ಸಿದ್ರಾಮಣ್ಣ ನಾವು ಆಗ್ಲೇ ಹೇಳುದ್ವಿ ನೀವು ಕೇಳ್ಲಿಲ್ಲ; ಈಗ ಏನಾಯ್ತು ನೋಡಿ

ಟ್ವಿಟರ್ ಗಿಟರಲ್ಲೆಲ್ಲ ಸ್ವಲ್ಪ ಹುಷಾರಾಗಿರಬೆಕು ಸಾರ್

ನಾವು ಅವತ್ತೇ ಹೇಳಿದ್ವಿ ವಿಧಾನಸೌಧದಲ್ಲಿ ಯಾರಿಗೂ ಟ್ವಿಟರ್ ಉಪಯೋಗಿಸಕ್ಕೆ ಬರಲ್ಲ ಅಂತ. ನಮ್ಮ ಮಾತಿಗೆಲ್ಲ ಯಾರು ಬೆಲೆ ಕೊಡ್ತಾರೆ ಹೇಳಿ?

ಈಗ ನೋಡಿ, ಯಾರೋ ಚೈನಾದೋರ ಜೊತೆ ಸಿದ್ರಾಮಣ್ಣ ಮೀಟಿಂಗ್ ಮಾಡ್ಬುಟ್ಟು ಸಿಯಾಚೆನ್ (Siachen) ಪ್ರಾಂತದೋರು ಅಂತ ಟ್ವಿಟರಲ್ಲಿ…

ಫೇಸ್ಬುಕ್ಕಲ್ಲಿ…

ಮೂಲ

ಎಲ್ಲ ಕಡೆ ಡಂಗುರ ಬಾರುಸುಬುಟ್ಟೌರೆ.

ನಿಜ, ಮುಖ ನೋಡಿ ಒಬ್ಬ ವ್ಯಕ್ತಿ ಚೈನಾದೋನೋ ನೇಪಾಳದೋನೋ ತ್ರಿಪುರಾ ಗಿಪುರಾ ಮಣಿಪುರ ಗಿಣಿಪುರದೋನೋ ಅಲ್ವೋ ಅಂತ ಹೇಳಕ್ಕಾಗಲ್ಲ… ಆದ್ರೆ ಈ ಸಿಯಾಚೆನ್ (siachen) ಅನ್ನೋದನ್ನ ಚೈನಾ ತನ್ನಾಗಿಸಿಕೋಬೇಕು ಅಂತ ಎಷ್ಟೋ ದಿನದಿಂದ ಹೊಂಚು ಹಾಕ್ತಾ ಇದ್ದರೂ ಭಾರತದ ಒಂದು ಭಾಗಾನೇ. ಇಲ್ಲಿ ನೋಡಿ:

ಮೂಲ

ಹೀಗಿರುವಾಗ ಚೈನಾಗೆ ಜಮ್ಮು ಕಾಶ್ಮೀರದ ಒಂದು ಭಾಗವನ್ನ ಸಿದ್ರಾಮಣ್ಣ ಬರ್ಕೊಟ್ಬುಟ್ರು ಅನ್ನೋ ಟೀಕೆಗಳೆಲ್ಲ ಏಳ್ತಿವೆ.

ಬೇಜೇಪಿ ಸಿ.ಟಿ.ರವಿ ಅಂತೂ ಕ್ಯಾಕರಿಸಿ ಉಗ್ದಿದಾರೆ:

ಈಗ ಟ್ವಿಟರ್ ಮತ್ತೆ ಫೇಸ್ಬುಕ್ಕಿಂದ ಆ ಸಂದೇಶಗಳ್ನ ತೆಗ್ದ್ ಹಾಕಿದಾರೆ, ಸದ್ಯ.

ಆದರೂ ಸ್ವಲ್ಪ ಹುಷಾರಾಗಿರಬೇಕು ಸಿದ್ರಾಮಣ್ಣ. ಅದ್ಯಾರಿಗೆ ಕೊಟ್ಟು ಸಾಮಾಜಿಕ ತಾಣಗಳಿಗೆ ನಿಮ್ಮ ಹೆಸರಲ್ಲಿ ಸಂದೇಶಗಳ್ನ ಹಾಕುಸ್ತಿದೀರೋ ಅವರಿಗೆ ಸ್ವಲ್ಪ ಹೇಳೀಪ್ಪಾ. ಅಷ್ಟೇ ನಾವು ಅವತ್ತೂ ಹೇಳಿದ್ದು, ಇವತ್ತೂ ಹೇಳ್ತಿರೋದು.

ಅದು Siachen ಅಲ್ಲ, Sichuanಉ. ಅಜಗಜಾಂತರ ಸಿದ್ರಾಮಣ್ಣ, ಅಜಗಜಾಂತರ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ತೀರಾ ಕಡಿಮೆ ಖರ್ಚಲ್ಲಿ ಕೂದಲು ಚೆನ್ನಾಗಾಗಬೇಕು ಅಂದ್ರೆ ಈ 13 ಪದಾರ್ಥ ಉಪಯೋಗಿಸಿ ನೋಡಿ

ಎಲ್ಲ ಸಾಮಾನ್ಯವಾಗಿ ಮನೇಲೇ ಇರುತ್ತೆ

ತಲೆತುಂಬ ಕೂದಲು ಇರ್ಬೇಕು ಅನ್ನೋದು ಎಲ್ರ ಆಸೆ. ಆದರೆ ನಾನಾ ಕಾರಣಗಳಿಂದ ಈವತ್ತು ಕೂದಲು ಉದುರೋ ಸಮಸ್ಯೆ ಜಾಸ್ತಿ ಆಗ್ತಿದೆ. ನಾವು ಬಳಸೋಂತ ಶಾಂಪೂಗಳು, ಎಣ್ಣೆಗಳು, ಕಣ್ತುಂಬ ನಿದ್ದೆ ಇಲ್ದೆ ಇರೋಂತದ್ದು, ಮಾಲಿನ್ಯ, ಪೌಷ್ಠಿಕ ಆಹಾರ ಕೊರತೆ, ಹಾರ್ಮೋನ್ ಏರುಪೇರಾಗೋದು, ಮಾನಸಿಕ ಸಮಸ್ಯೆ, ಒತ್ತಡಗಳಿಂದ ಕೂದಲು ಉದುರುತ್ತೆ. ಕೂದಲ ಆರೋಗ್ಯಾನ ಕಾಪಾಡ್ಕೊಳ್ಳೋದು ಈವತ್ತಿನ ದಿನಗಳಲ್ಲಿ ನಿಜವಾಗ್ಲೂ ಸವಾಲಾಗೋಗಿದೆ. ಕೂದ್ಲ ಆರೋಗ್ಯವನ್ನ ಕಾಪಾಡ್ಕೊಳ್ಳೋಕೆ ಮನೆಯಲ್ಲೇ ಸಾಕಷ್ಟು ಪದಾರ್ಥಗಳು ಸಿಕ್ತಾವೆ. ಈವತ್ತು ಕೂದಲ ಆರೋಗ್ಯಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡೋ ಜನ ಇದಾರೆ. ಆದ್ರೆ ಕಡಿಮೆ ಖರ್ಚಲ್ಲೇ ಕೂದಲನ್ನ ಕಾಪಾಡ್ಕೋಬೋದು... ಹೇಗೆ ಅಂತ ನೋಡಿ...

1. ಹರಳೆಣ್ಣೆ

ಇದ್ರಲ್ಲಿ ಒಮೆಗಾ 6 ಮತ್ತೆ ರಿಸಿನೋಲೆಕ್ ಆಸಿಡ್ ಇರೊದ್ರಿಂದ ಕೂದಲು ದಟ್ಟವಾಗಿ, ಉದ್ದವಾಗಿ ಮತ್ತೆ ಹೊರಳು ಬರೋದಕ್ಕೆ ಕಾರಣವಾಗತ್ತೆ. ನೆತ್ತಿಯಲ್ಲಿರೋ ಸಹಜವಾದಂತ ಎಣ್ಣೆಯನ್ನ ಇದು ಕಾಪಾಡುತ್ತೆ. ಬೆಳಗ್ಗೆ ಹರಳೆಣ್ಣೆ ತಲೆಗೆ ಹಚ್ಚಿಕೊಂಡು ಚೆನ್ನಾಗಿ ಮಸಾಜ್ ಮಾಡ್ಕೋಬೇಕು. ಆಮೇಲೆ ಉಗುರು ಬೆಚ್ಚಗಿನ ನೀರಲ್ಲಿ ಸೀಗೆಕಾಯಿ ಹಾಕ್ಕೊಂಡು ತಲೆಸ್ನಾನ ಮಾಡ್ಬೇಕು.

2. ಈರುಳ್ಳಿ ರಸ

ಒಂದು ಮೀಡಿಯಂ ಗಾತ್ರ ಇರೋಂತ ಈರುಳ್ಳಿ ತಗೊಳ್ಳಿ. ಅದ್ರಿಂದ ಜ್ಯೂಸ್ ತೆಗೆದು ನೇರವಾಗಿ ತಲೆಗೆ ಹಚ್ಚಿಕೊಳ್ಳಿ. ಈರುಳ್ಳಿ ಜ್ಯೂಸಲ್ಲಿ ಹೆಚ್ಚಾಗಿ ಸಲ್ಫರ್ ಇರೋದ್ರಿಂದ ನೆತ್ತಿಯಲ್ಲಿ ರಕ್ತಸಂಚಾರವನ್ನ ಇದು ಹೆಚ್ಚಿಸುತ್ತೆ. ತಲೆಕೂದಲಲ್ಲಿರೋ ವೈರಾಣು, ಹೇನುಗಳನ್ನ ಇದು ಸಾಯ್ಸತ್ತೆ. ಈರುಳ್ಳಿ ಜ್ಯೂಸನ್ನ ಹಚ್ಚಿಕೊಂಡ್ ಮೇಲೆ ಕೆಲ ಗಂಟೆಗಳ ಕಾಲ ಹಾಗೇ ಬಿಟ್ಟು ಆಮೇಲೆ ಸ್ನಾನ ಮಾಡ್ಬೇಕು. 

3. ಕೊಬ್ಬರಿ ಹಾಲು

ಕೊಬ್ಬರಿ ತುರಿಯನ್ನು ಚೆನ್ನಾಗಿ ಹಿಂಡಿ ಅದರ ಹಾಲಿಗೆ ಅರ್ಧ ನಿಂಬೆ ರಸ ಮತ್ತೆ 4 ಹನಿ ಲ್ಯಾವೆಂಡರ್ ಆಯಿಲ್ ಬೆರೆಸಿ. ತಲೆಬುಡಕ್ಕೆ ಚೆನ್ನಾಗಿ ಹಚ್ಚಿ 4-5 ಗಂಟೆಗಳ ಕಾಲ ಹಾಗೇ ಬಿಡಿ. ಕೊಬ್ಬರಿ ಹಾಲಲ್ಲಿ ಕಬ್ಬಿಣಾಂಶ, ಪೊಟ್ಯಾಶಿಯಂ, ಸಹಜವಾದಂತ ಕೊಬ್ಬಿನಂಶಳು ಇರೋದ್ರಿಂದ ಕೂದಲು ಉದುರೋದನ್ನ ತಡೆಯುತ್ತೆ.

4. ಲೋಳೆಸರದ ಜೆಲ್

ಕೂದಲು ಉದುರೋದನ್ನ ತಡೆಯೋ ಗುಣ ಲೋಳೆಸರದಲ್ಲಿದೆ. ಇದು ಕೂದಲ ಬೆಳವಣಿಗೆಗೂ ಸಹಕಾರಿ. ಲೋಳೆಸರ ಜೆಲ್ಲಿಂದ ತಲೆಗೆ ಚೆನ್ನಾಗಿ ಮಸಾಜ್ ಮಾಡ್ಕೊಂಡು ಒಂದೆರಡು ಗಂಟೆ ಹಾಗೇ ಬಿಟ್ಟು ಸ್ನಾನ ಮಾಡಿ. ನೀರು ತುಂಬಾ ಬಿಸಿ ಇರ್ಬಾದ್ರು, ಉಗುರು ಬೆಚ್ಚಗಿದ್ರೆ ಸಾಕು.

5. ಬೆಟ್ಟದ ನೆಲ್ಲಿಕಾಯಿ ತಿರುಳು

ಕೂದಲು ಉದುರೋದಕ್ಕೆ ಮುಖ್ಯವಾದಂತ ಕಾರಣ ಅಂದ್ರೆ ವಿಟಮಿನ್ ಸಿ ಕೊರತೆ. ಬೆಟ್ಟದ ನೆಲ್ಲಿಕಾಯಲ್ಲಿ ವಿಟಮಿನ್ ಸಿ ಅಂಶ ತುಂಬಾನೇ ಇರತ್ತೆ. ಬೆಟ್ಟದ ನೆಲ್ಲಿಕಾಯಿ ಬೀಜ ತೆಗೆದು ತಿರುಳನ್ನ ತಗೊಂಡು ಅದಕ್ಕೆ ನಿಂಬೆರಸ ಸೇರಿಸಿ ತಲೆಗೆ ಹಚ್ಚಿಕೊಳ್ಳಿ. ಒಂದೆರಡು ಗಂಟೆ ಬಿಟ್ಟು ತಲೆಸ್ನಾನ ಮಾಡಿ. 

6. ಮೆಂತ್ಯೆಸೊಪ್ಪು

ಕೂದಲ ಬೆಳವಣಿಗೆಗೆ ಇದೊಂಥರಾ ದಿವ್ಯೌಷಧಿ ಇದ್ದಂಗೆ. ಇದ್ರಲ್ಲಿ ಪ್ರೋಟೀನು ಮತ್ತೆ ನಿಕೋಟಿನಿಕ್ ಆಸಿಡ್ ಜಾಸ್ತಿ ಇರೋದ್ರಿಂದ ಕೂದಲು ಸೊಂಪಾಗಿ ಬೆಳೆಯೋ ಹಂಗೆ ಮಾಡುತ್ತೆ. ಸೊಪ್ಪನ್ನು ಚೆನ್ನಾಗಿ ರುಬ್ಬಿಕೊಂಡು ಪೇಸ್ಟ್ ತರ ಮಾಡ್ಕೊಳ್ಳಿ. ಇದಕ್ಕೆ ಕೊಬ್ಬರಿ ಎಣ್ಣೆ ಹಾಕಿ ತಲೆಗೆ ಹಚ್ಚಿಕೊಂಡು ಅರ್ಧಗಂಟೆ ಬಳಿಕ ಸ್ನಾನ ಮಾಡಿ.

7. ಗ್ರೀನ್ ಟೀ 

ಗ್ರೀನ್ ಟೀಯಲ್ಲಿ ಆಂಟಿಆಕ್ಸಿಡೆಂಟ್ ಜಾಸ್ತಿ ಇರೋದ್ರಿಂದ ಇದು ಕೂದಲ ಬೆಳವಣಿಗೆಗೆ ಮತ್ತೆ ಕೂದಲು ಉದುರೋದನ್ನ ತಡೆಯುತ್ತೆ. ಉಪಯೋಗಿಸಿರೋಂತ ಗ್ರೀನ್ ಟೀ ಅಥವಾ ಟೀ ಬ್ಯಾಗುಗಳಿಂದ ಅದನ್ನ ತೆಗೆದು ತಗೆಲೆ ಹಚ್ಚಿಕೊಂಡು ಅರ್ಧಗಂಟೆ ಬಳಿಕ ಸ್ನಾನ ಮಾಡಿದ್ರೆ ಕೂದಲು ಉದುರೋದು ತಪ್ಪುತ್ತೆ.

ಮೂಲ

8. ಜ್ಯೇಷ್ಠಮಧು ಬೇರು

ಜ್ಯೇಷ್ಠಮದು ಬೇರಲ್ಲಿ ತಲೆತುರಿಕೆಯನ್ನ ಕಡ್ದಿಮೆ ಮಾಡೋಂತ ಗುಣ ಇದೆ. ಇದು ತಲೆಹೊಟ್ಟನ್ನೂ ಕಡಿಮೆ ಮಾಡುತ್ತೆ. ಜ್ಯೇಷ್ಠಮಧು ಬೇರು ಮತ್ತೆ ಅದಕ್ಕೆ ಒಂದು ಕಪ್ ಹಾಲು ಬೆರಸಿ ಪೇಸ್ಟ್ ತರ ಮಾಡ್ಕೊಂಡು ತಲೆಗೆ ಹಚ್ಕೋಬೇಕು. ರಾತ್ರಿಯಲ್ಲಾ ಹಾಗೇ ಬಿಟ್ಟು ಬೆಳಗ್ಗೆ ಮೈಲ್ಡ್ ಆಗಿರೋಂತ ಶಾಂಪೂನಲ್ಲಿ ತಲೆಸ್ನಾನ ಮಾಡ್ಕೊಂಡ್ರೆ ತಲೆಹೊಟ್ಟು ಸಮಸ್ಯೆ ಹೋಗುತ್ತೆ.

9. ಬೇವಿನ ಸೊಪ್ಪು

ಬೇವಲ್ಲಿ ರಕ್ತಸಂಚಾರ ಜಾಸ್ತಿ ಮಾಡುವ ಮತ್ತೆ ಕೂದಲ ಬುಡವನ್ನ ದೃಢ ಮಾಡೋಂತ ಗುಣ ಇದೆ. ತಲೆಹೊಟ್ಟು, ಹೇನು ಬಾಧೆಗೆ ಇದು ರಾಮಬಾಣ ಇದ್ದಂತೆ. ಒಂದು ಅಳತೆ ನೀರಿಗೆ 10-12 ಬೇವಿನ ಎಲೆ ಹಾಕಿ ಅರ್ಧದಷ್ಟು ಪ್ರಮಾಣ ಆಗೋವರ್ಗೂ ಕುದುಸಿ. ತಣ್ಣಗಾದ ಮೇಲೆ ತಲೆಗೆ ಹಚ್ಚಿಕೊಂಡು ಸ್ವಲ್ಪ ಸಮಯದ ಬಳಿಕ ಸ್ನಾನ ಮಾಡಿ. 

10. ಬೀಟ್-ರೂಟ್ ಸೊಪ್ಪು

ಇದರಲ್ಲಿರೋ ಪ್ರೋಟೀನ್, ಪೊಟ್ಯಾಶಿಯಂ, ವಿಟಮಿನ್ ಬಿ ಮತ್ತೆ ಸಿ ಕೂದಲ ಆರೋಗ್ಯಕ್ಕೆ ತುಂಬಾ ಒಳ್ಳೇದು. ಬೀಟ್-ರೂಟ್ ಸೊಪ್ಪನ್ನ ತೆಗೆದುಕೊಂಡು ನೀರಲ್ಲಿ ಕುದುಸಿ. ಆ ನೀರು ಅರ್ಧ ಪ್ರಮಾಣಕ್ಕೆ ಬರೋವರೆಗೂ ಕುದುಸಿ. ಆಮೇಲೆ ಆ ಎಲೆಗಳ ಜೊತೆಗೆ ಗೋರಂಟಿ ಬೆರಸಿ ಚೆನ್ನಾಗಿ ರುಬ್ಬಿಕೊಳ್ಳಿ. ನೆತ್ತಿಗೆ ಹಚ್ಚಿಕೊಂಡು 20-13 ನಿಮಿಷದ ನಂತ್ರ ಸ್ನಾನ ಮಾಡಿ.ಹಾಗ್ ನೋಡಿ ನಿಮ್ ಕೂದ್ಲು ಹೆಂಗ್ ಇರುತ್ತೆ ಅಂತ.

11. ಮೊಟ್ಟೆಯ ಬಿಳಿಲೋಳೆ

ಇದ್ರಲ್ಲಿರೋ ವಿಟಮಿನ್, ಪ್ರೋಟೀನ್, ಸಹಜ ಎಣ್ಣೆಗಳು ಕೂದಲಿಗೆ ಒಳ್ಳೆ ಪೋಷಣೆ ಕೊಡ್ತಾವೆ. ಎರಡು ಮೊಟ್ಟೆ ತಗೊಂಡು ಅದ್ರಿಂದ ಬಿಳಿಲೋಳೆಯನ್ನ ಸಪರೇಟ್ ಮಾಡ್ಕೊಳ್ಳಿ. ಅದನ್ನ ಚೆನ್ನಾಗಿ ಕಲೆಸಿ ತಲೆಗೆ ಹಚ್ಚಿಕೊಂಡು 20 ನಿಮಿಷದ ಬಳಿಕ ಸ್ನಾನ ಮಾಡಿದ್ರೆ ಕೂದಲು ಸೊಂಪಾಗಿ ಬೆಳೆಯತ್ತೆ.

12. ನಿಂಬೆರಸ

ಎಣ್ಣೆ ಕೂದಲಿರೋರಿಗೆ ಇದು ಒಳ್ಳೇ ಮನೆಮದ್ದು. ಕೂದಲ ಬುಡವನ್ನ ದೃಢ ಮಾಡೋಂತ ಗುಣ ಇದ್ರಲ್ಲಿದೆ. 2-3 ನಿಂಬೆಹಣ್ಣು ತಗೊಂಡು ರಸ ತೆಗೀರಿ. ಅದನ್ನ ಉಗುರುಬೆಚ್ಚಗಿನ ನೀರಲ್ಲಿ ಬೆರಸಿ ತಲೆಗೆ ಹಚ್ಚಿಕೊಳ್ಳಿ. ಐದು ನಿಮಿಷದ ಬಳಿಕ ಸ್ನಾನ ಮಾಡಿ. 

13. ಬೆಳ್ಳುಳ್ಳಿ

ಕೂದಲು ಚೆನ್ನಾಗಿ ಬೆಳೆಯಕ್ಕೆ ಮತ್ತೆ ಉದುರೋದನ್ನ ತಡೆಯೋಂತ ಶಕ್ತಿ ಇದ್ರಲ್ಲಿದೆ. 7-8  ಬೆಳ್ಳುಳ್ಳಿ ಎಳೆಗಳನ್ನ ಚೆನ್ನಾಗಿ ಜಜ್ಜಿಕೊಂಡು ಆಲೀವ್ ಆಯಿಲ್ ಜೊತೆಗೆ ಕುದಿಸಿ. ಅದನ್ನ ಚೆನ್ನಾಗಿ ತಲೆಗೆ ಹಚ್ಚಿಕೊಳ್ಳಿ. ಅಥವಾ ಬೆಳ್ಳುಳ್ಳಿ ರಸ ತೆಗೆದು ಅಷ್ಟೇ ಪ್ರಮಾಣದ ಜೇನುತುಪ್ಪ ಅಥವಾ ಕೊಬ್ಬರಿ ಹಾಲಿಗೆ ಬೆರಸಿ ಹಚ್ಕೋಬೋದು. ವಾರದಲ್ಲಿ ಎರಡು, ಮೂರು ಸಲ ಈ ರೀತಿ ಮಾಡೋದ್ರಿಂದ ಕೂದಲು ಉದುರೋದು ತಪ್ಪತ್ತೆ.  

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: