ಪ್ರಪಂಚದ ಈ 16 ವಿಚಿತ್ರ ಕಸುಬುಗಳಲ್ಲಿ ನೀವು ಯಾವುದು ಮಾಡಕ್ಕೆ ಇಷ್ಟ ಪಡ್ತೀರಿ?

ಕೆಲಸ ಮಾಡ್ತೀನಿ ಅನ್ನೋರಿಗೆ ಎಷ್ಟು ಬೇಕಾದರೂ ದಾರಿ ಇದೆ

ವಿಚಿತ್ರ ಕೆಲಸಗಳು

’ದೊಡ್ಡೋನಾ(ಳಾ)ದಮೇಲೆ ಏನ್ ಮಾಡ್ತೀಯಾ...?’ ಅಂತ ಕೇಳಿಸಿಕೊಂಡಿರ್ತೀರಿ. ಹೌದು ತಾನೆ? ಆಗ ನೀವು ಡಾಕ್ಟರ್ರೋ ಇಂಜಿನಿಯರ್ರೋ ಅಥವಾ ಲಾಯರ್ರೋ ಮತ್ತೊಂದೋ ಆಗ್ತೀನಿ ಅಂತ ಹೇಳಿರ್ತೀರಿ. ಆದರೆ ಈಗೀಗ ಪ್ರಪಂಚದಲ್ಲಿ ಬೇರೆಬೇರೆ ಕಡೆ ಮಾಡ್ತಿರೋ ಕೆಲಸಗಳ ಬಗ್ಗೆ ನಿಮಗೆ ಗೊತ್ತಿರಲಿಕ್ಕಿಲ್ಲ. ಒಂದಕ್ಕಿಂತ ಇನ್ನೊಂದು ವಿಚಿತ್ರ ಅನ್ನಿಸೋ ಕಸುಬುಗಳು ಇಲ್ಲಿವೆ, ನೀವೇ ನೋಡಿ...

1. ವೃತ್ತಿಪರ ತಳ್ಳುವವ

ಜಪಾನ್ ನವರು ತುಂಬ ಕಷ್ಟ ಪಟ್ಟು ದುಡೀತಾರೆ. ಅವರು ಸಮಯಕ್ಕೆ ಸರಿಯಾಗಿ ತಮ್ಮತಮ್ಮ ಆಫೀಸ್ಗಳಿಗೆ ತಲುಪೋದು ಬಹಳ ಮುಖ್ಯ. ಅಲ್ಲಿ ಬಹುಪಾಲು ಮಂದಿ ಮೆಟ್ರೋನಲ್ಲೇ ಓಡಾಡೋದ್ರಿಂದ ಯಾವಾಗಲೂ ಜನ ಕಿಕ್ಕಿರಿದು ತುಂಬಿರ್ತಾರೆ, ಒಮ್ಮೊಮ್ಮೆ ಓಡಾಡಕ್ಕೇ ಆಗಲ್ಲ. ಈ ಪರಿಸ್ಥಿತಿ ಸುಧಾರಿಸಕ್ಕೆ ಅಂತ ಕೆಲವರು ಜನರನ್ನ ತಳ್ಳುತ್ತಾ ಇರ್ತಾರೆ. ಇವರೇ ವೃತ್ತಿಪರ ತಳ್ಳುವವರು.

2. ಬಾಡಿಗೆ ಬಾಯ್ ಫ್ರೆಂಡ್

ಟೋಕ್ಯೋನಲ್ಲಿ ನೀವು ಬೇಕಾದರೆ ಬಾಡಿಗೆ ಬಾಯ್ ಫ್ರೆಂಡ್ ಆಗಬಹುದು. ಇದರಿಂದ ಏನು ಸಿಗತ್ತೆ ಸಿಗಲ್ಲ ಅನ್ನೋದು ಜಪಾನ್ ನವರಿಗೇ ಗೊತ್ತು.

3. ವೃತ್ತಿಪರ ಕ್ಯೂನಲ್ಲಿ ನಿಲ್ಲುವವ

ಪುರಸೊತ್ತೇ ಇಲ್ಲದಿರೋರು ಕ್ಯೂನಲ್ಲಿ ನಿಂತು ಫಿಲಂ ಟಿಕೆಟ್ಟು ಆ ಟಿಕೆಟ್ಟಿ ಈ ಟಿಕೆಟ್ಟು ಕೊಂಡ್ಕೊಳಕ್ಕಾಗಲ್ಲ. ಅಂತವರಿಗೆ ನೀವು ವೃತ್ತಿಪರ ಕ್ಯೂನಲ್ಲಿ ನಿಲ್ಲುವವರಾಗಬಹುದು. ಅವರು ಹೇಳಿದ ಕಡೆ, ಹೇಳಿದಷ್ಟು ಹೊತ್ತು ಕ್ಯೂನಲ್ಲಿ ನಿಂತು ಅದೇನು ತೊಗೋಬೇಕೋ ತೊಗೊಂಡು ಬಂದರೆ ಆಯಿತು.

4. ವೃತ್ತಿಪರ ಮಲಗುವವ

ಇದೊಳ್ಳೇ ಕನಸಿದ್ದಂಗಿದೆ ಅಲ್ಲವಾ? ಮಲ್ಕೊಳಕ್ಕೂ ಯಾರಾದರೂ ದುಡ್ಡು ಕೊಡ್ತಾರಾ? ಹೌದು, ಕೊಡ್ತಾರೆ. ವಿಜ್ಞಾನಿಗಳು ತಮ್ಮ ಸಂಶೋಧನೆಗೆ ವೃತ್ತಿಪರ ಮಲಗುವವರನ್ನ ಕೆಲಸಕ್ಕೆ ಇಟ್ಟುಕೋತಾರೆ. ಈ ಕೆಲಸದಲ್ಲಿ ನೀವು ಆರಾಮಾಗಿ ಮಲ್ಕೋಬೇಕಷ್ಟೆ... ನಿಮ್ಮ ನಿದ್ದೆಯ ಮತ್ತು ಅದು ನಿಮ್ಮ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತೆ ಅನ್ನೋದರ ಬಗ್ಗೆ ವಿಜ್ಞಾನಿಗಳು ಸಂಶೋಧನೆ ಮಾಡ್ತಾರೆ.

5. ವೃತ್ತಿಪರ ಮದುವೆ ಅತಿಥಿ

ನಮ್ಮಲ್ಲಿ ಈ ಕೆಲಸಕ್ಕೆ ಅಷ್ಟು ಡಿಮ್ಯಾಂಡಿಲ್ಲ, ಯಾಕೇಂದ್ರೆ ಕರೀದೇ ಹೋದ್ರೂ ಮದುವೆಗೆ ಬರೋರು ಇರ್ತಾರೆ. ಆದರೆ ಜಪಾನಲ್ಲಿ ಕೆಲವರು ಈ ಕೆಲಸವನ್ನ ಪಾರ್ಟ್-ಟೈಂ ಆಗಿ ಮಾಡ್ತಾರೆ. ಅವರು ನಿಗದಿತ ಮದುವೆಗಳಿಗೆ ಅತಿಥಿಗಳಿಗಾಗಿ ಹೋಗಬೇಕಷ್ಟೆ. ಅದಕ್ಕಾಗಿ ದುಡ್ಡು ಕೊಡ್ತಾರೆ. ಏನ್ ಚಿಂದ ಅಲ್ಲವಾ?! ಉಂಡು, ಕೊಂಡು ಎರಡೂ ಹೋಗೋರಿಗೆ ಹೇಳಿ ಮಾಡಿಸಿದ ಕೆಲಸ!

6. ವೃತ್ತಿಪರ ವಾಂತಿ ಒರೆಸುವವ

ನೀವು ಯಾವಾಗಾದರೂ ರೋಲರ್ ಕೋಸ್ಟರಲ್ಲಿ ಹೋಗಿದ್ದರೆ ನಿಮಗೆ ಗೊತ್ತಿರತ್ತೆ... ಅದರಲ್ಲಿ ಎಷ್ಟು ಹೆದರಿಕೆ ಆಗುತ್ತೆ, ಹೆದರಿಕೆ ಆದಾಗ ಹೊಟ್ಟೆಯಲ್ಲಿ ಏನಾಗುತ್ತೆ ಅಂತ. ಇಂಥ ಪರಿಸ್ಥಿತಿಯಲ್ಲಿ ವಾಂತಿ ಮಾಡ್ಕೊಳೋದು ಸಹಜ. ಅದಕ್ಕೇಂತಲೇ ಅಮ್ಯೂಸ್ಮೆಂಟ್ ಪಾರ್ಕುಗಳು ವೃತ್ತಿಪರ ವಾಂತಿ ಒರೆಸುವವರನ್ನು ಕೆಲಸಕ್ಕೆ ಇಟ್ಟುಕೊಂಡಿರ್ತಾರೆ. ಆದರೆ ಇಂಥ ಕೆಲಸ ಯಾರು ಮಾಡ್ತಾರೆ? ಆ ರೋಲರ್ ಕೋಸ್ಟರಲ್ಲಿ ಬಿಟ್ಟಿ ರೈಡ್ ತೊಗೊಳಕ್ಕಿರಬೇಕು!

7. ವೃತ್ತಿಪರ ಡಿಯೋಡರೆಂಟ್ ಪರೀಕ್ಷಕ

ಬಸ್ಸಿನಲ್ಲಿ ಓಡಾಡೋರಿಗೆಲ್ಲ ಮೈ ವಾಸನೆಯ ಬಗ್ಗೆ ಚೆನ್ನಾಗಿ ಗೊತ್ತು. ಆದ್ದರಿಂದ ಡಿಯೋಡರೆಂಟುಗಳು ಈಗ ಮಾರುಕಟ್ಟೆಯಲ್ಲಿ ಕಾಸಿಗೊಂದು ಕೊಸರಿಗೊಂದು. ಆದರೆ ಒಳ್ಳೇ ಡಿಯೋಡರೆಂಟ್ ಯಾವುದು ಅಂತ ತಲೆ ಕೆಡಿಸಿಕೊಳ್ಳುವವರು ಈಗೀಗ ವೃತ್ತಿಪರ ಡಿಯೋಡರೆಂಟ್ ಟೆಸ್ಟರುಗಳ್ನ ಕೆಲಸಕ್ಕೆ ಇಟ್ಟುಕೋತಾರೆ. ಅವರ ಕೆಲಸ ಇಷ್ಟೇ: ಯಾವ ಡಿಯೋಡರೆಂಟ್ ಸರಿಯಾಗಿ ಕೆಲಸ ಮಾಡ್ತಿದೆ ಅಂತ ಕಂಕಳು ಮೂಸಿ ಮೂಸಿ ಪತ್ತೆ ಹಚ್ಚುವುದು. ಏನ್ ಕೆಲಸ ರೀ.

8. ವೃತ್ತಿಪರ ವಾಟರ್ ಸ್ಲೈಡ್ ಟೆಸ್ಟರ್

ವಂಡರ್ ಲಾ, ಜಿ. ಆರ್. ಎಸ್. ಫ್ಯಾಂಟಸಿ ಪಾರ್ಕ್... ಈ ಹೆಸರುಗಳ್ನ ಕೇಳಿರಬೇಕು ನೀವು. ಹೋಗೂ ಇರ್ತೀರಿ. ಇಲ್ಲಲ್ಲದೆ ಹೋದರೂ ಬೇರೆ ದೇಶಗಳಲ್ಲಿ ವಾಟರ್ ಸ್ಲೈಡುಗಳು ಚೆನ್ನಾಗಿ ಕೆಲಸ ಮಾಡ್ತಾ ಇವೆಯೋ ಇಲ್ಲವೋ ಅಂತ ಟೆಸ್ಟ್ ಮಾಡಕ್ಕೆ ಅಂತಾನೇ ಜನರನ್ನ ಕೆಲಸಕ್ಕೆ ಇಟ್ಟುಕೊಂಡಿರ್ತಾರೆ. ಇದರಲ್ಲಿ ಜಾರುವವರಿಗೆ ಹೆದರಿಕೆ ಆಗುತ್ತಾ? ತುಂಬ ನೋ ಕೊಂಚ ನೋ? ಮಜವಾಗಿರುತ್ತಾ? ಇಲ್ಲವಾ? ಇದನ್ನೆಲ್ಲ ಟೆಸ್ಟ್ ಮಾಡೋದೇ ಅವರ ಕೆಲಸ. ಹೆಂಗಿದೆ?!

9. ವೃತ್ತಿಪರ ಶಾಕ್ ಹೊಡೆಸುವವ

ಮೆಕ್ಸಿಕೋನಲ್ಲಿ ಕೆಲವರು ಒಬ್ಬರಿಗೊಬ್ಬರು ಶಾಕ್ ಕೊಟ್ಟು ದುಡ್ಡು ಸಂಪಾದಿಸ್ತಾರೆ. ನಿಮಗನ್ನಿಸಬಹುದು... ಇದಕ್ಕೆಲ್ಲ ಯಾವನು ದುಡ್ಡು ಕೊಡ್ತಾನೆ ಅಂತ. ಆದರೆ ನಿಜ ಏನಂದರೆ ಮೆಕ್ಸಿಕೋನಲ್ಲಿ ಪಬ್ ಗಿಬ್ಬಿಗೆ ಹೋಗಿ ತುಂಬ ಜಾಸ್ತಿ ಕುಡಿದೋರಿಗೆ ಎಚ್ಚರ ಮಾಡಿಸಕ್ಕೆ ಈ ವೃತ್ತಿಪರ ಶಾಕ್ ಹೊಡೆಸೋರು ಬೇಕೇ ಬೇಕಂತೆ. ಒಂದು ಶಾಕ್ ಕೊಟ್ಟರೆ ಸಾಕು.

10. ಪೇಪರ್ ಟವಲ್ ಮೂಸುವವ

ಪೇಪರ್ ಟವಲ್ ಮಾಡುವ ಕೆಲವು ಕಂಪನಿಗಳು ಮಾರುಕಟ್ಟೆಗೆ ತಮ್ಮ ಪದಾರ್ಥ ಬಿಡುವ ಮೊದಲು ಅದರ ಗುಣಮಟ್ಟದ ಬಗ್ಗೆ ಸ್ವಲ್ಪ ಜಾಸ್ತಿನೇ ಕಾಳಜಿ ವಹಿಸುತ್ತವೆ. ತಮ್ಮ ಪೇಪರ್ ಟವಲ್ನಿಂದ ಕೆಟ್ಟ ವಾಸನೆಯೇನಾದರೂ ಬರುತ್ತಿಲ್ಲ ತಾನೆ ಅಂತ ಚೆಕ್ ಮಾಡಕ್ಕೆ ಈ ಮೂಸೋರ್ನ ಕೆಲಸಕ್ಕೆ ಇಟ್ಟುಕೊಂಡಿರ್ತಾರೆ. ಏನ್ ಕಾಲ ಬಂತು ಅಂತೀರಾ?!

11. ಕೋಳಿಯ ಲಿಂಗ ಪರೀಕ್ಷಕ

ಹೆಸರೇ ಹೇಳುವಂತೆ ಇವರ ಕೆಲಸ ಕೋಳಿ ಗಂಡೋ ಹೆಣ್ಣೋ ಪರೀಕ್ಷಿಸೋದು.

12. ವೃತ್ತಿಪರ ತಬ್ಬುವವ/ಳು

ನಿಮ್ಮ ಲವರ್ ದೂರ ಇದ್ದರೆ ಏನ್ ಮಾಡ್ತೀರಿ? ಬಹಳ ಮಿಸ್ ಮಾಡ್ಕೋತಿದೀರಿ ಅನ್ನೋದಾದರೆ ಈ ವೃತ್ತಿಪರ ತಬ್ಬುವವರ ಸೇವೆ ಪಡ್ಕೋಬೋದು. ಆದರೆ ಬರೀ ಜಪಾನಲ್ಲಿ ಮಾತ್ರ. ಅವರು ಕೇಳುವಷ್ಟು ದುಡ್ಡು ಕೊಟ್ಟರೆ ಅವರು ನಿಮ್ಮನ್ನ ತಬ್ಬಿಕೊಂಡು ಮಲ್ಕೋತಾರೆ. ಬರೀ ಅಷ್ಟೇ. ಹೆಚ್ಚೇನೂ ಇಲ್ಲ.

13. ನಂಬರ್ ಪ್ಲೇಟ್ ಬ್ಲಾಕರ್

ಇರಾನ್ ನಲ್ಲಿ ಒಂದು ವಿಚಿತ್ರ ಕಾನೂನಿದೆ. ಅಲ್ಲಿ ಕಾರುಗಳು ತುಂಬ ಜಾಸ್ತಿ ಆಗಿ ಟ್ರಾಫಿಕ್ ಜಾಮುಗಳು ಜಾಸ್ತಿ ಆಗಿಹೋಗಿರೋದ್ರಿಂದ ಸರಿಸಂಖ್ಯೆಯ (even) ಕಾರುಗಳು ಓಡಬಹುದಾದ ದಿನಗಳು ಮತ್ತು ಬೆಸಸಂಖ್ಯೆಯ (odd) ಕಾರುಗಳು ಓಡಬಹುದಾದ ದಿನಗಳು ಅಂತ ಬೇರೆ ಮಾಡ್ಕೊಂಡಿದಾರೆ! ಈ ಕಾನೂನು ಪಾಲಿಸದೆ ಇರೋರ್ನ ಟ್ರಾಫಿಕ್ ಸಿಗ್ನಲ್ ಗಳ ಹತ್ತಿರ ಹಿಡಿಯಕ್ಕೆ ಪೊಲೀಸ್ ಕ್ಯಾಮೆರಾಗಳು ಕಾಯ್ತಾ ಇರ್ತವಂತೆ. ಕ್ಯಾಮೆರಾ ಕಣ್ಣು ತಪ್ಪಿಸಿಕೊಳಕ್ಕೆ ಕೆಲವರು ಈ ನಂಬರ್ ಪ್ಲೇಟ್ ಬ್ಲಾಕರ್ಗಳ ಸೇವೆ ಪಡ್ಕೋತಾರೆ. ಅವರ ಕೆಲಸ ನಂಬರ್ ಪ್ಲೇಟ್ ಕಾಣದಿರೋಹಾಗೆ ಕಪ್ಪು ಬಟ್ಟೆ ಮುಚ್ಚಿ ಕಾರ್ನ ಟ್ರಾಫಿಕ್ ಸಿಗ್ನಲ್ ದಾಟಿಸೋದು. ಆಮೇಲೆ ಗಡಿ ಪಾರು. ಏನ್ ಜನ ರೀ!

14. ಪೆಟ್ ಫುಡ್ ಟೆಸ್ಟರ್

ಈ ಕೆಲಸದ ಐಡಿಯಾ ಹೊಳೆದವರಿಗೆ ಸಾಕುಪ್ರಾಣಿಗಳು ಅಂದ್ರೆ ಪಂಚಪ್ರಾಣ ಇರಬೇಕು. ಈ ಕೆಲಸ ಮಾಡೋರು ಸಾಕುಪ್ರಾಣಿಗಳ ಊಟ ತಿಂದು ತಮ್ಮ ಅಭಿಪ್ರಾಯ ತಿಳಿಸಬೇಕು, ಅಷ್ಟೇನೇ.

15. ವೃತ್ತಿಪರ ಶೋಕಸೂಚಕ

ಉತ್ತರಭಾರತದಲ್ಲಿ ರುಡಾಲಿಗಳು ಅಂತ ಇರ್ತಾರೆ. ಅವರ ಕೆಲಸ ಅಳೋದು. ತೇಟ್ ಅದೇ ಕೆಲಸ. ಯಾರಾದರೂ ಸತ್ತರೆ ಕರೀತಾರೆ, ಹೋಗಿ ಅಳಬೇಕಷ್ಟೆ. ದುಡ್ಡು ಕೊಟ್ಟು ಕಳಿಸ್ತಾರೆ.

16. ಫರ್ನೀಚರ್ ಟೆಸ್ಟರ್

ಇವರ ಕೆಲಸ ಒಂಥರಾ ಸೂಪರ್. ಬೇರೆಬೇರೆ ರೀತಿಯ ಕುರ್ಚಿಗಳು ಸೋಫಾಗಳು ಮಂಚಗಳ ಮೇಲೆ ಮಲಗಿ-ಕೂತು ಮಾಡಿ ಹೇಗಿದೆ ಅಂತ ತೀರ್ಪು ಕೊಡೋದು. ಸಕ್ಕತ್ ದುಡ್ಡು!

ನೋಡುದ್ರಾ ಪ್ರಪಂಚದಲ್ಲಿ ಎಂತೆಂತಾ ಕೆಲಸ ಮಾಡ್ತಾರೆ ಜನ ಅಂತ? ನೀವು ಯಾವ ಕೆಲಸ ಮಾಡಕ್ಕೆ ಇಷ್ಟ ಪಡ್ತೀರಿ ಅಂತ ಕಾಮೆಂಟ್ ಮೂಲಕ ತಿಳಿಸಿ.

ಪ್ರೇರಣೆ, ಚಿತ್ರಗಳು: gazabpost

ನೆನೆಪದ: 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಬೆಳ್-ಬೆಳಗ್ಗೆ 20 ನಿಮಿಷ ಹೀಗ್ ಕಳೆದರೆ ಇಡೀ ದಿನ ಲವಲವಿಕೆ ಮತ್ತು ಸಂತೋಷಗಳು ನಿಮ್ನ ಬಿಟ್ಟು ಹೋಗಲ್ಲ

ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಕಲಿತೋರು ಬಿಚ್ಚಿಟ್ಟ ಗುಟ್ಟು

ಇಂಥದ್ದು ನಡೆದೇ ಇರುತ್ತೆ - ಬೆಳ್ ಬೆಳಿಗ್ಗೆನೇ ಯಾವ್ದೂ ನೀವಂದ್ಕೊಂಡ ಹಾಗೆ ನಡೀತಿರೊಲ್ಲ. ನೀವಿಟ್ಟ ಸಮಯಕ್ಕೆ ಅಲಾರ್ಮು ಹೊಡ್ದಿರೊಲ್ಲ, ಅಥವಾ ನೀವೇ ತಪ್ಪಾಗಿ ಅಲಾರ್ಮ್ ಸೆಟ್ ಮಾಡಿರ್ತೀರ. ಅಯ್ಯಯ್ಯೋ ಲೇಟ್ ಆಯ್ತು ಅಂದ್ಕೊಂಡು ಬೇಗ ಸ್ನಾನ ಮಾಡಿ ತಿಂಡಿ ರೆಡಿ ಮಾಡೋಕೆ ಹೋದ್ರೆ ಅದು ಸೀದು ಹೋಗುತ್ತೆ. ಇಸ್ತ್ರಿ ಹಾಕೋಕೆ ಹೋದಾಗ ಕರೆಂಟು ಕೈ ಕೊಡುತ್ತೆ. ಸರಿ, ಆ ದಿನ ಪೂರ್ತಿ ಎಲ್ಲವೂ ಹಾಳು. ನೀವು ಮುರ್ಫಿ ಅನ್ನೋನು ಹೇಳಿರೋದು ಕೇಳಿರ್ಬಹುದು - ಏನಾದ್ರು ಹಾಳಾಗೋ ಚಾನ್ಸ್ ಇದ್ರೆ, ಅದು ಹಾಳಾಗಿಯೇ ಆಗುತ್ತೆ. ಒಟ್ನಲ್ಲಿ ಬೆಳ್ ಬೆಳಿಗ್ಗೆ ಕೆಟ್ಟದಾಗಿ ಶುರುವಾದ್ರೆ ಅವತ್ತು ಪೂರ್ತಿ ಮುರ್ಫಿ ಹೇಳಿದ್ದು ನಿಜ ಆಗ್ತಾ ಹೋಗುತ್ತೆ. ಇದಕ್ಕೆ ಪರಿಹಾರ ಇದೆ - ದಿನವೂ ಬೆಳಿಗ್ಗೆ ಬರೀ ಇಪ್ಪತ್ತು ನಿಮಿಷ ಈ ರೀತಿ ಕಳ್ದ್ರೆ ಇಡೀ ದಿನ ಸಕತ್ತಾಗಿರುತ್ತೆ. ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಕಲಿತು ಸಂತೋಷ, ನೆಮ್ಮದಿಗಳ ಬಗ್ಗೆ ರಿಸರ್ಚ್ ಮಾಡ್ತಿರೋ ಶಾನ್ ಏಚರ್ ಅನ್ನೋನು ಹೇಳಿರೋ ಪ್ರಕಾರ ಬೆಳಿಗ್ಗೆ ನೀವು ಪಾಸಿಟಿವ್ ಆಗಿದ್ರೆ ಆ ದಿವ್ಸ ಖಷಿಯಾಗಿರ್ತೀರಿ. ಪಾಸಿಟಿವಿಟಿ ಹೆಚ್ಚಾದ್ರೆ ನಿಮ್ ಮಿದುಳು ಖುಷ್ ಖುಷಿಯಾಗಿರುತ್ತೆ. ಖುಷಿಯಾಗಿದ್ದಾಗ ಮಿದುಳು ಚೆನ್ನಾಗಿ ಕೆಲಸ ಮಾಡುತ್ತೆ, ಎಷ್ಟು ಕಷ್ಟ ಇದ್ರೂ ಟೆನ್ಷನ್ ತೆಗೊಳೊಲ್ಲ. ಆ 20 ನಿಮಿಷ ಏನು ಮಾಡ್ಬೇಕು ಅಂತ ಹೇಳ್ತಾರೆ ಅನ್ನೋದನ್ನ ಓದ್ಕೊಳ್ಳಿ.

1) 2 ನಿಮಿಷ ಹಿಂದಿನ್ ದಿವ್ಸ ಏನೇನು ಒಳ್ಳೇದಾಯ್ತು ಅನ್ನೋದನ್ನ ನೆನೆಸ್ಕೋಬೇಕು

ನಾವು ಮಿದುಳಿಗೆ ಮೋಸ ಮಾಡ್ಬಹುದು. ಖುಷಿಯಾಗಿದ್ದೀನಿ ಅಂತ ನಿಮ್ಗೆ ನೀವೇ ಹೇಳ್ಕೊಂಡ್ರೆ ಅದು ನಿಜಕ್ಕೂ ಖುಷಿಯಾಗಿ ಬಿಡುತ್ತೆ. ಹಿಂದಿನ್ ದಿನ ಖುಷಿ ಕೊಡೋ ಅಂಥದ್ದು ಏನಾಯ್ತು ಅಂತ ನೆನಪು ಮಾಡ್ಕೊಂಡು ಬರ್ದಿಟ್ಕೊಳ್ಳಿ. ಹಿಂದಿನ್ ದಿನದ ಖುಷೀನ ಎರಡು ನಿಮಿಷ ಮತ್ತೆ ಅನುಭವ್ಸಿ. ಇದರಿಂದ ನಿಮ್ ಮಿದುಳು ಪಾಸಿಟಿವ್ ಆಗುತ್ತೆ. ಮೊದ್ಲೇ ಹೇಳಿದ್ ಹಾಗೆ, ಮಿದುಳು ಪಾಸಿಟಿವ್ ಆಗಿದ್ರೆ ಚೆನ್ನಾಗಿ ಕೆಲಸ ಮಾಡುತ್ತೆ.

ಮೂಲ

2) 2 ನಿಮಿಷ ಬೇರೆಯವ್ರ ಒಳ್ಳೆತನ ನೆನೆಸ್ಕೊಳ್ಳೋಬೇಕು

ನಾವು ಬೇರೆಯವ್ರ ಒಳ್ಳೆತನ ನೆನೆಸ್ಕೊಳ್ಳೋದು ಕಡಿಮೆ. ಬೆಳ್ ಬೆಳಿಗ್ಗೆ ಬೇರೆಯವ್ರ ಒಳ್ಳೆತನ ನೆನೆಸ್ಕೊಳ್ಳಿ. ನೆನೆಸ್ಕೊಳ್ಳೋದಷ್ಟೆ ಅಲ್ಲ, ಅವ್ರು ನಿಮ್ ಮುಂದೆ ಇದ್ರೆ ಅವ್ರಿಗೆ ಹೇಳಿ. ಅಥ್ವಾ ಈಮೇಲೋ ಮೆಸೇಜೋ ಮಾಡಿ. ಇದರಿಂದ ಎರಡು ರೀತಿ ಪ್ರಯೋಜನ ಇದೆ - ಈ ರೀತಿ ಒಳ್ಳೆ ಕೆಲ್ಸ ಮಾಡಿದ್ದೀನಿ ಅಂತ ನೀವು ಖುಷಿಯಾಗ್ತೀರಿ, ಅಲ್ಲದೆ ಬೇರೆಯವ್ರ ಜೊತೆ ನಿಮ್ ಸಂಬಂಧ ಗಟ್ಟಿಯಾಗುತ್ತೆ. ಇದರಿಂದ ಮಿದುಳು ಖುಷಿಯಾಗುತ್ತೆ, ಚೆನ್ನಾಗಿ ಕೆಲಸ ಮಾಡುತ್ತೆ.

ಮೂಲ

3) 2 ನಿಮಿಷ ನಿಮ್ಗಿರೋ ಭಾಗ್ಯ ನೆನೆಸ್ಕೋಬೇಕು

ಡಿ.ವಿ.ಗುಂಡಪ್ಪ 'ಇರುವ ಭಾಗ್ಯವ ನೆನೆದು ಬಾರೆನೆಂಬುದ ಬಿಡು, ಹರುಷಕ್ಕಿದೆ ದಾರಿ' ಅಂತ ಹೇಳಿದ್ದಾರೆ. ಹೀಗೆ ನಿಮ್ ಬದುಕಲ್ಲಿ ನಿಮ್ಗೆ ದಕ್ಕಿರೋ ಭಾಗ್ಯಗಳ್ನ ನೆನೆಸ್ಕೋಬೇಕಂತೆ ಬೆಳಿಗ್ ಬೆಳಿಗ್ಗೆ. ಇದರಿಂದ ಮಿದುಳು ಪಾಸಿಟಿವ್ ಆಗುತ್ತೆ. ಬದುಕಲ್ಲಿ ಏನೇನಿದೆ ಅಂತ ನೋಡೋದ್ರಿಂದ, ಏನೇನಿಲ್ಲ ಅಂತ ಕೊರಗೋದು ತಪ್ಪುತ್ತೆ. ಲೋಟ ಅರ್ಧ ಖಾಲಿಯಾಗಿದೆ ಅಂತ ಕೊರಗೋ ಬದ್ಲು ಅರ್ಧ ಲೋಟ ನೀರಿದ್ಯಲ್ಲ ಅಂತ ಖುಷಿ ಪಡ್ಬೇಕು. ಇಂಥ ಆಶಾವಾದದಿಂದ ಇಡೀ ದಿನ ಚೆನ್ನಾಗಿ ಕಳಿಯುತ್ತೆ. ನೀವು ಅಂದ್ಕೊಂಡ ಕೆಲಸ ಎಲ್ಲ ಮಾಡಿ ಮುಗಿಸ್ಬಹುದು.

ಮೂಲ

4) 12 ನಿಮಿಷ ವ್ಯಾಯಾಮ ಮಾಡ್ಬೇಕು

ಮನುಷ್ಯನ್ ದೇಹದಲ್ಲಿ 'ಎಂಡಾರ್ಫಿನ್' ಅನ್ನೋ ಹಾರ್ಮೋನು ಇದ್ದಷ್ಟು ಅವ್ನು ಖುಷಿಯಾಗಿರ್ತಾನಂತೆ. ನಾವು ಜಾಗಿಂಗ್, ಯೋಗಾಸನ, ವ್ಯಾಯಾಮ್ ಮಾಡೋವಾಗ್ಲೂ ಈ ಎಂಡಾರ್ಫಿನ್ ದೇಹದಲ್ಲಿ ಹೆಚ್ಚಾಗುತ್ತೆ. ಇದರಿಂದ ಟೆನ್ಷನ್ ಕಡಿಮೆ ಆಗಿ, ಮಿದುಳು ಅದರ ಪೂರ್ತಿ ತಾಕತ್ತು ತೋರ್ಸುತ್ತೆ. ಅಲ್ಲದೆ ನೀವು ನಿಮ್ ಬಗ್ಗೆ ಯೋಚ್ನೆ ಮಾಡೋದನ್ನ ಕಲೀತೀರಿ. ದಿವ್ಸ ವ್ಯಾಯಾಮ ಮಾಡೋದ್ರಿಂದ, ಹಿಡಿದ ಕೆಲ್ಸಾನ ಕಷ್ಟ ಬಿದ್ದು ಪೂರ್ತಿ ಮಾಡ್ಬೇಕು ಅನ್ನೋದೂ ಮಿದುಳಿಗೆ ಅರ್ಥ ಆಗುತ್ತೆ. ಇದೆಲ್ಲ ಪಾಸಿಟಿವಿಟಿ ಹೆಚ್ಸುತ್ತೆ.

ಮೂಲ

5) 2 ನಿಮಿಷ ಧ್ಯಾನ ಮಾಡ್ಬೇಕು

ಎರಡೇ ಎರಡು ನಿಮಿಷ ಧ್ಯಾನ ಮಾಡೋದ್ರಿಂದ ತುಂಬ ಪ್ರಯೋಜನ ಇದೆ. ಒಂದು ಕಡೆ ಶಾಂತವಾಗಿ ಕೂತು, ನಿಮ್ ಉಸಿರಾಟದ್ ಮೇಲೆ ನಿಮ್ ಗಮನ ಇಡಿ. ಬೇರೆ ಯಾವುದ್ರ ಬಗ್ಗೆನೂ ಯೋಚ್ನೆ ಮಾಡ್ಬೇಡಿ. ಇದ್ರಿಂದ ಕೈಯಲ್ಲಿರೋ ವಿಷಯದ್ ಬಗ್ಗೆ ಮಾತ್ರ ಯೋಚ್ನೆ ಮಾಡೋ ಶಕ್ತಿ ಹೆಚ್ಚಾಗುತ್ತೆ. ದಿವ್ಸ ಇದನ್ನ ಅಭ್ಯಾಸ ಮಾಡ್ಕೊಂಡ್ರೆ ನಿಧಾನಕ್ಕೆ ಪಾಸಿಟಿವಿಟಿ ಹೆಚ್ಚಾಗುತ್ತೆ.

ಮೂಲ

ಬೆಳಿಗ್ಗೆ ಸ್ವಲ್ಪ ಜಾಸ್ತಿ ಟೈಮ್ ಇದ್ದ ದಿವ್ಸ ಬೇಕಿದ್ರೆ ಇದನ್ನೆಲ್ಲ ಜಾಸ್ತಿ ಹೊತ್ತು ಮಾಡ್ಬಹುದು. ಈ ಅಭ್ಯಾಸಗಳನ್ನ ರೂಢಿ ಮಾಡ್ಕ್ಕೊಂಡ್ರೆ ನೀವು ಹೆಚ್ಚು ಪಾಸಿಟಿವ್ ಆಲೋಚನೆಗಳನ್ನ ಮಾಡ್ತೀರಿ. ನಿಮ್ಮ ದಿನವೂ ಚೆನ್ನಾಗಿರುತ್ತೆ. ಅಂದ್ಕೊಂಡ ಕೆಲ್ಸ ಎಲ್ಲ ಅಚ್ಚುಕಟ್ಟಾಗಿ ಮಾಡಿ ಮುಗಿಸ್ತೀರಿ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: