ಈ 11 ಕಾರಣ ಕೇಳಿದ್ಮೇಲೆ ಆದಷ್ಟು ಬೇಗ ಮದುವೆ ಆಗೋದೇ ಒಳ್ಳೇದು ಅಂತ ಒಪ್ಕೋತೀರಿ

ಬೇಗ ಮಕ್ಕಳು ಮಾಡ್ಕೋಬೇಕು ಅನ್ನೋ ಒತ್ತಡ ಇರಲ್ಲ

ಈಗೀಗ ಆದಷ್ಟು ಲೇಟಾಗಿ ಮದುವೆ ಆಗೋದೇ ಒಂಥರಾ ಫ್ಯಾಶನ್ ಆಗೋಗಿದೆ. ಮೂವತ್ತು ದಾಟಿದ ಮೇಲೆ ಮಾಡ್ಕೊಂಡ್ರೆ ಆಯ್ತು ಅನ್ನೋರು ಸಕ್ಕತ್ ಜನ ಇದಾರೆ. ಇಪ್ಪತ್ತು-ಇಪ್ಪತ್ತೈದು ವರ್ಷಕ್ಕೆಲ್ಲ ಮದುವೆ ಆಗೋ ದಿನಗಳು ಹೊಟೋಗಿವೆಯಾ ಅನ್ನಿಸುತ್ತೆ ಒಂದೊಂದ್ಸಲ. ಹಾಗೇನೆ ಸಮಾಜದಲ್ಲೂ "ಇನ್ನೂ ಮದುವೆ ಆಗಿಲ್ವಾ?" ಅಂತ ಕೇಳೋರು ಕೂಡ ಕಡಿಮೆ ಆಗೋಗಿದಾರೆ. ಆದರೆ ನಿಜವಾಗಲೂ ನೋಡುದ್ರೆ ಬೇಗೆ ಮದುವೆ ಆಗೋದು ಅಂಥ ಕೆಟ್ಟ ಐಡಿಯಾ ಏನಲ್ಲ. ಪೂರ್ತಿ ಸೆಟಲ್ ಆಗೋ ಮುಂಚೆ ಮದುವೆ ಆಗಬಾರದು ಅನ್ನೋದ್ರಲ್ಲೂ ಅರ್ಥ ಇದೆ, ಆದರೆ ಬೇಗ ಮದುವೆ ಆಗೋದ್ರಲ್ಲೂ ಬಹಳ ಬಹಳ ಲಾಭಗಳಿವೆ.…

1. ಮದುವೆ ಆಗಕ್ಕೆ ಇದೇ ಸರಿಯಾದ ಸಮಯ ಅನ್ನೋದೇನೂ ಇಲ್ಲ; ಯಾವಾಗ ಬೇಕಾದರೂ ಆಗ್ಬೋದು

ಮದುವೆ ಅನ್ನೋದು ಒಂದು ಮುಖ್ಯವಾದ ನಿರ್ಧಾರ. ಯಾರ್ನ ಮಾದುವೆ ಆಗಬೇಕು ಅನ್ನೋ ನಿರ್ಧಾರ 21ನೇ ವಯಸ್ಸಿಗೆ ಎಷ್ಟು ಕಷ್ಟಾನೋ 40ನೇ ವಯಸ್ಸಲ್ಲೂ ಅಷ್ಟೇ ಕಷ್ಟ. ನಿಜಕ್ಕೂ "ಮದುವೆಗೆ ಈಗ ರೆಡಿ ಇದೀನಿ" ಅನ್ನೋ‌ ಸಮಯ ಬರೋದೇ ಇಲ್ಲ. ಆದ್ದರಿಂದ ಮದುವೆ ಮಾಡ್ಕೋಬೋದು ಅನ್ಸೋರು ಯಾರಾದ್ರೂ ಸಿಕ್ರೆ ಪೀಪಿ ಊದ್ಸಕ್ಕೆ ಕಾಯೋದರಲ್ಲಿ ಅರ್ಥಾನೇ ಇಲ್ಲ.

ಮೂಲ

2. ಬೇಗ ಮದುವೆ ಮಾಡ್ಕೊಂಡ್ರೆ ಆದಷ್ಟು ಬೇಗ ಮಕ್ಕಳು ಮಾಡ್ಕೋಬೇಕು ಅನ್ನೋದಿರಲ್ಲ; ಸ್ವಲ್ಪ ವರ್ಷ ಆರಾಮಾಗಿ ಇರ್ಬೋದು

ಮದುವೆ ಆದ ಕೆಲವು ವರ್ಷ ಆರಾಮಾಗಿರ್ಬೇಕು ಅನ್ನೋ‌ ಆಸೆ ಯಾವ ಗಂಡ-ಹೆಂಡತಿಗೆ ಇರಲ್ಲ ಹೇಳಿ? ವಯಸ್ಸು ಜಾಸ್ತಿ ಆಗೋಗಿದ್ರೆ ಮದುವೆ ಆಗ್ತಿದ್ದಂಗೇ ಮಗು ಮಾಡ್ಕೋಬೇಕು ಅನ್ನೋ ಒತ್ತಡ ಇರುತ್ತೆ. ಯಾಕಂದ್ರೆ ಹೆಣ್ಣಿನ ದೇಹದಲ್ಲಿ ಆಗೋ ವ್ಯತ್ಯಾಸಗಳಿಂದ ಅವಳು ಆದಷ್ಟು ಬೇಗ ತಾಯಿ ಆಗೋದು ಒಳ್ಳೇದು. ಹಾಗೇ ಮಕ್ಕಳು ಇನ್ನೂ ಆಗದೆ ಇದ್ದಾಗ ಅಲ್ಲಿ ಇಲ್ಲಿ ಸುತ್ತಾಡ್ಕೊಂಡು ಮಜ ಮಾಡ್ಕೊಂಡ್ ಇರಬಹುದು. ತಡ ಮಾಡ್ಕೊಂಡ್ರೆ ಇವೆಲ್ಲ ಕಟ್.

ಮೂಲ

3. ಇಪ್ಪತ್ತು-ಚಿಲ್ಲರೆ ವಯಸ್ಸಾಗಿದ್ದಾಗ ಜೀವನ ಸಂಗಾತಿ ಜೊತೆಗಿದ್ದರೆ ಅದರ ಮಜಾನೇ ಬೇರೆ

ಈ ವಯಸ್ಸು ಜೀವನದಲ್ಲಿ ಮಜಾ ಮಾಡೋ ವಯಸ್ಸು. ಒಂದ್ಸಲ ಹೋದ ಮೇಲೆ ಮತ್ತೆ ವಾಪಸ್ ಬರಲ್ಲ. ಈ ವಯಸ್ಸಲ್ಲಿ ಜೀವನಸಂಗಾತಿ ಜೊತೆಗಿದ್ದರೆ ಅದು ಇಡೀ ಜೀವನದ ಮೇಲೆ ಒಂದು ಒಳ್ಳೇ ಪ್ರಭಾವ ಬೀರುತ್ತೆ. ಚೆನ್ನಾಗಿ ಫ್ರೆಂಡ್ಸ್ ಆಗ್ತೀರಿ, ಒಟ್ಟಗೆ ಜೀವನದ ಸವಾಲುಗಳ್ನ ಎದುರಿಸ್ತೀರಿ… ಮೊದಲ ಸಲ ಫಾರಿನ್ಗೆ ಹೋದಾಗ, ನಿಮ್ಮ ಡ್ರೀಂ ಜಾಬ್ ಸಿಕ್ಕಾಗ, ಮೊದಲ ಸಲ ಬೈಕ್ ಅಥವಾ ಕಾರ್ ತೊಗೊಂಡಾಗ… ಜೊತೆಗೆ ನಿಮ್ಮ ಜೀವನಸಂಗಾತಿ ಇದ್ದರೆ ಅದರ ಮಜಾನೇ ಬೇರೆ!

ಮೂಲ

4. ಬೇಗ ಮದುವೆ ಆದ್ರೆ ಹನಿಮೂನ್ ತುಂಬಾ ಎಂಜಾಯ್ ಮಾಡ್ಬೋದು

ಹನಿಮೂನ್ ಅಂದ್ರೆ ಒಂದು ಹೋಟೆಲ್ ರೂಮಲ್ಲಿ ಬಾಗಿಲು ಹಾಕೊಂಡು ನಾಲ್ಕು ದಿನ ಕಳೆಯೋದಲ್ಲ. ಬೇಗ ಮದುವೆ ಆಗಿದ್ರೆ ಪಾರ್ಟಿಗಳಿಗೆ ಹೋಗಬಹುದು, ಟ್ರೆಕ್ಕಿಂಗ್ಗ್ ಹೋಗ್ಬೋದು… ಈಜಕ್ಕೆ ಹೋಗಬಹುದು… ದೇಶದೇಶ ಸುತ್ತಬಹುದು…. ಅದ್ಭುತವಾಗಿ ಹನಿಮೂನ್ ಮಾಡಬಹುದು. ಅದೇ ವಯಸ್ಸಾಗಿದ್ದರೆ ಇವೆಲ್ಲ ಮಾಡೋಕೆ ಮನಸ್ಸೂ ಇರಲ್ಲ, ದೇಹಾನೂ ಕೈ ಕೊಡುತ್ತೆ.

ಮೂಲ

5. ಬೇಗ ಮಕ್ಕಳಾದರೆ ನೀವು ಮಕ್ಕಳ ಜೊತೆ ತುಂಬಾ ಎಂಜಾಯ್ ಮಾಡಬಹುದು

ವಯಸ್ಸಾಗ್ತಾ ಆಗ್ತಾ ಮಕ್ಕಳನ್ನ ಎತ್ಕೊಳೋದೂ ಕಷ್ಟ. ಮಕ್ಕಳು ಏನ್ ಹೇಳುದ್ರೂ ಆಗಲ್ಲ ಅನ್ನಬೇಕಾಗತ್ತೆ. ಕೂಸುಮರಿ ಮಾಡಪ್ಪಾ ಅಂದ್ರೆ ಆಗಲ್ಲ ಅನ್ನಬೇಕಾಗುತ್ತೆ. ಜಯಂಟ್ ವೀಲಲ್ಲಿ ಕೂತ್ಕೊಳಪ್ಪಾ ಅಂದ್ರೆ ಆಗಲ್ಲ ಅಂತೀರಿ. ಕ್ರಿಕೆಟ್ ಆಡಕ್ಕೆ ಬಾರಮ್ಮಾ ಅಂದ್ರೆ ಇಲ್ಲ ಅನ್ನಬೇಕಗುತ್ತೆ. ಒಟ್ನಲ್ಲಿ ಮಕ್ಕಳಾಗೋದು ಲೇಟಾದ್ರೆ ಮಕ್ಕಳಿಗೆ ನೀವು ಪ್ರತಿಯೊಂದಕ್ಕೂ "ಇಲ್ಲ" ಅನ್ನಬೇಕಾಗುತ್ತೆ. ನಿಮ್ಮ ಪ್ರೀತಿ ಕಡಿಮೆ ಅಂತಲ್ಲ, ಆದರೆ ನಿಮ್ಮ ದೇಹಸ್ಥಿತಿ, ನಿಮ್ಮ ಮನಸ್ಥಿತಿ ಆ ಪ್ರೀತಿಗೆ ಅನುಗುಣವಾಗಿ ಇರಲ್ಲ!

ಮೂಲ

6. ಲೇಟಾಗಿ ಮದುವೆ ಆದರೆ ಮಕ್ಕಳು ಇನ್ನೂ ಚಿಕ್ಕೋರಿದ್ದಾಗ್ಲೇ ರಿಟೈರ್ ಆಗಿ ದುಡ್ಡಿನ ಸಮಸ್ಯೆಗಳು ಜಾಸ್ತಿ

ಕೆಲಸ ಮಾಡ್ಕೊಂಡು ಮನೆ ನೋಡ್ಕೊಂಡು ಎಲ್ಲಾ ನಿಭಾಯಿಸಿಕೊಂಡು ಹೋಗೋದು ಸುಲಭದ ಕೆಲಸ ಅಲ್ಲ. ರಿಟೈರ್ ಆದ್ಮೇಲೂ ಮಕ್ಕಳನ್ನ ಬೆಳೆಸೋ ಕೆಲಸ ಸಾಕಷ್ಟು ಬಾಕಿ ಇದ್ದರೆ ಅದೊಂಥರಾ ಕಷ್ಟ. ಇಡೀ ಜೀವನ ಮಕ್ಕಳನ್ನ ನೋಡ್ಕೊಳೋದ್ರಲ್ಲೇ ಕಳ್ದಂಗಾಗುತ್ತೆ. ಸರಿಯಾಗಿ ನೋಡುದ್ರೆ ನೀವು ರಿಟೈರ್ ಆಗೋ ಹೊತ್ತಿಗೆ ನಿಮ್ಮ ಮಕ್ಕಳು ತಮ್ಮ ಕಾಲ ಮೇಲೆ ತಾವು ನಿಂತ್ಕೊಂಡಿರಬೇಕು. ನೀವು ಮೂವತ್ತು ದಾಟಿದ ಮೇಲೆ ಮದುವೆ ಆಗ್ತೀನಿ ಅಂದ್ರೆ ಕಷ್ಟ ಇದೆ.

ಮೂಲ

7. ಬೇಗ ಮದುವೆ ಆದ್ರೆ ಗಂಡ-ಹೆಂಡ್ತಿ ಜಾಸ್ತಿ ಹೊಂದ್ಕೊಂಡ್ ಇರ್ತೀರಿ

ವಯಸ್ಸಾಗ್ತಾ ಆಗ್ತಾ ಬೇರೆಯೋರ ಜೊತೆ ಹೊಂದ್ಕೊಂದ್ ಹೋಗೋದು ಕಷ್ಟ. ಮದುವೆಗಳು ಮುರಿದು ಬೀಳೋ ಸಾಧ್ಯತೆ ಜಾಸ್ತಿ. ಯಾಕಂದ್ರೆ ವಯಸ್ಸಾಗ್ತಾ ಆಗ್ತಾ ನಾನು ಅಂದ್ರೆ ಹಿಂಗೆ, ನನ್ನ ವ್ಯಕ್ತಿತ್ವ ಅಂದ್ರೆ ಇದು ಅನ್ನೋ ಅನಿಸಿಕೆಗಳು ಜಾಸ್ತಿ ಮೂಡಿಬಿಡ್ತವೆ. ಅದನ್ನ ಬದಲಾಯಿಸಿಕೊಳ್ಳೋದು ಕಷ್ಟ. ಆದರೆ ಬದಲಾಯಿಸಿಕೊಳ್ಳಲೇ ಬೇಕಲ್ಲ ಮದುವೆ ಆದಮೇಲೆ?!

ಮೂಲ

8. ಮದುವೆ ಮಾಡ್ಕೊಂಡಾಗ ಮನುಷ್ಯ ಬೆಳೀತಾನೆ; ಅದು ನಿಮ್ಮ ಕೆರಿಯರ್ ಮೇಲೂ ಒಳ್ಳೇ ಪ್ರಭಾವ ಬೀರುತ್ತೆ

ಆಗಲೇ‌ ಹೇಳಿದ್ವಲ್ಲ, ಮದುವೆ ಅನ್ನೋದು ಅಂತಿಂಥ ತಿರುವಲ್ಲ ಜೀವನದಲ್ಲಿ. ಬೇಗ ಮದುವೆ ಆದರೆ ಬೇಗ ಜವಾಬ್ದಾರಿಯಿಂದ ಜೀವನ ಮಾಡೋದು ಕಲಿತುಕೊಳ್ತೀರಿ. ಇದರಿಂದ ನಿಮ್ಮ ಕೆಲಸದಲ್ಲೂ ಪ್ರಭಾವ ಕಾಣಿಸುತ್ತೆ. ನೀವು ಮಾಡೋ ಕೆಲಸಕ್ಕೆ ಮೊಟ್ಟಮೊದಲಾಗಿ ಒಂದು ಗೊತ್ತು-ಗುರಿ ಅಂತ ಸಿಗುತ್ತೆ. ಒಂದ್ ಕಡೆ ಅಪ್ಪಾಪೋಲಿ ತರಹ ತಿರುಗಿಕೊಂಡು ಇರೋದೂ ಕಡಿಮೆ ಆಗುತ್ತೆ, ಇನ್ನೊಂದ್ ಕಡೆ ಬರೀ‌ ಕೆಲಸ ಕೆಲಸ ಕೆಲಸ ಅಂತ ದುಡಿದು ಸುಸ್ತಾಗೋದೂ ನಿಲ್ಲುತ್ತೆ… ಯಾಕಂದ್ರೆ ಮನೆಯಲ್ಲಿ ಗಂಡ/ಹೆಂಡ್ತಿ, ಮಕ್ಕಳು… ಎಲ್ಲಾ ಇರ್ತಾರಲ್ಲ, ಅವರನ್ನ ನೋಡ್ಕೋಬೇಕಲ್ಲ?

ಮೂಲ

9. ಬೇಗ ಮದುವೆ ಆಗೋದ್ರಿಂದ ತಂದೆತಾಯಿ ನೆಂಟರಿಷ್ಟರಿಂದೆಲ್ಲ ಅಷ್ಟು ದೂರ ಹೋಗಲ್ಲ, ಇನ್ನಷ್ಟು ಹತ್ತಿರ ಆಗ್ತೀರಿ

ಇಪ್ಪತ್ತು ದಾಟಿದ್ರಿ ಅಂದ್ರೆ ಯಾಕೋ ಏನೋ‌ ಮನೆಯೋರಿಂದೆಲ್ಲ ತುಂಬ ದೂರ ಆಗ್ತೀರಿ. ಆ ಚಿಕ್ಕಮ್ಮ, ಆ ಆತ್ತೆ, ಆ ದೊಡ್ಡಪ್ಪ… ಯಾರೂ ಬೇಡ ಅನ್ನಿಸುತ್ತೆ. ಎಷ್ಟೋ ಜನ ತಂದೆ-ತಾಯೀನೂ ಬಿಟ್ಟು ದೂರ ಇರಕ್ಕೆ ಇಷ್ಟ ಪಡ್ತಾರೆ. ಆದ್ರೆ ಮದುವೆ ಆಂತ ಆದ್ರೆ ಆ ಫಂಕ್ಷನ್ನು ಈ ಮದುವೆ ಆ ಮುಂಜಿ ಅದು ಇದು ಅಂತ ಹೋಗ್ತಾನೇ ಇರ್ತೀರಿ, ನೆಂಟರಿಷ್ಟರನ್ನ ನೋಡ್ತಾನೇ ಇರ್ತೀರಿ. ಇದರಿಂದೆಲ್ಲ ನಿಮ್ಮ ಸುತ್ತ ಜನ ಇರ್ತಾರೆ, ನೀವೂ ಸುಖವಾಗಿ ಇರ್ತೀರಿ. ಲೇಟಾಗಿ ಮದುವೆ ಆದ್ರೆ ಅಷ್ಟರೊಳಗೆ ನೆಂಟರಿಷ್ಟರೆಲ್ಲ ಬೇಡ ಅನ್ನಿಸಿಬಿಡೋ ಸಾಧ್ಯತೆ ಹೆಚ್ಚು.

ಮೂಲ

10. ಬೇಗ ಮಕ್ಕಳಾದರೆ ನಿಮ್ಮ ಮಕ್ಕಳು ನಿಮಗೆ ಫ್ರೆಂಡ್ಸ್ ತರಹ ಇರ್ತಾರೆ

ಮಕ್ಕಳನ್ನ ಇನ್ನಷ್ಟು ಚೆನ್ನಾಗಿ ಅರ್ಥ ಮಾಡ್ಕೋತೀರಿ… ಯಾಕಂದ್ರೆ ನಿಮ್ಮಲ್ಲೂ ಆ ಯೌವನ ಇನ್ನೂ‌ ಇರುತ್ತೆ. ಲೇಟಾಗಿ ಮದುವೆ ಆದರೆ ಮಕ್ಕಳಿಗೂ ನಿಮಗೂ ಒಂಥರಾ ದೂರ ಉಳಿದುಬಿಡುತ್ತೆ. ಅವರ ಮನಸ್ಸು ಅರ್ಥ ಮಾಡ್ಕೊಳೋದೆ ನಿಮಗೆ ಕಷ್ಟ ಆಗೋಗುತ್ತೆ. ಒಟ್ನಲ್ಲಿ ಮಕ್ಕಳು ಬಯಸುವಂಥ ಒಳ್ಳೇ ಅಪ್ಪಾಮ್ಮ ಆಗೋದು ಕಷ್ಟ.

ಮೂಲ

11. ಏನಾದರೂ ಅನಾಹುತಗಳಾಗಿ ಡೈವೋರ್ಸ್ ಆದರೆ ಇನ್ನೊಂದ್ ಮದುವೆಗೆ ಲೇಟ್ ಅನ್ನಿಸಲ್ಲ

ಇದನ್ನೂ ಹೇಳಲೇಬೇಕು ನೋಡಿ. ಈಗಿನ ಕಾಲದಲ್ಲಿ ಒಂದಲ್ಲ ಒಂದು ಕಾರಣದಿಂದ ಡೈವೋರ್ಸ್ಗಳು ಆಗೋದು ಜಾಸ್ತಿ ಆಗ್ತಿದೆ. ಅದು ಇದು ಸುಳ್ಳು ಹೇಳಿ ಮದುವೆ ಮಾಡೋರು ಇರ್ತಾರೆ. ಹೀಗೆಲ್ಲ ಏನಾದರೂ ಆದರೆ ಅಂಥ ಮದುವೆಯಿಂದ ಹೊರಬಂದು ಇನ್ನೊಂದು ಮದುವೆ ಮಾಡ್ಕೊಳಕ್ಕೆ ಮುಜುಗರ ಅನ್ನಿಸಲ್ಲ, ಯಾಕಂದ್ರೆ ಇನ್ನೂ ವಯಸ್ಸಿರುತ್ತೆ.

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ತೀರಾ ಕಡಿಮೆ ಖರ್ಚಲ್ಲಿ ಕೂದಲು ಚೆನ್ನಾಗಾಗಬೇಕು ಅಂದ್ರೆ ಈ 13 ಪದಾರ್ಥ ಉಪಯೋಗಿಸಿ ನೋಡಿ

ಎಲ್ಲ ಸಾಮಾನ್ಯವಾಗಿ ಮನೇಲೇ ಇರುತ್ತೆ

ತಲೆತುಂಬ ಕೂದಲು ಇರ್ಬೇಕು ಅನ್ನೋದು ಎಲ್ರ ಆಸೆ. ಆದರೆ ನಾನಾ ಕಾರಣಗಳಿಂದ ಈವತ್ತು ಕೂದಲು ಉದುರೋ ಸಮಸ್ಯೆ ಜಾಸ್ತಿ ಆಗ್ತಿದೆ. ನಾವು ಬಳಸೋಂತ ಶಾಂಪೂಗಳು, ಎಣ್ಣೆಗಳು, ಕಣ್ತುಂಬ ನಿದ್ದೆ ಇಲ್ದೆ ಇರೋಂತದ್ದು, ಮಾಲಿನ್ಯ, ಪೌಷ್ಠಿಕ ಆಹಾರ ಕೊರತೆ, ಹಾರ್ಮೋನ್ ಏರುಪೇರಾಗೋದು, ಮಾನಸಿಕ ಸಮಸ್ಯೆ, ಒತ್ತಡಗಳಿಂದ ಕೂದಲು ಉದುರುತ್ತೆ. ಕೂದಲ ಆರೋಗ್ಯಾನ ಕಾಪಾಡ್ಕೊಳ್ಳೋದು ಈವತ್ತಿನ ದಿನಗಳಲ್ಲಿ ನಿಜವಾಗ್ಲೂ ಸವಾಲಾಗೋಗಿದೆ. ಕೂದ್ಲ ಆರೋಗ್ಯವನ್ನ ಕಾಪಾಡ್ಕೊಳ್ಳೋಕೆ ಮನೆಯಲ್ಲೇ ಸಾಕಷ್ಟು ಪದಾರ್ಥಗಳು ಸಿಕ್ತಾವೆ. ಈವತ್ತು ಕೂದಲ ಆರೋಗ್ಯಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡೋ ಜನ ಇದಾರೆ. ಆದ್ರೆ ಕಡಿಮೆ ಖರ್ಚಲ್ಲೇ ಕೂದಲನ್ನ ಕಾಪಾಡ್ಕೋಬೋದು... ಹೇಗೆ ಅಂತ ನೋಡಿ...

1. ಹರಳೆಣ್ಣೆ

ಇದ್ರಲ್ಲಿ ಒಮೆಗಾ 6 ಮತ್ತೆ ರಿಸಿನೋಲೆಕ್ ಆಸಿಡ್ ಇರೊದ್ರಿಂದ ಕೂದಲು ದಟ್ಟವಾಗಿ, ಉದ್ದವಾಗಿ ಮತ್ತೆ ಹೊರಳು ಬರೋದಕ್ಕೆ ಕಾರಣವಾಗತ್ತೆ. ನೆತ್ತಿಯಲ್ಲಿರೋ ಸಹಜವಾದಂತ ಎಣ್ಣೆಯನ್ನ ಇದು ಕಾಪಾಡುತ್ತೆ. ಬೆಳಗ್ಗೆ ಹರಳೆಣ್ಣೆ ತಲೆಗೆ ಹಚ್ಚಿಕೊಂಡು ಚೆನ್ನಾಗಿ ಮಸಾಜ್ ಮಾಡ್ಕೋಬೇಕು. ಆಮೇಲೆ ಉಗುರು ಬೆಚ್ಚಗಿನ ನೀರಲ್ಲಿ ಸೀಗೆಕಾಯಿ ಹಾಕ್ಕೊಂಡು ತಲೆಸ್ನಾನ ಮಾಡ್ಬೇಕು.

2. ಈರುಳ್ಳಿ ರಸ

ಒಂದು ಮೀಡಿಯಂ ಗಾತ್ರ ಇರೋಂತ ಈರುಳ್ಳಿ ತಗೊಳ್ಳಿ. ಅದ್ರಿಂದ ಜ್ಯೂಸ್ ತೆಗೆದು ನೇರವಾಗಿ ತಲೆಗೆ ಹಚ್ಚಿಕೊಳ್ಳಿ. ಈರುಳ್ಳಿ ಜ್ಯೂಸಲ್ಲಿ ಹೆಚ್ಚಾಗಿ ಸಲ್ಫರ್ ಇರೋದ್ರಿಂದ ನೆತ್ತಿಯಲ್ಲಿ ರಕ್ತಸಂಚಾರವನ್ನ ಇದು ಹೆಚ್ಚಿಸುತ್ತೆ. ತಲೆಕೂದಲಲ್ಲಿರೋ ವೈರಾಣು, ಹೇನುಗಳನ್ನ ಇದು ಸಾಯ್ಸತ್ತೆ. ಈರುಳ್ಳಿ ಜ್ಯೂಸನ್ನ ಹಚ್ಚಿಕೊಂಡ್ ಮೇಲೆ ಕೆಲ ಗಂಟೆಗಳ ಕಾಲ ಹಾಗೇ ಬಿಟ್ಟು ಆಮೇಲೆ ಸ್ನಾನ ಮಾಡ್ಬೇಕು. 

3. ಕೊಬ್ಬರಿ ಹಾಲು

ಕೊಬ್ಬರಿ ತುರಿಯನ್ನು ಚೆನ್ನಾಗಿ ಹಿಂಡಿ ಅದರ ಹಾಲಿಗೆ ಅರ್ಧ ನಿಂಬೆ ರಸ ಮತ್ತೆ 4 ಹನಿ ಲ್ಯಾವೆಂಡರ್ ಆಯಿಲ್ ಬೆರೆಸಿ. ತಲೆಬುಡಕ್ಕೆ ಚೆನ್ನಾಗಿ ಹಚ್ಚಿ 4-5 ಗಂಟೆಗಳ ಕಾಲ ಹಾಗೇ ಬಿಡಿ. ಕೊಬ್ಬರಿ ಹಾಲಲ್ಲಿ ಕಬ್ಬಿಣಾಂಶ, ಪೊಟ್ಯಾಶಿಯಂ, ಸಹಜವಾದಂತ ಕೊಬ್ಬಿನಂಶಳು ಇರೋದ್ರಿಂದ ಕೂದಲು ಉದುರೋದನ್ನ ತಡೆಯುತ್ತೆ.

4. ಲೋಳೆಸರದ ಜೆಲ್

ಕೂದಲು ಉದುರೋದನ್ನ ತಡೆಯೋ ಗುಣ ಲೋಳೆಸರದಲ್ಲಿದೆ. ಇದು ಕೂದಲ ಬೆಳವಣಿಗೆಗೂ ಸಹಕಾರಿ. ಲೋಳೆಸರ ಜೆಲ್ಲಿಂದ ತಲೆಗೆ ಚೆನ್ನಾಗಿ ಮಸಾಜ್ ಮಾಡ್ಕೊಂಡು ಒಂದೆರಡು ಗಂಟೆ ಹಾಗೇ ಬಿಟ್ಟು ಸ್ನಾನ ಮಾಡಿ. ನೀರು ತುಂಬಾ ಬಿಸಿ ಇರ್ಬಾದ್ರು, ಉಗುರು ಬೆಚ್ಚಗಿದ್ರೆ ಸಾಕು.

5. ಬೆಟ್ಟದ ನೆಲ್ಲಿಕಾಯಿ ತಿರುಳು

ಕೂದಲು ಉದುರೋದಕ್ಕೆ ಮುಖ್ಯವಾದಂತ ಕಾರಣ ಅಂದ್ರೆ ವಿಟಮಿನ್ ಸಿ ಕೊರತೆ. ಬೆಟ್ಟದ ನೆಲ್ಲಿಕಾಯಲ್ಲಿ ವಿಟಮಿನ್ ಸಿ ಅಂಶ ತುಂಬಾನೇ ಇರತ್ತೆ. ಬೆಟ್ಟದ ನೆಲ್ಲಿಕಾಯಿ ಬೀಜ ತೆಗೆದು ತಿರುಳನ್ನ ತಗೊಂಡು ಅದಕ್ಕೆ ನಿಂಬೆರಸ ಸೇರಿಸಿ ತಲೆಗೆ ಹಚ್ಚಿಕೊಳ್ಳಿ. ಒಂದೆರಡು ಗಂಟೆ ಬಿಟ್ಟು ತಲೆಸ್ನಾನ ಮಾಡಿ. 

6. ಮೆಂತ್ಯೆಸೊಪ್ಪು

ಕೂದಲ ಬೆಳವಣಿಗೆಗೆ ಇದೊಂಥರಾ ದಿವ್ಯೌಷಧಿ ಇದ್ದಂಗೆ. ಇದ್ರಲ್ಲಿ ಪ್ರೋಟೀನು ಮತ್ತೆ ನಿಕೋಟಿನಿಕ್ ಆಸಿಡ್ ಜಾಸ್ತಿ ಇರೋದ್ರಿಂದ ಕೂದಲು ಸೊಂಪಾಗಿ ಬೆಳೆಯೋ ಹಂಗೆ ಮಾಡುತ್ತೆ. ಸೊಪ್ಪನ್ನು ಚೆನ್ನಾಗಿ ರುಬ್ಬಿಕೊಂಡು ಪೇಸ್ಟ್ ತರ ಮಾಡ್ಕೊಳ್ಳಿ. ಇದಕ್ಕೆ ಕೊಬ್ಬರಿ ಎಣ್ಣೆ ಹಾಕಿ ತಲೆಗೆ ಹಚ್ಚಿಕೊಂಡು ಅರ್ಧಗಂಟೆ ಬಳಿಕ ಸ್ನಾನ ಮಾಡಿ.

7. ಗ್ರೀನ್ ಟೀ 

ಗ್ರೀನ್ ಟೀಯಲ್ಲಿ ಆಂಟಿಆಕ್ಸಿಡೆಂಟ್ ಜಾಸ್ತಿ ಇರೋದ್ರಿಂದ ಇದು ಕೂದಲ ಬೆಳವಣಿಗೆಗೆ ಮತ್ತೆ ಕೂದಲು ಉದುರೋದನ್ನ ತಡೆಯುತ್ತೆ. ಉಪಯೋಗಿಸಿರೋಂತ ಗ್ರೀನ್ ಟೀ ಅಥವಾ ಟೀ ಬ್ಯಾಗುಗಳಿಂದ ಅದನ್ನ ತೆಗೆದು ತಗೆಲೆ ಹಚ್ಚಿಕೊಂಡು ಅರ್ಧಗಂಟೆ ಬಳಿಕ ಸ್ನಾನ ಮಾಡಿದ್ರೆ ಕೂದಲು ಉದುರೋದು ತಪ್ಪುತ್ತೆ.

ಮೂಲ

8. ಜ್ಯೇಷ್ಠಮಧು ಬೇರು

ಜ್ಯೇಷ್ಠಮದು ಬೇರಲ್ಲಿ ತಲೆತುರಿಕೆಯನ್ನ ಕಡ್ದಿಮೆ ಮಾಡೋಂತ ಗುಣ ಇದೆ. ಇದು ತಲೆಹೊಟ್ಟನ್ನೂ ಕಡಿಮೆ ಮಾಡುತ್ತೆ. ಜ್ಯೇಷ್ಠಮಧು ಬೇರು ಮತ್ತೆ ಅದಕ್ಕೆ ಒಂದು ಕಪ್ ಹಾಲು ಬೆರಸಿ ಪೇಸ್ಟ್ ತರ ಮಾಡ್ಕೊಂಡು ತಲೆಗೆ ಹಚ್ಕೋಬೇಕು. ರಾತ್ರಿಯಲ್ಲಾ ಹಾಗೇ ಬಿಟ್ಟು ಬೆಳಗ್ಗೆ ಮೈಲ್ಡ್ ಆಗಿರೋಂತ ಶಾಂಪೂನಲ್ಲಿ ತಲೆಸ್ನಾನ ಮಾಡ್ಕೊಂಡ್ರೆ ತಲೆಹೊಟ್ಟು ಸಮಸ್ಯೆ ಹೋಗುತ್ತೆ.

9. ಬೇವಿನ ಸೊಪ್ಪು

ಬೇವಲ್ಲಿ ರಕ್ತಸಂಚಾರ ಜಾಸ್ತಿ ಮಾಡುವ ಮತ್ತೆ ಕೂದಲ ಬುಡವನ್ನ ದೃಢ ಮಾಡೋಂತ ಗುಣ ಇದೆ. ತಲೆಹೊಟ್ಟು, ಹೇನು ಬಾಧೆಗೆ ಇದು ರಾಮಬಾಣ ಇದ್ದಂತೆ. ಒಂದು ಅಳತೆ ನೀರಿಗೆ 10-12 ಬೇವಿನ ಎಲೆ ಹಾಕಿ ಅರ್ಧದಷ್ಟು ಪ್ರಮಾಣ ಆಗೋವರ್ಗೂ ಕುದುಸಿ. ತಣ್ಣಗಾದ ಮೇಲೆ ತಲೆಗೆ ಹಚ್ಚಿಕೊಂಡು ಸ್ವಲ್ಪ ಸಮಯದ ಬಳಿಕ ಸ್ನಾನ ಮಾಡಿ. 

10. ಬೀಟ್-ರೂಟ್ ಸೊಪ್ಪು

ಇದರಲ್ಲಿರೋ ಪ್ರೋಟೀನ್, ಪೊಟ್ಯಾಶಿಯಂ, ವಿಟಮಿನ್ ಬಿ ಮತ್ತೆ ಸಿ ಕೂದಲ ಆರೋಗ್ಯಕ್ಕೆ ತುಂಬಾ ಒಳ್ಳೇದು. ಬೀಟ್-ರೂಟ್ ಸೊಪ್ಪನ್ನ ತೆಗೆದುಕೊಂಡು ನೀರಲ್ಲಿ ಕುದುಸಿ. ಆ ನೀರು ಅರ್ಧ ಪ್ರಮಾಣಕ್ಕೆ ಬರೋವರೆಗೂ ಕುದುಸಿ. ಆಮೇಲೆ ಆ ಎಲೆಗಳ ಜೊತೆಗೆ ಗೋರಂಟಿ ಬೆರಸಿ ಚೆನ್ನಾಗಿ ರುಬ್ಬಿಕೊಳ್ಳಿ. ನೆತ್ತಿಗೆ ಹಚ್ಚಿಕೊಂಡು 20-13 ನಿಮಿಷದ ನಂತ್ರ ಸ್ನಾನ ಮಾಡಿ.ಹಾಗ್ ನೋಡಿ ನಿಮ್ ಕೂದ್ಲು ಹೆಂಗ್ ಇರುತ್ತೆ ಅಂತ.

11. ಮೊಟ್ಟೆಯ ಬಿಳಿಲೋಳೆ

ಇದ್ರಲ್ಲಿರೋ ವಿಟಮಿನ್, ಪ್ರೋಟೀನ್, ಸಹಜ ಎಣ್ಣೆಗಳು ಕೂದಲಿಗೆ ಒಳ್ಳೆ ಪೋಷಣೆ ಕೊಡ್ತಾವೆ. ಎರಡು ಮೊಟ್ಟೆ ತಗೊಂಡು ಅದ್ರಿಂದ ಬಿಳಿಲೋಳೆಯನ್ನ ಸಪರೇಟ್ ಮಾಡ್ಕೊಳ್ಳಿ. ಅದನ್ನ ಚೆನ್ನಾಗಿ ಕಲೆಸಿ ತಲೆಗೆ ಹಚ್ಚಿಕೊಂಡು 20 ನಿಮಿಷದ ಬಳಿಕ ಸ್ನಾನ ಮಾಡಿದ್ರೆ ಕೂದಲು ಸೊಂಪಾಗಿ ಬೆಳೆಯತ್ತೆ.

12. ನಿಂಬೆರಸ

ಎಣ್ಣೆ ಕೂದಲಿರೋರಿಗೆ ಇದು ಒಳ್ಳೇ ಮನೆಮದ್ದು. ಕೂದಲ ಬುಡವನ್ನ ದೃಢ ಮಾಡೋಂತ ಗುಣ ಇದ್ರಲ್ಲಿದೆ. 2-3 ನಿಂಬೆಹಣ್ಣು ತಗೊಂಡು ರಸ ತೆಗೀರಿ. ಅದನ್ನ ಉಗುರುಬೆಚ್ಚಗಿನ ನೀರಲ್ಲಿ ಬೆರಸಿ ತಲೆಗೆ ಹಚ್ಚಿಕೊಳ್ಳಿ. ಐದು ನಿಮಿಷದ ಬಳಿಕ ಸ್ನಾನ ಮಾಡಿ. 

13. ಬೆಳ್ಳುಳ್ಳಿ

ಕೂದಲು ಚೆನ್ನಾಗಿ ಬೆಳೆಯಕ್ಕೆ ಮತ್ತೆ ಉದುರೋದನ್ನ ತಡೆಯೋಂತ ಶಕ್ತಿ ಇದ್ರಲ್ಲಿದೆ. 7-8  ಬೆಳ್ಳುಳ್ಳಿ ಎಳೆಗಳನ್ನ ಚೆನ್ನಾಗಿ ಜಜ್ಜಿಕೊಂಡು ಆಲೀವ್ ಆಯಿಲ್ ಜೊತೆಗೆ ಕುದಿಸಿ. ಅದನ್ನ ಚೆನ್ನಾಗಿ ತಲೆಗೆ ಹಚ್ಚಿಕೊಳ್ಳಿ. ಅಥವಾ ಬೆಳ್ಳುಳ್ಳಿ ರಸ ತೆಗೆದು ಅಷ್ಟೇ ಪ್ರಮಾಣದ ಜೇನುತುಪ್ಪ ಅಥವಾ ಕೊಬ್ಬರಿ ಹಾಲಿಗೆ ಬೆರಸಿ ಹಚ್ಕೋಬೋದು. ವಾರದಲ್ಲಿ ಎರಡು, ಮೂರು ಸಲ ಈ ರೀತಿ ಮಾಡೋದ್ರಿಂದ ಕೂದಲು ಉದುರೋದು ತಪ್ಪತ್ತೆ.  

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: