1976ರಲ್ಲಿ ಪ್ರಮೋದಾ ದೇವಿ ಅವರನ್ನು ವರಿಸಿದರು. ಮೈಸೂರಿನ ಬೆಟ್ಟದ ಕೋಟೆ ಅರಸರ ಕುಟುಂಬ ಇವರದು. ಈ ದಂಪತಿಗಳಿಗೆ ಮಕ್ಕಳಿಲ್ಲ. ಆದ್ದರಿಂದ ಯದುವೀರ್ನ ದತ್ತು ತೊಗೊಂಡ್ರು.

5. ತ್ರಿಷಿಕಾ ಕುಮಾರಿ ಸಿಂಗ್ (ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೆಂಡ್ತಿ):

ಮೂಲ

1994ರಲ್ಲಿ ಹುಟ್ಟಿದ ತ್ರಿಷಿಕಾ ರಾಜಸ್ಥಾನದ ದುಂಗಾರಪುರ ರಾಜವಂಶಸ್ಥೆ. ತಂದೆ ಹೆಸರು ಹರ್ಷವರ್ಧನ್ ಸಿಂಗ್, ತಾಯಿ ಮಹೇಶ್ವರಿ ಕುಮಾರಿ. ತಂದೆ ತಾಯಿಗೆ ಈಕೆ ಎರಡನೇ ಮಗಳಾಗಿದ್ದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಜೊತೆಗೆ ಇವರ ಮದ್ವೆ ಸೋಮವಾರ 27, 2016ರಂದು 9.5ರಿಂದ 9.35ರ ಶುಭ ಘಳಿಗೆಯಲ್ಲಿ ಅದ್ದೂರಿಯಾಗಿ ನೆರವೇರಿತು. 

ಮೂಲ

ಒಂದು ವರ್ಷದ ಹಿಂದೆಯೇ ಇವರಿಬ್ಬರ ನಿಶ್ಚಿತಾರ್ಥವಾಗಿತ್ತು. 27.6.2016ರ ಬೆಳಗ್ಗೆ 6.30ರಿಂದಲೇ ಮದನ ವಿಲಾಸ ಬಾಗಿಲಿನಿಂದ ದಿಬ್ಬಣ ಪಯಣ, ಆನೆ ಬಾಗಿನಲ್ಲಿ ಭತ್ತ ಮತ್ತು ಅವರೆಕಾಳಿನಿಂದ ವರನ ಸ್ವಾಗತ. ಸವಾರ್ ತೊಟ್ಟಿಯಲ್ಲಿ ವರನನ್ನು ಪೂರ್ವಾಭಿಮುಖವಾಗಿ ನಿಲ್ಲಿಸಿ ವಧುವಿನ ಕಡೆಯವರಿಂದ ಆರತಿ ಮಾಡಲಾಯಿತು. ಈ ಸಂಪ್ರದಾಯಗಳು ಈಗ ಎಷ್ಟು ಜನಕ್ಕೆ ಗೊತ್ತೋ ಏನೋ?

ಮೂಲ

ಆ ಬಳಿಕ ವಧುವಿನ ಮನೆಯಲ್ಲಿ ಗೌರಿ ಪೂಜೆ ನಡೆಯಿತು. 7 ಗಂಟೆಗೆ ವರನನ್ನು ಕಳ್ಯಾಣ ಮಂಟಪಕ್ಕೆ ಕರೆತರಲಾಯಿತು. ಶ್ರೀಗಣಪತಿ ಪೂಜೆ, ಬೃಹಸ್ಪತಿ ಪೂಜೆ, ಕನ್ಯಾಪ್ರತಿಗ್ರಹ ಪೂಜೆಗಳು ನಡೆದವು. 

ಮೂಲ

ಕನ್ಯಾ ನಿರೀಕ್ಷಣೆ, ಮಹಾಸಂಕಲ್ಪ, ಗೋತ್ರ ಪ್ರವರ, ಕನ್ಯಾದಾನ, ಅಕ್ಷತಾರೋಪಣೆ, ಸಂಬಂಧ ಮಾಲೆ, ಕಂಕಣ ಧಾರಣೆ, ದಾಕ್ಷಾಯಣ ಪೂಜೆ, ಮಾಂಗಲ್ಯ ಧಾರಣೆ, ಅಗ್ನಿಮುಖ ಲಾಜಾ ಹೋಮ, ಆರತಿ, ಶ್ರೀಮಠಗಳ ಫಲಮಂತ್ರಾಕ್ಷತೆ, ದೇವಾಲಯಗಳ ಪ್ರಸಾದ ಸಮರ್ಪಣೆ ನಡೀತು. 

ಮೂಲ

ಇವರಿಬ್ಬರ ಮದುವೆ ರಿಸೆಪ್ಷನ್ಗೆ ಈಗಿನ ಸ್ಟೈಲಲ್ಲಿ ಒಂದು ಕರೆಯೋಲೆ ಮಾಡ್ಸಿದಾರೆ, ಇಲ್ಲಿದೆ ನೋಡಿ:

ಮೈಸೂರು ಒಡೆಯರ ಹೆಂಡ್ತೀರ ಬಗ್ಗೆ ನಿಮಗೆ ಏನಾದ್ರೂ ಇನ್ನೂ ಹೆಚ್ಚಿನ ಮಾಹಿತಿ ಗೊತ್ತಿದ್ರೆ ದಯವಿಟ್ಟು ಕಾಮೆಂಟ್ ಬಾಕ್ಸಲ್ಲಿ ಹಾಕಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಕಷ್ಟ ಬಂದಾಗ ಈ 12 ಸತ್ಯಗಳ್ನ ನೆನಪಿಸಿಕೊಂಡರೆ ಇನ್ನಷ್ಟು ಗಟ್ಟಿಯಾಗಿ ಹೊರಬರ್ತೀರಿ

ಸೋಲು ಗೆಲುವು ಎಲ್ಲಕ್ಕೂ ಮನಸ್ಸೇ ಕಾರಣ

ಕಷ್ಟ ಅನ್ನೋದ್ ಎಲ್ಲಾರ್ಗೂ ಬಂದೇ ಬರತ್ತೆ. ಒಂದೊಂದ್ಸಲ ಯಾವಾಗ್ ಮುಗ್ಯತ್ತಪ್ಪ ಅನ್ನೋ ಅಷ್ಟು ಕಷ್ಟಗಳು ಬರತ್ತೆ. 

ಆದ್ರೆ ನಮಗೆ ನಾವೇ ಈ 12 ಸತ್ಯಗಳ್ನ ಹೇಳ್ಕೊಂಡ್ ಸಮಾಧಾನ ಮಾಡ್ಕೊಂಡ್ರೆ ಕಷ್ಟಾನ ಎದುರಿಸೋ ಧೈರ್ಯ ಬರತ್ತೆ.

1. ಗೆಲ್ಲೋದಕ್ಕೆ ಸೋಲೋದಕ್ಕೆ ಎರಡಕ್ಕೂ ನಮ್ಮ ಮನಸ್ಸೇ ಕಾರಣ

ನಾವ್ ಮನಸ್ಸಿನಲ್ಲಿ ಏನ್ ಯೋಚ್ನೆ ಮಾಡ್ತೀವೋ ಅದೇ ತರ ನಡ್ಕೊಳ್ತೀವಿ. ನಮಗೆ ಅದೇ ತರ ಸಂದರ್ಭಗಳು ಒದಗಿ ಬರತ್ತೆ.

ನಾವು ಒಳ್ಳೇದನ್ನ ಯೋಚ್ನೆ ಮಾಡ್ತಾ, ಒಳ್ಳೇ ಕೆಲ್ಸಾನೇ ಯಾವಾಗ್ಲೂ ಮಾಡ್ತಾ ಇದ್ರೆ, ಮನಸ್ಸೂ ಒಳ್ಳೇದಾಗಿರತ್ತೆ. 

2. ನೋವು ಬರತ್ತೆ ಹಾಗೆ ಹೋಗತ್ತೆ

ಎಲ್ಲಾರ್ ಬದುಕಲ್ಲೂ ಒಂದಲ್ಲ ಒಂದು ತೊಂದ್ರೆ ಇದ್ದೇ ಇರತ್ತೆ, ಮನಸ್ಸಿಗೆ ನೋವು ತರೋ ಸಂದರ್ಭನೂ ಇದ್ದಿದ್ದೇ. ಇವೆಲ್ಲ ನಮ್ಮನ್ನ ಇನ್ನೂ ಗಟ್ಟಿ ಆಗ್ಸತ್ತೆ. ಕುಗ್ಗಕ್ಕೆ ಅವಕಾಶ ಕೊಡ್ಬಾರ್ದು ಅಷ್ಟೆ.

3. ಯೋಚ್ನೆ ಮಾಡೋದ್ರಿಂದ ಯಾವ ಸಮಸ್ಯೆನೂ ಪರಿಹಾರ ಆಗಲ್ಲ

ಯೋಚ್ನೆ ಮಾಡೋದ್ರಿಂದ ಯಾವ್ದೂ ಸರಿ ಹೋಗಲ್ಲ. ಅದ್ರಿಂದ ಮನಸ್ಸಿಗೆ ಮತ್ತೆ ದೇಹಕ್ಕೆ ಒತ್ತಡ ಜಾಸ್ತಿ ಆಗತ್ತೆ ಅಷ್ತೇ

4. ಕಷ್ಟ ಎದುರಿಸಕ್ಕೆ ಭಯಪಟ್ರೆ ಮುಂದೆ ಹೋಗಕ್ಕೆ ಆಗಲ್ಲ

ಕಷ್ಟ ಬಂತು ಅಂತ ಭಯದಿಂದ ಮನಸ್ಸು ಮುದುಡಿಕೊಂಡು ಕೂತ್ಕೋಂಡ್ರೆ ಯಾವ ಕೆಲ್ಸನೂ ಆಗಲ್ಲ.  ಹಿಂದೇನೆ ಉಳೀತೀವಿ.

ನಿಮಗೆ ಬೇಕಾಗಿರೋದೆಲ್ಲಾ ಭಯದ ಇನ್ನೊಂದು ಕಡೆ ಇದೆ. ಧೈರ್ಯವಾಗಿ ಮುನ್ನುಗ್ಗಿ ಗುರಿ ಸಾಧಿಸಿ.

5. ಅನುಭವಾನೇ ಇಲ್ದಿದ್ರೆ ಯಾವ್ದೇ ಪಾಠಾನೂ ಇರಲ್ಲ

ನಾವು ತುಂಬಾ ದ್ವೇಷ ಮಾಡೋಂಥ, ಮತ್ತೆ ನಮಗೆ ಬೇಡದೇ ಇರೋ ಅನುಭವಗಳೇ ನಮ್ಮನ್ನ ಗಟ್ಟಿಯಾಗಿ ನಿಲ್ಲೋಹಂಗೆ ಮಾಡೋದು.

6. ಪ್ರಯತ್ನಪಡದೆ ಯಾವ್ದೂ ಬದಲಾಗಲ್ಲ

ಬದಲಾವಣೆ ಅನ್ನೋದು ಏನಾದ್ರೂ ಮಾಡೋದಿಕ್ಕೆ ಸಂಬಂಧಿಸಿದ್ದು. ಸುಮ್ಮನೆ ಇರೋಕಲ್ಲ. ಯಾವುದೇ ವಿಚಾರಾನ ಬದಲಾಯಿಸಕ್ಕೆ ಪ್ರಯತ್ನ ಪಡ್ದೇ ಇದ್ರೆ ಏನೂ ಬದಲಾಗೋದೇ ಇಲ್ಲ.

7. ಆಗೋಗಿರೊದನ್ನ ಬದಲಾಯ್ಸಕ್ಕೂ ಆಗಲ್ಲ

ಆಗೋಗಿದ್ದು ಹಿಂದೆ ಸರಿದಿದ್ದು ಆಯ್ತು. ಅದನ್ನ ಬದಲಾಯ್ಸಕ್ಕೆ ಬ್ರಹ್ಮನಿಂದ್ಲೂ ಆಗಲ್ಲ

8. ರಾತ್ರೋರಾತ್ರಿ ಯಾವ್ದೇ ಕೆಲ್ಸ ಮುಗ್ಸಕ್ಕಾಗಲ್ಲ

ಯಾವ್ದೇ ಕೆಲ್ಸಾನೂ ಒಂದ್ ನಿಮಿಷದಲ್ಲಿ, ಒಂದ್ ದಿನದಲ್ಲಿ ಆಗೋದಿಲ್ಲ. ಸರಿಯಾಗಿ ಮಾಡ್ಬೇಕೂಂದ್ರೆ ಸಮಯ ಬೇಕು. ತಾಳ್ಮೆ ಇರ್ಬೇಕು. ದೊಡ್ಡ ದೊಡ್ಡ ಕನಸುಗಳನ್ನ ಸಾಧಿ ತೋರ್ಸ್ಬೇಕಾದ್ರೆ ಗುರಿ ಅಷ್ಟೆ ಅಲ್ಲ ಅದರ ಕಡೆ ಹೆಜ್ಜೆ ಹೆಜ್ಜೆನೂ ಮೆಲುಕು ಹಾಕ್ತ ಸರಿಯಾದ ದಾರೀಲಿ ನಡಿತಾ ಇದ್ದೀರಾ ಅಂತ ವಿಮರ್ಶೆ ಮಾಡೊ ಛಲ ಇರಲಿ. ಅತುರದಲ್ಲಿ ಮುಗ್ಸಕ್ಕೆ ಹೋಗಿ ಕೈ ಸುಟ್ಕೋಳೋದು ಸರಿಯಲ್ಲ.

9. ಎಲ್ಲಾ ಕೆಟ್ಟದ್ರಲ್ಲೂ ಒಳ್ಳೇದೇನೋ ಒಂದ್ ಇರತ್ತೆ

ಬರೀ ಕೆಟ್ಟದಾಗ್ತಾ ಇದೆ ಅಂತ ಆ ಟೈಮಲ್ಲಿ ಆಗೊ ಒಳ್ಳೇದನ್ನ ಗಮನ್ಸೋದೇ ಇಲ್ಲ ನಾವು. ಆದ್ರೆ, ಎಷ್ಟೇ ಕೆಟ್ಟದಾಗ್ತಾ ಇದ್ರೂ ಏನೋ ಒಂದ್ ಒಳ್ಳೇದ್ ಇದ್ದೇ ಇರತ್ತೆ.

10. ಸೋಲು ಗೆಲ್ಲೋದಿಕ್ಕೆ ಒಂದ್ ಮೆಟ್ಟಿಲು ಅಷ್ಟೇ

ಸೋತೋದೆ ಅಂತ ಆಕಾಶ ಏನೂ ತಲೆ ಮೇಲೆ ಬೀಳಲ್ಲ. ಸೋಲು ಅನ್ನೋದ್ ಗೆಲ್ಲಕ್ಕೆ ಒಂದೊಂದೇ ಮೆಟ್ಟಿಲು.

11. ಬಂದಿರೋ ಕಷ್ಟನ ಎದುರಿಸಕ್ಕೆ ನನ್ನ ಕೈಲಿ ಆಗತ್ತೆ

ಯಾರೋ ಏನೋ ಮಾಡಿದ್ರೂ ಅಂದ್ರೆ ಅದೆಲ್ಲಾ ನಮಗೂ ಆಗ್ಬೇಕೂಂತ ಏನೂ ಇಲ್ಲ. ಐದು ಬೆರೆಳೂ ಸಮ ಇರಲ್ಲ; ಹಾಗೆ ಇದೂನು. ಅವರಿವರಿಗೆ ಹೋಲಿಸಿಕೊಂಡ್ರೆ ನಿಮಗೆ ನೀವು ಅವಮಾನ ಮಾಡ್ಕೊಂಡ್ ಹಾಗೆ.

12. ಯಾರೂ ಒಂಟಿ ಅಲ್ಲ

ಈ ಪ್ರಪಂಚ್ದಲ್ಲಿ ಯಾರೂ ಒಂಟಿ ಅಲ್ಲ. ಏನೇನೆ ಅಡ್ಡಿ ಆತಂಕ ಬಂದ್ರೂ ಯಾರ್ದಾದ್ರೂ ಸಹಾಯ ಸಿಕ್ಕೇ ಸಿಗತ್ತೆ. ಎಲ್ಲಾರ್ಗೂ ಅವರವರ್ ಕಷ್ಟ ಇರತ್ತೆ. ಅದನ್ನ ಗೆದ್ದು ಬರೋ ದಾರಿ ನೋಡ್ಕೋಬೇಕು ಅಷ್ಟೇ.

ನೀವು ಎದುರಿಸ್ತಾ ಇರೋ ಸಂಕಷ್ಟ ಯಾವ್ದೇ ಇರ್ಲಿ – ಈ 12 ಸತ್ಯಗಳ್ನ ಹೇಳ್ಕೊಳಿ. ಮುನ್ನಗ್ಗಕ್ಕೆ ಧೈರ್ಯ ಬಂದೇ ಬರತ್ತೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: