ನಾವ್ ಹೇಳೋ ಥರ ಮಾಡಿದರೆ 30 ದಿನದಲ್ಲಿ ಸಿಗ್ರೆಟ್ ಚಟ ಹೋಗೋದು ಗ್ಯಾರಂಟಿ

ಯಾಕ್ ಸುಮ್ನೆ ಹೊಗೆ ಬಿಟ್ಟು ಹೊಗೆ ಹಾಕುಸ್ಕೊತೀರಾ

ಸಿಗರೇಟು ಬಿಡ್ಬೇಕು ಆದ್ರೆ ಬಿಡಕ್ಕಾಗ್ತಿಲ್ಲ ಅಂತ ಪರದಾಡ್ತಿದೀರಾ. ಒಂದ್ಸತಿ ಸಿಗ್ರೆಟ್ ಯಾಕ್ ಹೊಡೀತೀರಾ ಅಂತ ಯೋಚ್ನೆ ಮಾಡಿ. ಟೆನ್ಶನ್ನಾ, ಕೋಪ ಕಮ್ಮಿ ಮಾಡ್ಕೊಳಕ್ಕಾ? ಇವೆಲ್ಲ ಸುಳ್ಳು. ದಿನಾ ಊಟ ತಿಂಡಿ ಕಾಫಿ ಥರ ಇದು ನಿಮಗೆ ರೂಢಿಯಾಗಿದೆ ಅಷ್ಟೇ. ಸಿಗ್ರೆಟ್ ಸೇದ್ದೇ ಇರೋರಿಗೆ ಟೆನ್ಷನ್ನೇ ಇರಲ್ವಾ. ಈ ಟೀನೇಜಲ್ಲಿ ಇರೋರಿಗೆ ಇದೊಂಥರಾ ಶೋಕಿ. ಆದ್ರೆ ನಾವ್ ಹೇಳೋಥರ ನೀವ್ ಮಾಡಿ ಬರಿ ಒಂದು ತಿಂಗಳಲ್ಲಿ ಸಿಗ್ರೆಟ್ ಬಿಡ್ತೀರಾ. ಆರೋಗ್ಯಾನು ನೆಟ್ಟಗಾಗತ್ತೆ.

1. ಸಿಗರೇಟನ್ನ ಬಿಟ್ಟೆ ಬಿಡ್ತೀನಿ ಅಂತ ತೀರ್ಮಾನ ಮಾಡಿ 

ತೀರ್ಮಾನ ಮಾಡಿದ್ ತಕ್ಷಣಾನೆ ಬಿಡಕ್ಕಾಗಲ್ಲ, ಆದ್ರೆ ಒಂದು ತಿಂಗಳಲ್ಲಿ ಖಂಡಿತ ಬಿಡಬೋದು. ನೀವು ದಿನಕ್ಕೆ ಒಂದು ಪ್ಯಾಕ್ ಸೇದೋರಾದ್ರೆ ಕೆಳಗಡೆ ಪೋಟದಲ್ಲಿರೋ ಪ್ಲಾನ್ ಪ್ರಕಾರ ಬಿಡ್ತಾ ಬನ್ನಿ. ಮರೀಬೇಡಿ ಇದು ನಿಮ್ಮಿಂದ ಖಂಡಿತ ಸಾಧ್ಯವಾಗತ್ತೆ

ಮೂಲ

2. ಆದಷ್ಟು ಸಿಗರೇಟನ್ನ ಸೇದ್ದೇ ಇರೋರ್ ಜೊತೆ ಕಾಲ ಕಳೀರಿ 

ಈ ಸಿಗರೇಟೇ ಹಂಗೆ, ಯಾರಾದ್ರೂ ಸೇದುತ್ತ ಇರೋದನ್ನ ನೋಡಿದ್ರೆ ನಿಮಗೂ ಸೆಡಬೇಕು ಅನ್ಸತ್ತೆ. ದಿನಾ ಎಷ್ಟಾಗತ್ತೋ ಅಷ್ಟು ನೀರ್ ಕುಡೀರಿ. ನಿಮ್ ಸ್ನೇಹಿತರು, ಮನೇಲಿರೋರು ಎಲ್ಲರಿಗೂ ನೀವು ಸಿಗರೇಟನ್ನ ಬಿಡೋ ವಿಷಯದ ಬಗ್ಗೆ ಹೇಳಿ. ನಿಮ್ಮ ಮನಸ್ಸಿಗೆ ಒಳ್ಳೆ ಯೋಚನೆ ತುಂಬಲು ಅವರ ಸಹಾಯಾನು ಮುಖ್ಯ.

ಮೂಲ

3. ದಿನಾ ನಿಂಬೆಹಣ್ಣಿನ ಟೀ ಅಥವಾ ಶುಂಠಿ ಟೀ ಕುಡೀರಿ

ನಿಂಬೆ, ಶುಂಠಿ ನಿಮ್ಮ ಶ್ವಾಸದಲ್ಲಿ ಈಗಾಗಲೇ ಸೇರಿರೋ ವಿಷಕಾರಿ ಅಂಶಾನ ತೆಗ್ಯಕ್ಕೆ ಸಹಾಯ ಮಾಡತ್ತೆ. ಕಾಫಿನಾ ಕಮ್ಮಿ ಮಾಡಿ. ಕಾಫಿ ನಮ್ಮ ದೇಹಕ್ಕೆ ಸೇರಿದಾಗ ಸಿಗರೇಟ್ ಬೇಕು ಅಂತ ಅಂಶಕ್ಕೆ ಶುರುವಾಗತ್ತೆ.

ಮೂಲ

4. ಆದಷ್ಟು ಕೆಲಸಗಳಲ್ಲಿ ನಿಮ್ಮನ್ನ ನೀವು ತೊಡಗಿಸಿಕೊಳ್ಳಿ 

ಖಾಲಿ ಇರೋ ಮನಸ್ಸು ಭೂತಬಂಗಲೆಗಿಂತ ಭಯಂಕರ ಅಂತ ಹೇಳ್ತಾರೆ. ಸುಮ್ನೆ ಕೂತಿದ್ರೆ ನಮ್ಮ ಮನಸ್ಸು ಹೋಗು ಸಿಗರೇಟನ್ನ ಸೇದು ಅಂತ ಹೇಳತ್ತೆ. ಅದಕ್ಕೆ ಆದಷ್ಟು ಮನಸನ್ನ ಬ್ಯುಸಿಯಾಗಿ ಇಟ್ಕೊಳಿ.

ಮೂಲ

5. ನಿಮ್ಮ ಮನಸ್ಸು ನಿಮ್ಮ ಹಿಡಿತದಲ್ಲಿರಲಿ 

ನಿಮಗೆ ಸಿಗರೇಟು ಸೇದಬೇಕು ಅಂತ ಅನ್ನಿಸಿದಾಗೆಲ್ಲ ಸೇದಬೇಡಿ. ಚೇವಿಂಗ್ ಗಮ್ ತಿನ್ನಿ, ನೀರ್ ಕುಡೀರಿ, ಸ್ನೇಹಿತರ ಜೊತೆ ಮಾತಾಡಿ. ನಿಮ್ಮ ಸಿಗರೇಟ್ ಸೇದೋ ಟೈಮಿಂಗನ್ನ 2 ಗಂಟೆ ಕಾಲ ಆದ್ರೂ ಮುಂದೂಡಿ.

ಮೂಲ

6. ದಿನ ಬೆಳಿಗ್ಗೆ ವ್ಯಾಯಾಮ ಮಾಡೋದನ್ನ ರೂಡಿ ಮಾಡ್ಕೊಳಿ 

ಹೆಚ್ಚುಕಮ್ಮಿ ಸುಮಾರ್ ಜನ ಬೆಳಿಗ್ಗೆ ಬೆಳಿಗ್ಗೆನೇ ಒಂದ್ ಸಿಗರೇಟನ್ನ ಸೇದ್ತಾರೆ. ಇದನ್ನ ನಿಲ್ಲಿಸಿ ಬೆಳಿಗ್ಗೆ ಎದ್ದು ವ್ಯಾಯಾಮ ಮಾಡಿ, ಸೂರ್ಯನಮಸ್ಕಾರ ಮಾಡಿ ಆರೋಗ್ಯಕ್ಕೂ ಒಳ್ಳೇದು, ಮನಸ್ಸಿಗೂ ಒಳ್ಳೇದು.

ಮೂಲ

ಇಷ್ಟನ್ನೆಲ್ಲಾ ನಿಜವಾಗ್ಲೂ, ಪ್ರಾಮಾಣಿಕವಾಗಿ ಮಾಡುದ್ರೆ ಖಂಡಿತ ಒಂದು ತಿಂಗಳಲ್ಲಿ ಸಿಗರೇಟನ್ನ ಬಿಟ್ಟೆ ಬಿಡ್ತೀರಾ. ತಡ ಯಾಕೆ? ಇವತ್ತಿಂದಾನೆ ಪಾಲಿಸಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

2017ರಲ್ಲಿ ಒತ್ತಡ ಕಡಿಮೆ ಮಾಡ್ಕೊಂಡು ಜೀವನ ಸವೀಬೇಕು ಅಂತಿದ್ರೆ ಇಲ್ಲಿ ಸ್ವಲ್ಪ ಕೇಳಿ

ಸುಂದರ ಬದುಕು ನಿಮ್ಮದಾಗಿಸಿಕೊಳ್ಳೋ ಆಸೆ ಇದ್ರೆ

ಬೆಳಗಾದ್ರೆ ಕೆಲಸಕ್ಕೆ ಓಡೋ ಭರಾಟೆಲಿರ್ತೀವಿ, ಹೆಣ್ಣುಮಕ್ಕಳಾದ್ರೆ ಮನೆ ಕೆಲಸ ಎಲ್ಲ ಮುಗಿಸಿ ಓಡಬೇಕು, ಕೆಲಸದಲ್ಲೆನು ಒತ್ತಡಕ್ಕೆ ಕೊರತೇನ? ಇದೆಲ್ಲ ಮುಗಿದಮೇಲೆ ನನ್ನನ್ನ ಗಮನಿಸಿಕೊಳ್ತಿಲ್ಲಾ ಅನ್ನೋ ಗಂಡ/ ಹೆಂಡತಿ, ಆಡೋಕು ನನ್ನ ಜೊತೆ ಬರೋಲ್ವಾ ಅನ್ನೋ ಮಕ್ಕಳು....... ಯಾಕಪ್ಪ ಜೀವನ ಅನ್ಸುತ್ತೆ ದಿನದ ಕೊನೆಲಿ. 

ಇದೆಲ್ಲಾ ನಿಮಗೂ ಅನ್ನಿಸ್ತಿದ್ರೆ ಖಂಡಿತ ಇವೆಲ್ಲದರ ಬಗ್ಗೆ ಗಮನ ಹರಿಸೋಕು ಇದು ಸರಿಯಾದ ಸಮಯ.

1. ದಾರಿ ತಪ್ಪಿಸೋರ್ನ ದೂರ ಇಡಿ

ಕೆಲವರನ್ನ ಕಷ್ಟದಲ್ಲಿ ಭೇಟಿ ಮಾಡೋಕೆ ಪ್ಲ್ಯಾನ್ ಮಾಡಿರ್ತೀರಿ. ಆದ್ರೆ ಅವರನ್ನ ಭೇಟಿ ಮಾಡಿದ್ರೆ ಬೇಡದ ಮಾತುಗಳು, ಬೇಡದ ವಿಷಯಗಳು ನಿಮ್ಮನ್ನ ಕಾಡುತ್ತೆ ಅನ್ನಿಸಿದ್ರೆ ಅಂಥವರ ಜೊತೆ ಕಳೆಯೋ ಸಮಯಾನ ಕಡಿಮೆ ಮಾಡಿಕೊಳ್ಳಿ. ಸಾಧ್ಯ ಆದ್ರೆ ಅಂಥವರನ್ನ ಭೇಟಿ ಮಾಡದೇ ಇರೋದೆ ಒಳ್ಳೇದು.

ಅವರೇ ಕಾಫಿಗೋ ಊಟಕ್ಕೋ ಕರೆದರೆ ಹೋಗದೇ ಇರೋಕೆ ನೆಪ ಹುಡುಕಿ, ಖುಷಿ ಆಗಿರ್ತೀರಿ.

ಮೂಲ

2. ಯಾವಾಗಲೂ ಲೇಟು ಅನ್ನಿಸಿಕೋಬೇಡಿ, ನಿಮ್ಮ ದಿನಾನ ಸರಿಯಾಗಿ ಪ್ಲಾನ್ ಮಾಡಿ

ದಿನ ತಡವಾಗಿ ಹೋಗಿ ಹೋಗಿ ಒತ್ತಡ ಜಾಸ್ತಿ ಆಗ್ತಿದ್ರೆ ನಿಮ್ಮ ದಿನದ ಪ್ಲ್ಯಾನ್ ನಲ್ಲಿ ಬದಲಾವಣೆ ಮಾಡಿಕೊಳ್ಳಿ. ಗಾಡಿ ಓಡಿಸೋ ಸಮಯ, ಟ್ರಾಫಿಕ್ ಜೊತೇಲಿ ನಿಮ್ಮ ಸಣ್ಣ ಪುಟ್ಟ ಕೆಲಸಗಳಿಗೂ ಸಮಯ ಕೊಟ್ಟು ಪ್ಲ್ಯಾನ್ ಮಾಡಿ,  ಬಸ್ ಬೇಗ ಹತ್ತಿ, ಅರ್ಧ ಗಂಟೆ ಮುಂಚೆ ಮನೆಯಿಂದ ಹೊರಡಿ, ಆಗ ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸಗಳು ಆಗುತ್ವೆ.

ಮೂಲ

3. ಮಾಡಬೇಕಾದ ಕೆಲಸ ಬೆಟ್ಟದಂಗೆ ಬೆಳೀಬಾರದು… ಹಂಗೆ ನೋಡ್ಕೊಳಿ

ಬೆಳಗಾದ ತಕ್ಷಣ ನಿಮ್ಮ ಕಣ್ಮುಂದೆ ರಾಶಿ ರಾಶಿ ಕೆಲಸ ಕಂಡ್ರೆ ಯಾರಿಗೆ ತಾನೆ ಖುಷಿ ಆಗುತ್ತೆ ಹೇಳಿ!! ಆದ್ರೆ ಹಾಗಂತ ನಾವು ತಪ್ಪಿಸ್ಕೊಳ್ಳೋಹಾಗೂ ಇಲ್ಲ ಅಲ್ವ? ಆದ್ರಿಂದ ನಿಮ್ಮ ಕೆಲಸಗಳ ಎರಡು ಪಟ್ಟಿ ಮಾಡ್ಕೊಳ್ಳಿ. ಒಂದು ನಿಮಗೆ ಖುಷಿ ಕೊಡೋದು ಮತ್ತೊಂದು ನಿಮಗೆ ಇಷ್ಟ ಆಗದ್ದು. ಈಗ ಇವರಡನ್ನೊ ಸಮಾನವಾಗಿ ಮಾಡುತ್ತಾ ಹೋಗಿ.

ನಿಮಗೆ ನಿಮ್ಮ ಹೆಂಡತಿನ ಶಾಪಿಂಗ್ ಕರ್ಕೊಂಡು ಹೋಗೋದು ಇಷ್ಟ ಇಲ್ಲ ಅಂದ್ರೆ, ನಿಮಗೆ ಬೇಕಾದನ್ನು ನೀವೂ ಕೊಳ್ಳಬಹುದಾದ ಅಂಗಡಿಗೆ ಹೋಗಿ. ನಿಮಗೆ ಬೇಕಾದ್ದು ನೀವು ತಗೊಳ್ಳಿ ಅವರಿಗೆ ಬೇಕದ್ದು ಅವರು ತಗೋತಾರೆ, ಕೆಲಸ ಖುಷಿಲೇ ಮುಗೀತಲ್ವ?

ಮೂಲ

4. ನಿಮ್ಮ ಸಾಮಾನು ಚೆಲ್ಲಾಪಿಲ್ಲಿ ಆಗದೆ ಇರೋಹಂಗೆ ನೋಡ್ಕೊಳ್ಳಿ

ವಾರ ಇಡೀ ಬ್ಯುಸಿ ಆಗಿರೋ ನಿಮಗೆ ಬಳಸಿದ ವಸ್ತುಗಳನ್ನ ಅದದೇ ಜಾಗಗಳಿಗೆ ಸೇರಿಸೋದು ಕಷ್ಟ ಆಗಿ ನಾಳೆ ನಾಳೆ ಅನ್ಕೋತಾ ಒಂದು ರಾಶಿ ಆಗಿದ್ರೆ ಅದನ್ನೆಲ್ಲ ಶನಿವಾರ ಮಾಡಬೇಕನ್ನೋ ಒತ್ತಡ ಕಾಡುತ್ತಿದ್ರೆ. ಬೇಸರ ಇಲ್ಲದೆ ನಿಮಗಿಷ್ಟ ಆಗೋ ಸಂಗೀತ ಕೇಳುತ್ತ ಕೆಲಸ ಮಾಡಿ, ಜೊತೇಲಿ ಕೆಲಸ ಎಲ್ಲ ಮುಗಿದ ಮೇಲೆ ನಿಮಗಿಷ್ಟ ಆಗೋ ಜಾಗಕ್ಕೆ ಹೋಗೋ ಪ್ಲಾನ್ ಮಾಡ್ಕೊಳ್ಳಿ ಆಗ ಒತ್ತಡ ಇರಲ್ಲ.

ಮೂಲ

5. ಭಿನ್ನಾಭಿಪ್ರಾಯಗಳನ್ನ ಪಕ್ಕಕ್ಕಿಡಿ

ಎಷ್ಟೋ ಸಾರಿ ಎದುರಿಗೆ ಇರೋ ವ್ಯಕ್ತಿಗೆ ನಮ್ಮ ಮನಸ್ಸಿನಲ್ಲಿರೋ ಮಾತು ಹೇಳೋಕಾಗ್ದೆ ಒಳಗೊಳಗೇ ಗೊಣಗಾಡ್ತ ಇರ್ತೀವಿ. ಇದು ನಿಮಗೆ ಒತ್ತಡ ಹೇರುತ್ತೆ. ಇದರಿಂದ ಹೊರಬರೋಕೆ ಮಾತುಗಳನ್ನ ಆಡೋ ಅಭ್ಯಾಸ ಮಾಡಿಕೊಂಡ್ರೆ ಒಳ್ಳೇದು ಇಲ್ಲ ಅಂದ್ರೆ 10 ನಿಮಿಷಕ್ಕಿಂತ ಹೆಚ್ಚು ಯಾವುದೇ ವಿಷಯಕ್ಕೂ ತಲೆ ಕೆಡಿಸಿಕೊಳಲ್ಲ ಅಂತ ನಿರ್ಧಾರ ಮಾಡಿ. ಅಕಸ್ಮಾತ್ ನಿಮ್ಮ ಮನಸ್ಸು ನಿಮ್ಮ ಮಾತು ಕೇಳ್ತಿಲ್ಲ ಅಂದ್ರೆ ಒಂದು ಪೇಪರ್ ನಲ್ಲಿ ನಿಮಗನ್ನಿಸಿದ್ದನ್ನೆಲ್ಲ ಬರೆದು ಸುಟ್ಟು ಹಾಕಿ, ಮನಸ್ಸು ನಿರಾಳ ಅನ್ಸುತ್ತೆ.

ಮೂಲ

6. ಇಲ್ಲ/ಆಗಲ್ಲ ಅನ್ನೋದನ್ನ ಅಭ್ಯಾಸ ಮಾಡ್ಕೊಳ್ಳಿ

ಯಾರಾರು ಏನಾರು ಕೆಲಸ ಹೇಳಿದಾಗ ಮನಸ್ಸು ಆಗಲ್ಲ ಅಂತಿದ್ರು ತುಟಿ ಹೂ ಅನ್ನೋಕೆ ಬಿಡಬೇಡಿ. ನಿಮಗಿಷ್ಟ ಇಲ್ಲದ್ದನ್ನ ಕೇಳಿದ್ರೆ ಇಲ್ಲ ಅನ್ನೋ ಅಭ್ಯಾಸ ಮಾಡ್ಕೊಳ್ಳಿ ಅಥವಾ ಆ ಕೆಲಸ ಇಷ್ಟ ಪಡೋ ವ್ಯಕ್ತಿಗೆ ಅದನ್ನ ಹೇಳೋ ಅಭ್ಯಾಸ ಮಾಡ್ಕೊಳ್ಳಿ ನಿಮಗೂ ಖುಷಿ ಅವರಿಗೂ ಖುಷಿ. ಹತ್ತು ಕೆಲಸ ಒಪ್ಪಿಕೊಂಡು ಸರಿಯಾಗಿ ಮಾಡದೇ ಇರೋಕ್ಕಿಂತ ಒಂದನ್ನ ಸರಿಯಾಗಿ ಮಾಡೋದು ಒಳ್ಳೇದಲ್ವಾ?

ಮೂಲ

7. ಮನೆಯೋರ ಜೊತೆ ಹೆಂಗಿರಬೇಕು ಅಂತ ತಿಳ್ಕೊಳಿ

ಯಾವುದಾದ್ರೂ ಹಬ್ಬ ಹರಿದಿನಗಳಲ್ಲಿ ಎಲ್ಲರೂ ಒಂದು ಕಡೆ ಸೇರಿ ಮಾತಾಡೋ ಪರಿಸ್ಥಿತೀಲಿ ನಿಮಗೆ ಅಲ್ಲಿಂದ ಓಡೋಗ್ಬೇಕು ಅಂತ ಅನ್ಸಿದ್ರೆ ನಿಮಗೆ ನಿಮ್ಮ ಕುಟುಂಬದಲ್ಲೂ ಒತ್ತಡ ಇದೆ ಅಂತರ್ಥ. ನೆಂಟರ ಕೊಂಕು, ಅದಕ್ಕೆ ತಲೆ ಆಡಿಸೋ ಅಪ್ಪ - ಅಮ್ಮ ನಿಮಗೆ ಹಿಂಸೆ ಅನ್ನಿಸ್ತಿದ್ರೆ ಅವ್ರನ್ನೆಲ್ಲ ಬದಿಗಿಟ್ಟು ಯೋಚ್ನೆ ಮಾಡಿ ಅಥವಾ ಅವರು ಮಾತು ಆರಂಬಿಸೋಕೆ ಮುಂಚೆ ನೀವೇ ನಿಮಗಿಷ್ಟ ಆಗೋ ಮಾತು ಶುರು ಮಾಡಿ, ಇನ್ನು ಕಷ್ಟ ಅನ್ಸಿದ್ರೆ ಸ್ವಲ್ಪ ಸಮಯ ಮಾತ್ರ ಅವರ ಜೊತೆಲಿರಿ, ನಿಮಗೆ ಹೆಚ್ಚು ತೊಂದ್ರೆ ಕೊಡೊ ಸಂಬಂಧಗಳು ದೂರ ಇದ್ದಷ್ಟು ಒಳ್ಳೇದು.

ಮೂಲ

8. ಹಿಂದೆ ಮಾಡಿದ ಕೆಲಸ ಆಡಿದ ಮಾತು ಮರೆತುಬಿಡಿ

ಹಿಂದೆ ಯಾರ ಜೊತೆಲಾದ್ರೂ ಜಗಳ ಆಡಿದ್ರೆ ಅಥವಾ ಚಿಕ್ಕವಯಸ್ಸಿನಲ್ಲಿ ಯಾವತ್ತಾದ್ರೂ ತಪ್ಪು ಮಾಡಿದ್ರೆ ಅದನ್ನೇ ಮೆಲುಕು ಹಾಕೋದು ಬಿಡಿ, ಅದರಿಂದ ಏನೂ ಬದಲಾಗಲ್ಲ ಅನ್ನೋದು ನಿಮಗೆ ಗೊತ್ತಿದೆ ತಾನೇ. ನೆನ್ನೆ ಬಗ್ಗೆ ಯೋಚ್ನೆ ಮಾಡೋದ್ರಿಂದ ನೀವು ಅದೇ ಘಟನೆಗಳಲ್ಲಿ ಜೀವನ ಮಾಡೋದು ಹೆಚ್ಚು, ಅದು ನಿಜ ಜೀವನದ ಒತ್ತಡಕ್ಕಿಂತ ನಿಮಗೆ ಹೆಚ್ಚು ತೊಂದ್ರೆ ಕೊಡುತ್ತೆ. ಹಳೇದನ್ನ ಮರೆಯೋ ಪ್ರಯತ್ನ ಮಾಡಿ ಅಥವಾ ಬೇರೆ ವಿಷಯಗಳಲ್ಲಿ ನಿಮ್ಮನ್ನ ತೊಡಗಿಸಿಕೊಳ್ಳಿ.

ಮೂಲ

ಕೇಳಿದ್ರೇನೇ ನಿರಾಳ ಅನ್ಸುತ್ತೆ ಇನ್ನು ಮಾಡಿದ್ರೆ.... ಹಾಗಿದ್ರೆ ತಡ ಯಾಕೆ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: