ಸಾಯೋ ಮುಂಚೆ ಸ್ಟೀವ್ ಜಾಬ್ಸ್ ಹೇಳಿದ ಈ ಕಟ್ಟಕಡೆಯ ಮಾತು ನಿಮಗೆ ಉಪಯೋಗಕ್ಕೆ ಬರುತ್ತೆ

ಜಗತ್ತಿನಲ್ಲೇ ಅತ್ಯಂತ ದುಬಾರಿ ಹಾಸಿಗೆ ಮೇಲೆ ಮಲಗಿದ್ದಾಗ

ಸ್ಟೀವ್ ಜಾಬ್ಸ್

Apple ಸಂಸ್ಥೆಯ ಹುಟ್ಟುಹಾಕಿದ ಸ್ಟೀವ್ ಜಾಬ್ಸ್ ಅವರ ಸಾಧನೆ-ಸಂಪತ್ತು ನೋಡಿ "ಅಬ್ಬಾ, ಈ ಮನುಷ್ಯ ಯಶಸ್ಸಿಗೆ ಇನ್ನೊಂದು ಹೆಸರು" ಅನ್ನುವಷ್ಟರ ಮಟ್ಟಿಗೆ ಕೊಂಡಾಡುವವರಿದ್ದಾರೆ. ಆದರೆ ತಮ್ಮ ಕೊನೆಯ ದಿನಗಳಲ್ಲಿ ಜಾಬ್ಸ್ ಅವರ ಮನದಾಳದ ಮಾತು ಬಿಸಿನೆಸ್, ದುಡಿಮೆ, ಆಸ್ತಿ, ಸಂಪತ್ತು ಇವುಗಳಿಗಿಂತ ಬೇರೆಯೇ ಆಗಿತ್ತು. ಸಾವಿನಂಚಿನಲ್ಲಿ ನಿಂತ ಸ್ಟೀವ್ ಜಾಬ್ಸ್ ಆಡಿದ ಮಾತುಗಳನ್ನು ನಿಜೆಲ್ ಡಂಕನ್ ಸ್ಮಿತ್ ಎನ್ನುವವರು ಫ಼ೇಸ್ಬುಕ್ಕಿನಲ್ಲಿ ಹಂಚಿಕೊಂಡರು. ಅದನ್ನು ಓದಿದಾಗ ಜಗತ್ತನ್ನೇ ಬೆರಗಾಗಿಸಿದ ಒಬ್ಬ ಸಾಧಕನ ಮನದಲ್ಲಿ ಏನಿತ್ತು ಅನ್ನುವುದು ತಿಳಿಯುತ್ತದೆ. ಮುಂದೆ ಓದಿ:

"ನಾನು ನನ್ನ ಬಿಸಿನೆಸ್ಸಿನಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದ್ದೇನೆ. ಜಗತ್ತಿನ ಕಣ್ಣಿಗೆ ನನ್ನ ಜೀವನವು ಒಂದು ಯಶಸ್ಸಿನ ಯಶೋಗಾಥೆಯಂತೆ ಕಾಣುತ್ತದೆ. ಆದರೆ, ನನ್ನ ಉದ್ಯೋಗದ ಪರಿಮಿತಿಯ ಹೊರಗೆ ನನ್ನ ಬಾಳಿನಲ್ಲಿ ಅಷ್ಟೇನೂ ನಲಿವಿಲ್ಲ. ಕೊನೆಗೆ, ನನ್ನ ಸಂಪತ್ತಿನೊಂದಿಗೇ ನನ್ನ ಜೀವನವನ್ನು ಗುರುತಿಸಿಕೊಳ್ಳುವುದು ರೂಡಿಯಾಗಿಹೋಗಿದೆ. ನನ್ನ ಜೀವನದ ಕೊನೆಯ ಕ್ಷಣಗಳನ್ನು ಆಸ್ಪತ್ರೆಯ ಹಾಸಿಗೆಯ ಮೇಲೆ ಕಳೆಯುತ್ತಿರುವ ನನಗೆ, ನನ್ನ ಬಾಳಿನುದ್ದಕ್ಕೂ ನಾನು ಯಾವುದನ್ನು ಸಂಪತ್ತು, ಸಾಧನೆಯೆಂದುಕೊಂಡು ಬೀಗುತ್ತಿದ್ದೆನೋ, ಅವೆಲ್ಲಾ ಏನೂ ಅಲ್ಲವೇನೋ ಅನ್ನಿಸುತ್ತಿದೆ."

ಮೂಲ

"ಈ ಕತ್ತಲ ಹೊತ್ತಿನಲ್ಲಿ, ಕೃತಕ ಉಸಿರಾಟದ ಈ ಮಶೀನುಗಳಿಂದ ಬರೋ ಹಸಿರು ದೀಪ ಮತ್ತು ಗುಂಯ್‍ಗುಟ್ಟುವ ಸದ್ದಿನಿಂದ, ನನಗೆ ನನ್ನ ಸಾವು ನನ್ನನ್ನು ಆವರಿಸಿಕೊಳ್ಳುತ್ತಿರುವುದು ಕಾಣುತ್ತಿದೆ. ನನಗೀಗನ್ನಿಸುತ್ತಿದೆ, ಒಬ್ಬ ಮನುಷ್ಯ ಒಮ್ಮೆ ಜೀವನಕ್ಕೆಲ್ಲಾ ಆಗುವಷ್ಟು ದುಡ್ಡು ದುಡಿದಿಟ್ಟುಕೊಂಡ ಮೇಲೆ, ಹಣದ ಸಂಪಾದನೆಗೂ ಮೀರಿದ ಸಾಧನೆಗೆ ಇಳಿಯಬೇಕು. ಹಣಕ್ಕಿಂತ ತುಂಬಾ ಮುಖ್ಯವಾದುದಾಗಿರಬೇಕು ಆ ಸಾಧನೆ: ಉದಾಹರಣೆಗೆ, ಪ್ರೇಮ ಕಥೆಗಳು, ಕಲೆ, ಬಾಲ್ಯದ ಕನಸುಗಳನ್ನು ಮೆಲುಕು ಹಾಕುವುದು."

ಮೂಲ

"ಕೇವಲ ಹಣದ ಸಂಪಾದನೆಯ ಹಿಂದೆ ಬೀಳಬೇಡಿ. ಅದರಿಂದ ನೀವೂ ನನ್ನಂತೆ ಕೆಲಸಕ್ಕೆ ಬಾರದವರಂತೆ ಆಗುತ್ತೀರಿ. ದೇವರು ನಮ್ಮೆಲ್ಲರನ್ನೂ ಯಾವುದೋ ಒಂದು ಬಗೆಯಲ್ಲಿ ಮಾಡಿದ್ದಾನೆ. ನಾವು ಒಬ್ಬರೆದೆಯಲ್ಲಿನ್ನೊಬ್ಬರು ಒಲವನ್ನು ಕಾಣಬಹುದೇ ಹೊರೆತು ನಾನು ಮಾಡಿದಂತೆ ಹೆಸರು, ದುಡ್ಡು ಇವುಗಳಿಂದ ಯಾರದೇ ಮನಸಿನಲ್ಲೂ ನೆಲೆಸಲು ಆಗುವುದಿಲ್ಲ. ಆ ಸಂಪತ್ತನ್ನು ನಾನು ಹೋಗುವಾಗ ನನ್ನೊಡನೆ ಕೊಂಡುಹೋಗಲೂ ಆಗದು. ನಾನು ನನ್ನೊಂದಿಗೇನಾದರೂ ಕೊಂಡುಹೋದರೆ ಅದು ಕೇವಲ ಒಲವಿನಿಂದ ಬೆಸೆದ ನೆನಪುಗಳನ್ನು ಮಾತ್ರ. ನಮ್ಮನ್ನು ಹಿಂಬಾಲಿಸುವ ಸಂಪತ್ತೂ ಅದೇ... ನಮ್ಮೊಡನೆ ಸದಾ ಇರುವಂಥದ್ದು, ನಮಗೆ ಶಕ್ತಿ ತುಂಬುವಂಥದ್ದು... ದಾರಿ ದೀಪವಾಗುವಂಥದ್ದು."

ಮೂಲ

"ಪ್ರೇಮವೆನ್ನುವುದು ಸಾವಿರಾರು ಮೈಲಿ ಸಾಗಬಲ್ಲದು, ಬಾಳಲ್ಲಿ ಪ್ರೇಮವನ್ನು ತುಂಬಿಕೊಂಡಾಗ ಬಂಧನಗಳಿಂದ ಮುಕ್ತಿ ಸಿಗುತ್ತದೆ. ನಿಮಗೆ ಹೋಗಬೇಕೆನಿಸಿದಲ್ಲಿ ಹೋಗಿ. ನೀವು ಸಾಧಿಸಬೇಕೆನಿಸಿದ್ದನ್ನು ಸಾಧಿಸಿ. ಎಲ್ಲವೂ ನಿಮ್ಮೊಳಗೇ ಇದೆ... ನಿಮ್ಮ ಕೈಯ್ಯಲ್ಲೇ ಇದೆ."

ಮೂಲ

"ಈ ಜಗತ್ತಿನಲ್ಲೇ ಅತ್ಯಂತ ದುಬಾರಿ ಹಾಸಿಗೆ ಯಾವುದು ಗೊತ್ತೇ? ಅದು ಆಸ್ಪತ್ರೆಯ ಹಾಸಿಗೆ. ನಿಮ್ಮ ಬಳಿ ಹಣವಿದ್ದರೆ ಅದರಿಂದ ನಿಮ್ಮ ಕಾರಿಗೆ ಒಬ್ಬ ಡ್ರೈವರನ್ನು ನೇಮಿಸಬಹುದು, ಆದರೆ ನಿಮ್ಮ ಅನಾರೋಗ್ಯವನ್ನು ಎರವಲು ಪಡೆಯಲು ಯಾರಾದರೂ ಮುಂದೆ ಬರುತ್ತಾರೆಯೆ? ವಸ್ತುಗಳು ಒಮ್ಮೆ ಕಳೆದು ಹೋದರೆ ಮತ್ತೆ ಪಡೆದುಕೊಳ್ಳಬಹುದು. ಆದರೆ ಒಮ್ಮೆ ಕಳೆದುಕೊಂಡರೆ ಹಿಂಪಡೆಯಲಾಗದ್ದು ಯಾವುದಾದರೂ ಇದ್ದರೆ ಅದು "ಜೀವನ" ಮಾತ್ರ."

ಮೂಲ

"ನಾವು ಈಗ ಜೀವನದ ಯಾವುದೇ ಘಟ್ಟದಲ್ಲಿದ್ದರೂ ಮುಂದೊಂದು ದಿನ ತೆರೆಯು ಮುಚ್ಚಿ ಆಟ ಮುಗಿಯುವ ದಿನವನ್ನು ಎದುರಿಸಲೇಬೇಕು. ನಿಮ್ಮ ಮನೆಯವರ ಪ್ರೀತಿ, ಗಂಡ/ಹೆಂಡತಿಯ ಪ್ರೀತಿ, ಗೆಳೆಯರ ಪ್ರೀತಿ ಇವೆಲ್ಲವೂ ಅಮೂಲ್ಯವಾದುವು. ಅವನ್ನು ಕಾಪಾಡಿಕೊಳ್ಳಿ. ಎಲ್ಲರೊಡನೆ ಸಜ್ಜನಿಕೆಯಿಂದ ನಡೆದುಕೊಳ್ಳಿ, ನಿಮ್ಮ ಸುತ್ತಲ ಜನರೊಂದಿಗೆ ಒಳ್ಳೆಯ ಸಂಬಂಧವಿರಲಿ."

ಮೂಲ

ಎಂಥಾ ಮಹಾನುಭಾವಿಯ ಮಾತುಗಳು! ಎಲ್ಲರ ಜೀವನದಲ್ಲೂ ಇದು ಉಪಯೋಗಕ್ಕೆ ಬರುತ್ತೆ ಅಂತ ನಮ್ಮ ಅನಿಸಿಕೆ... ಏನಂತೀರಿ?

ಮಾಹಿತಿ: ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ವಿಜ್ಞಾನದ ಪ್ರಕಾರ ಚಂದ್ರ ಇಲ್ಲದೆ ಹೋದರೆ ಭೂಮಿಗೆ ಏನಾಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯೋಚನೇನೂ ಮಾಡಕ್ಕಾಗಲ್ಲ

ನಮ್ಮ ಭೂಮಿಗೆ ತುಂಬಾ ಹತ್ತಿರದವನು ಚಂದ್ರ. ಭೂಮಿ ಮೇಲಿರೋ ಎಲ್ಲಾ ಜೀವಿಗಳ ವಿಕಾಸಕ್ಕೆ ಸಹಾಯ ಮಾಡಿರೋದು ಮಾತ್ರ ಅಲ್ಲ, ನಮ್ಮ ಭೂಮಿ ಸರಿಯಾಗಿ ವಿಕಾಸ ಆಗಕ್ಕೂ ಸಹಾಯ ಮಾಡಿದಾನೆ ಅಂತಾರೆ. ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಮಂಗಳ ಗ್ರಹದಷ್ಟು ದೊಡ್ಡದಾಗಿರೋ ಒಂದು ಗ್ರಹದ್ ಚೂರು ನಮ್ಮ ಭೂಮಿಗೆ ಬಡೀತಂತೆ. ಆಗ ಹುಟ್ಟಿದೋನೇ ಚಂದ್ರ. ಭೂಮಿಯಿಂದ ಬೇರೆ ಆದ್ರೂ ಅದಿಕ್ಕೆ ಅಂಟ್ಕೊಂಡೇ ಅವತ್ತಿಂದ ಸುತ್ತಾ ಇದಾನೆ.

ಅದೇನೋ ಸರಿ; ಇವನೇನಾದ್ರೂ ಇಲ್ದೇ ಹೋದ್ರೆ ಏನಾಗತ್ತೆ? ಈ ಕೆಳಗಿನ ಐದು ಅಂಶ ಅಂತೂ ಗ್ಯಾರಂಟಿ ಅನ್ನತ್ತೆ ವಿಜ್ಞಾನ. ನೀವೇ ನೋಡಿ...

1. ರಾತ್ರಿ ಕತ್ಲೋ ಕತ್ತಲು!

ಚಂದ್ರ ಇಲ್ದೇ ಇದ್ರೆ ರಾತ್ರಿ ಕತ್ಲು ಸಿಕ್ಕಾಪಟ್ಟೆ ಜಾಸ್ತಿ ಆಗತ್ತೆ. ಚಂದ್ರ ಬಿಟ್ರೆ ದೊಡ್ಡದಾಗಿ ಕಾಣೋದು ಶುಕ್ರ. ಆದ್ರೆ ಶುಕ್ರನ್ ಬೆಳಕು ಕತ್ಲೆ ಹೋಗ್ಸಲ್ಲ. ಶುಕ್ರ ತುಂಬಾ ದೊಡ್ಡದಾಗಿ ಕಾಣ್ವಾಗ ಇರೋದಕ್ಕಿಂತ ಪೂರ್ಣಚಂದ್ರ 2000 ಪಟ್ಟು ದೊಡ್ಡದಾಗಿ ಕಾಣ್ತಾನೆ.

2. ವರ್ಷದಲ್ಲಿ 1,100-1,400 ದಿನ, ದಿನಕ್ಕೆ 6 - 8 ಗಂಟೆ ಆಗೋಗತ್ತೆ

ಯಾಕಂದ್ರೆ ಭೂಮಿ ತಿರುಗೋದಿಕ್ಕೆ ಚಂದ್ರ ಒಂಥರಾ ಬ್ರೇಕ್ ಹಾಕಿದಾನೆ. ಅವನ ಗುರುತ್ವಾಕರ್ಷಣೆಯಿಂದ ಭೂಮಿ ಸ್ಪೀಡು ಕಮ್ಮಿ ಆಗಿದೆ. ಈ ಬ್ರೇಕ್ ಇಲ್ದೇ ಇದ್ರೆ ಭೂಮಿ ಇನ್ನೂ ತುಂಬಾ ವೇಗವಾಗಿ ತಿರುಗ್ತಾ ಇತ್ತು. ಕಣ್ಮುಚ್ಚಿ ಕಣ್ ತೆಗೆಯೋದ್ರಲ್ಲಿ ಒಂದು ದಿನ ಮುಗಿಯತ್ತೇನೋ, ಚಂದ್ರ ಇಲ್ದಿದ್ರೆ

3. ಸಮುದ್ರದಲ್ಲಿ ಅಲೆಗಳು ಏಳಲ್ಲ

ಸೂರ್ಯ ಭೂಮಿಗಿಂತ 400 ಪಟ್ಟು ದೊಡ್ಡದು, ಸುಮಾರು 400 ಪಟ್ಟು ದೂರಾನೂ ಇದೆ. ಅದಕ್ಕೆ ಇವೆರಡೂ ಭೂಮಿಯಿಂದ ಒಂದೇ ಗಾತ್ರ ಇರೋ ಹಾಗೆ ಕಾಣೋದು. ಸೂರ್ಯ ಚಂದ್ರಂಗಿಂತ 27 ಮಿಲಿಯನ್ ಪಟ್ಟು ದೊಡ್ಡದಾಗಿದೆ. ಹಾಗಂತ ಚಂದ್ರ ಇಲ್ದೆ ಹೋದ್ರೆ ಸಮುದ್ರದಲ್ಲಿ ಏಳೋ ಅಲೆ ಇನ್ನೂ ದೊಡ್ದ ಗಾತ್ರದ್ದಿರತ್ತೆ ಅಂತ ಅನ್ಕೊಂಡ್ರೆ ತಪ್ಪು. ಸೂರ್ಯನಿಂದ ಉಂಟಾಗೋ ಅಲೆಗೆ ಚಂದ್ರನ ಅಲೆಯ 40% ಶಕ್ತಿ ಮಾತ್ರಾನೇ ಇರೋದು. ಈಗ ಉಕ್ಕೋ ಎತ್ರಕ್ಕಿಂದ ಕಾಲು ಭಾಗ ಉಕ್ಕತ್ತೇನೋ ಅಷ್ಟೇ.

4. ಗ್ರಹಣಗಳೇ ಆಗಲ್ಲ

ಚಂದ್ರಗ್ರಹಣಾನೂ ಇಲ್ಲ; ಸೂರ್ಯಗ್ರಹಣಾನೂ ಇಲ್ಲ – ಸೂರ್ಯ ಮತ್ತೆ ಭೂಮಿ ಮಧ್ಯ ಯಾರೂ ಬರಲ್ವಲ್ಲ ಆಗ. ಚಂದ್ರ ಬಿಟ್ರೆ ಭೂಮಿ ಮತ್ತೆ ಸೂರ್ಯನ ಮಧ್ಯೆ ಹಾಯೋದು ಶುಕ್ರಗ್ರಹ ಮಾತ್ರ. ಅಂದ್ರೆ ಶುಕ್ರಗ್ರಹಣ! ಅದ್ಯಾವಾಗಾಗತ್ತೋ ಯಾರ್ ಬಲ್ರು?

5. ಪರಿಸರದಲ್ಲಿ ಏನೇನೋ ಏರುಪೇರುಗಳಾಗುತ್ತವೆ

ಚಂದ್ರ ಭೂಮಿನ ಹಿಡ್ಕೊಂಡಿದಾನೋ, ಅಥವಾ ಭೂಮಿ ಚಂದ್ರನ್ನ ಹಿಡ್ಕೊಂಡಿದ್ಯೋ! ಅಂತೂ ಇವೆರಡೂ ಒಂದನ್ನೊಂದು ಕಂಟ್ರೋಲ್  ಮಾಡ್ತಿವೆ. ಆದ್ರೆ ಚಂದ್ರ ಇಲ್ದೇ ಇದ್ರೆ ಭೂಮಿ ಅಕ್ಷರೇಖೆ ಆಗ್ಗಾಗ್ಗ ವಿಪರೀತವಾಗಿ ಅಚಾನಕ ಬದಲಾಗಿ ಬಿಡತ್ತೆ. ಈಗ ಚಂದ್ರನ ಪ್ರಭಾವದಿಂದ ಸರಿಯಾಗಿ 23.5 ಡಿಗ್ರೀನಲ್ಲೇ ತಿರುಗ್ತಾ ಇದೆ. ಚಂದ್ರ ಏನಾರ ಇಲ್ಲಾ ಅಂದ್ರೆ ಭೂಮಿ ತುಂಬಾ ತಿರಗ್ ಬಹುದು ಅಥವಾ ತಿರಗ್ದೇ ನೆಟ್ಟಗೆ ಇರಬಹುದು. ಆಗ ಋತುಗಳೇ ಇಲ್ದೇ ಹೋಗಬಹುದು; ಅಥವಾ ವಿಚಿತ್ರ ಅನ್ನೋ ತರ ಋತುಗಳು ಬರಬಹುದು. ನಾವು ಬುಧಗ್ರಹದ್ ತರ ಸಮತಟ್ಟಾಗಿ ಸುತ್ತಾ ಇರ್ತೀವಿ ಅಥವಾ ಯುರೇನಸ್ ತರ ಚಿತ್ರವಿಚಿತ್ರ ವಾತಾವರಣದಲ್ಲಿ ಬಿದ್ದು ಹೊರಳಾಡ್ತಿರ್ತೀವಿ!!

ಅದಕ್ಕೇ ಹೇಳೋದು, ಭೂಮಿಗೂ ಸೂರ್ಯಂಗೂ ಮಧ್ಯ ಏನೇನೇ ಬಂದ್ರೂ, ಭೂಮಿಗೂ ಚಂದ್ರಂಗೂ ಮಧ್ಯ ಏನೂ ಬರೋದಿಲ್ಲ ಅಂತ. ಅಂತ ಅಪೂರ್ವವಾದ ಸಂಬಂಧ ಭೂಮಿ-ಚಂದ್ರಂದು. ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: