ಹೊಸ ವರ್ಷಕ್ಕೆ ಈ 8 ಸಣ್ಣಪುಟ್ಟ ತೀರ್ಮಾನಗಳ್ನ ತೊಗೊಂಡ್ರೆ ನಿಮ್ಮ ಕನಸು ನನಸಾಗುತ್ತೆ

ಎಲ್ಲಾ ನಿಮ್ಮ ಕೈಯಲ್ಲೇ ಇದೆ

ನಾವೆಲ್ಲಾ ಜೀವನದಲ್ಲಿ ಸಣ್ಣ ಪುಟ್ಟ ವಿಷ್ಯಕ್ಕೆಲ್ಲಾ ಆಣೆ ಪ್ರಮಾಣ ಮಾಡೋದು ಈಗಂತು ಸಾಮಾನ್ಯ ಆಗೋಗಿದೆ. ಬೇರೆಯವರಿಗೋಸ್ಕರ ಏನೇನೋ ಮಾಡೊ ನೀವು,  ನಿಮ್ಮ ಜೀವ್ನ ಸುಂದರವಾಗಿರ್ಬೇಕು ಅಂತ ನಿಮ್ಮಲ್ಲೇ ಕೆಲವೊಂದು ಪ್ರಾಮಿಸ್ ಮಾಡ್ಕೋಬೇಕು ಅನ್ಸಲ್ವಾ. ಈ ಕೆಲವು ಸಣ್ಣ ಪುಟ್ಟ ಪ್ರಾಮಿಸ್ ಮಾಡ್ಕೋಳದ್ರಿಂದ ನಿಜವಾಗಿಯೂ ನಿಮ್ಮ ಜೀವ್ನದಲ್ಲಿ ತುಂಬಾ ಬದಲಾವಣೆಗಳು ಕಾಣ್ಸತ್ತೆ. ಕನಸುಗಳು ನನಸಾಗುತ್ತವೆ.

1. "ಮಾಡೊ ಕೆಲಸ ಶಿಸ್ತಾಗಿ ಮಾಡ್ತೀನಿ"

ನೀವು ಗುರಿ ಮುಟ್ಟಬೇಕು ಅಂತಿದ್ರೆ ಅದಕ್ಕೆ ಸರಿಯಾಗಿರೋ ಕ್ರಮ ಅನುಸರಿಸೋದು ಒಳ್ಳೇದು. ಸರಿಯಾದ ಪ್ಲಾನ್ ಇಲ್ಲಾಂದ್ರೆ ನೀವು ಅಂದುಕೊಂಡಿರೋ ಗುರಿ ಮುಟ್ಟಕಾಗ್ದೇ ಹಾಳಾಗೋಗುತ್ತೆ. ಉದಾಹರಣೆಗೆ, ಕೆಲವ್ರು ಮೊಬೈಲ್ನ ಮಾತಾಡಕ್ಕೆ ಮಾತ್ರ ಉಪಯೋಗಿಸ್ತಾರೆ. ಇನ್ನು ಕೆಲುವ್ರಿಗೆ ಅದು ಜೀವ್ನದ ಒಂದು ಭಾಗ ಆಗೋಗಿರುತ್ತೆ. ಬೆಳಿಗ್ಗೆ ಏಳಕ್ಕೆ ಅಲಾರಂ ನಿಂದ ಹಿಡಿದು, ಬರ್ತ್-ಡೇ, ಮೀಟಿಂಗ್ ರಿಮೈಂಡರ್ಗಳು ಮತ್ತು ತಿಂಗಳ ಕರ್ಚು ವೆಚ್ಚ ಲೆಕ್ಕನೊ ಮೊಬೈಲಲ್ಲೆ ಮಾಡ್ತಾರೆ. ಪ್ರೀತಿಯಿಂದ ಜೋಪಾನವಾಗಿ ಕಾಪಾಡ್ಕೋತಾರೆ.

ಮೂಲ

2. "ತೀರಾ ಕಷ್ಟ ಆಗುತ್ತೆ ಅಂತ ಅನ್ಸಿದ್ರೆ ಧೈರ್ಯವಾಗಿ ’ಇಲ್ಲ’ ಅಂತೀನಿ"

ನಿಮ್ಗೆ ಪರಿಚಯದವ್ರು, ಹತ್ತಿರದೌರು ಸಹಾಯ ಕೇಳಿದಾಗ ಆಗಲ್ಲ ಅಂತ ಹೇಳೊಕ್ಕಾಗಲ್ಲ. ಆದ್ರೆ ನಿಮ್ಗೆ ಚೆನ್ನಾಗಿ ಗೊತ್ತಿರುತ್ತೆ ಆ ಕೆಲ್ಸ ನಿಮ್ಗೆ ಮಾಡಕ್ಕೆ ಇಷ್ಟ ಇರೊಲ್ಲ ಅಥವಾ ಮಾಡೊಕ್ಕೆ ಆಗೊಲ್ಲ ಅಂಥ. ಅವಾಗ ಅನವಶ್ಯಕವಾಗಿ ತೊಂದರೆ ತಗೊಳ್ಳದೆ ದೈರ್ಯವಾಗಿ ಆಗಲ್ಲ ಅಂತ ಹೇಳಿ. ಪ್ರಾರಂಭದಲ್ಲಿ ’ಆಗೊಲ್ಲ’ ಅನ್ನಕ್ಕೆ ಕಷ್ಟ ಆದ್ರು, ಹೋಗ್ತಾ ಹೋಗ್ತಾ ಅಭ್ಯಾಸ ಆಗುತ್ತೆ.

ಮೂಲ

3. "ಬೆಳಿಗ್ಗೆ ಗಲಿಬಿಲಿ ಮಾಡ್ಕೊಳ್ಳದೆ ಪ್ಲಾನ್ ಪ್ರಕಾರ ಕೆಲ್ಸ ಶುರು ಮಾಡ್ತೀನಿ"

ಎದ್ದ ಕೊಡಲೆ ಇವತ್ತು ಅದು ಮಾಡ್ಬೇಕು ಇದು ಮಾಡ್ಬೇಕು ಅಂತ ಒಂದೇ ಸಮನೆ ತಲೆ ಕೆಡಿಸ್ಕೊಬೇಡಿ. ಎದ್ದು ಮನಸ್ಸಿಗೆ ಖುಷಿ ಅನ್ಸೊ ಹಾಡುಕೇಳಿ, ಪೇಪರ್ ನಲ್ಲಿ ದಿನ ಬರೋ ಒಳ್ಳೆ ಕಾಲಂ, ಓಳ್ಳೆ ಪುಸ್ತಕದ ಒಂದು ಅಂಕಣ ಓದಿ. 20 ರಿಂದ 30 ನಿಮಿಷ ವ್ಯಾಯಾಮ ಮಾಡಿ. ನಂತರ ಆರಾಮಾಗಿ ಇವತ್ತು ಏನೇನು ಕೆಲ್ಸ ಮಾಡಬೇಕು ಅಂತ ಪಟ್ಟಿ ಮಾಡಿಕೊಳ್ಳಿ, ಕೆಲ್ಸ ಪ್ರಾರಂಭ ಮಾಡಿ. ಇದರಿಂದ ಎಷ್ಟೋಂದು ಬದಲಾವಣೆ ಆಗುತ್ತೆ ಅನ್ನೊದು ಗೊತ್ತಾಗುತ್ತೆ.

ಮೂಲ

4. "ದಿನ ಹೆಂಗೆ ಪ್ರಾರಂಭ ಮಾಡ್ತೀನೋ ಅದೇ ರೀತಿ ಮುಗಿಸ್ತೀನಿ"

ನೀವು ಬೆಳಿಗ್ಗೆ ಎದ್ದು ಏನೇನು ಮಾಡ್ಬೇಕು ಅಂತ ಪ್ಲಾನ್ ಮಾಡಿರ್ತೀರೋ, ಅದನ್ನೆಲ್ಲ ಸರಾಗವಾಗಿ ಮುಗಿಸೊದು ಮುಖ್ಯ. ಕೆಲ್ಸದ ಮಧ್ಯ ಯಾರೊ ಕರೆದ್ರು ಅಂತ ಕೆಲ್ಸ ಅರ್ಧಂಬರ್ಧ ಮಾಡಿ ಬಿಟ್ಟು ಬಿಡಬೇಡಿ. ಅನ್ಕೊಂಡಿದ್ದ ಕೆಲ್ಸಾನ ಸರಿಯಾದ ಸಮಯಕ್ಕೆ ಮುಗಿಸಿದ್ರೆ ನೆಮ್ಮದಿ ಇರುತ್ತೆ ಮತ್ತು ನಿಶ್ಚಿಂತೆಯಿಂದ ಆಫೀಸಿಂದ ಮನೆಗೆ ಬರ್ಬೋದು.

ಮೂಲ

5. "ದೊಡ್ಡ ಕೆಲ್ಸಗಳನ್ನ ಬಂಡೆತರ ಒಂದೇ ಸಲಕ್ಕೆ ಮೈಮೇಲೆ ಎಳ್ಕೊಳಲ್ಲ, ಹಂತಹಂತವಾಗಿ ಮಾಡ್ತೀನಿ"

ನೀವು ಯಾವ್ದೇ ಕೆಲ್ಸ ಒಪ್ಪಿಕೊಳ್ಳೊ ಮುಂಚೆ ಎಲ್ಲಾತರ ಯೊಚನೆ ಮಾಡಿ ಒಪ್ಪಿಕೊಳ್ಳಿ. ದೊಡ್ಡ ಪ್ರಾಜೆಕ್ಟ್ ಗಳಾದ್ರೆ, ಸುಮ್ನೆ ಜೋಶ್ ನಲ್ಲಿ ಒಪ್ಪ್ಕೊಂಡುಬಿಡಬೇಡಿ. ಯಾಕೆಂದ್ರೆ ಮಾಡೊಕ್ಕೆ ಆಗ್ಲಿಲ್ಲ ಅಂತಂದ್ರೆ ತಲೆ ಮೇಲೆ ಕೈ ಹೊತ್ತು ಕುತ್ಕೊಬೇಕಾಗುತ್ತೆ. ಇದರ ಬದಲು ದೊಡ್ಡ ಕೆಲ್ಸಗಳನ್ನ ಪ್ಲಾನ್ ಮಾಡಿ ಎರಡು ಅಥವಾ ಮೂರು ಹಂತದಲ್ಲಿ ಮಾಡಿ ಮುಗ್ಸಿ.

ಮೂಲ

6. "ನನ್ನ ಕೈಯಲ್ಲಿ ನಿಜವಾಗ್ಲು ಸಾಧ್ಯ ಆಗೊಷ್ಟು ಕೆಲ್ಸ ಮಾತ್ರ ಒಪ್ಕೋತೀನಿ"

ನಿಮ್ಮ ಬಗ್ಗೆ ನಿಮಗೆ ಅಹಂ ಬೆಳೆಸಿಕೋಂಡು ಅಸಾದ್ಯ ಅನ್ನೊವಷ್ಟು ಕೆಲ್ಸನ ಸಾದಿಸ್ತೀನಿ ಅನ್ನೊ ಭ್ರಮೆನ ಬಿಟ್ಟುಬಿಡಿ. ಹಾಸಿಗೆ ಇದ್ದಷ್ಟು ಕಾಲು ಚಾಚು ಅನ್ನೊ ಗಾದೆ ತರ ನಿಜವಾಗ್ಲು ಮಾಡಕ್ಕೆ ಸಾದ್ಯಆಗೊ ಅಷ್ಟು ಕೆಲ್ಸ ಒಪ್ಪಿಕೊಬೇಕು. ಸಾಮರ್ಥ್ಯಕ್ಕೆ ತಕ್ಕಷ್ಟು ಕೆಲ್ಸ ಮಾಡಿ ಚೆನ್ನಾಗಿರೊ ಜೀವನ ರೂಪಿಸ್ಕೊಳ್ಳಿ.

ಮೂಲ

7. "ತಲೆ ಮೇಲೆ ಬೆಟ್ಟ ಹೊತ್ತ್ಕೊಂಡಿರೋ ತರ ಇರಲ್ಲ"

ಎಲ್ಲರಂತೆ ನೀವು ಸಹ ಸಾಮಾನ್ಯ ಮನುಷ್ಯರು. ಎಲ್ಲ ಟೈಂ ಒಂದೆತರ ಇರೊಲ್ಲ. ಏನಾದ್ರು ಕಷ್ಟ ಬಂದ್ರೆ ವಿಪರೀತ ತಲೆ ಕೆಡಿಸ್ಕೊಳ್ಳದೆ ಆರಾಮಾಗಿ ನಿಭಾಯಿಸೋದನ್ನ ಕಲಿತ್ಕೊಳ್ಳಿ. ಇದು ಅಬ್ಯಾಸ ಆಗೋದ್ರೆ ಎಲ್ಲಾ ಕಷ್ಟಗಳನ್ನ ನೀರು ಕುಡಿದಷ್ಟು ಸುಲಭವಾಗಿ ಬಗೆಹರಿಸ್ಬೋದು.

ಮೂಲ

8. "ಯಶಸ್ಸು ಸಿಕ್ಕಾಗ ನನಗೆ ನಾನೇ ಬೆನ್ನು ತಟ್ಕೋತೀನಿ"

ನಿಮ್ಮ ಜೀವನದ ಏಣಿಯ ಪ್ರತಿ ಮೆಟ್ಟಿಲು ಮೇಲೆ ಹತ್ತಿದಾಗಲು ಅಬ್ಬಾ ಮೇಲೆಬಂದೆ ಅನ್ನೊ ನಿಟ್ಟುಸಿರು ಬಿಡೊದಕ್ಕಿಂತ ನಿಮ್ಮಲ್ಲಿ ಖುಷಿ, ಉತ್ಸಾಹ ಜಾಸ್ತಿ ಹೆಚ್ಚಾಗಬೇಕು. ತುಂಬಾಸಲ ನಮ್ಮ ಸಣ್ಣ ಪುಟ್ಟ ಯಶಸ್ಸನ್ನು ಸಂಭ್ರಮಿಸೊದನ್ನ ಮರೆತು ಮುಂದಿನ ಗುರಿ ಬಗ್ಗೆ ಯೋಚಿಸಿ ಮುಂದೆ ಓಡ್ತಿರ್ತಿವಿ, ಇದನ್ನ ಬಿಟ್ಟು ಎಲ್ಲದನ್ನು ಖುಷಿಯಿಂದ ಮಜಾ ಮಾಡೊದನ್ನ ರೂಡಿಸ್ಕೊಳ್ಳಿ. ಇಲ್ಲಾಂದ್ರೆ ನಿಮ್ಮ ಜೀವನ ಖುಷಿ ಇಲ್ಲದಿರೋ ಯಶಸ್ಸಿನ ಶಿಖರ ಆಗ್ಬಿಡುತ್ತೆ.

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

2017ರಲ್ಲಿ ಒತ್ತಡ ಕಡಿಮೆ ಮಾಡ್ಕೊಂಡು ಜೀವನ ಸವೀಬೇಕು ಅಂತಿದ್ರೆ ಇಲ್ಲಿ ಸ್ವಲ್ಪ ಕೇಳಿ

ಸುಂದರ ಬದುಕು ನಿಮ್ಮದಾಗಿಸಿಕೊಳ್ಳೋ ಆಸೆ ಇದ್ರೆ

ಬೆಳಗಾದ್ರೆ ಕೆಲಸಕ್ಕೆ ಓಡೋ ಭರಾಟೆಲಿರ್ತೀವಿ, ಹೆಣ್ಣುಮಕ್ಕಳಾದ್ರೆ ಮನೆ ಕೆಲಸ ಎಲ್ಲ ಮುಗಿಸಿ ಓಡಬೇಕು, ಕೆಲಸದಲ್ಲೆನು ಒತ್ತಡಕ್ಕೆ ಕೊರತೇನ? ಇದೆಲ್ಲ ಮುಗಿದಮೇಲೆ ನನ್ನನ್ನ ಗಮನಿಸಿಕೊಳ್ತಿಲ್ಲಾ ಅನ್ನೋ ಗಂಡ/ ಹೆಂಡತಿ, ಆಡೋಕು ನನ್ನ ಜೊತೆ ಬರೋಲ್ವಾ ಅನ್ನೋ ಮಕ್ಕಳು....... ಯಾಕಪ್ಪ ಜೀವನ ಅನ್ಸುತ್ತೆ ದಿನದ ಕೊನೆಲಿ. 

ಇದೆಲ್ಲಾ ನಿಮಗೂ ಅನ್ನಿಸ್ತಿದ್ರೆ ಖಂಡಿತ ಇವೆಲ್ಲದರ ಬಗ್ಗೆ ಗಮನ ಹರಿಸೋಕು ಇದು ಸರಿಯಾದ ಸಮಯ.

1. ದಾರಿ ತಪ್ಪಿಸೋರ್ನ ದೂರ ಇಡಿ

ಕೆಲವರನ್ನ ಕಷ್ಟದಲ್ಲಿ ಭೇಟಿ ಮಾಡೋಕೆ ಪ್ಲ್ಯಾನ್ ಮಾಡಿರ್ತೀರಿ. ಆದ್ರೆ ಅವರನ್ನ ಭೇಟಿ ಮಾಡಿದ್ರೆ ಬೇಡದ ಮಾತುಗಳು, ಬೇಡದ ವಿಷಯಗಳು ನಿಮ್ಮನ್ನ ಕಾಡುತ್ತೆ ಅನ್ನಿಸಿದ್ರೆ ಅಂಥವರ ಜೊತೆ ಕಳೆಯೋ ಸಮಯಾನ ಕಡಿಮೆ ಮಾಡಿಕೊಳ್ಳಿ. ಸಾಧ್ಯ ಆದ್ರೆ ಅಂಥವರನ್ನ ಭೇಟಿ ಮಾಡದೇ ಇರೋದೆ ಒಳ್ಳೇದು.

ಅವರೇ ಕಾಫಿಗೋ ಊಟಕ್ಕೋ ಕರೆದರೆ ಹೋಗದೇ ಇರೋಕೆ ನೆಪ ಹುಡುಕಿ, ಖುಷಿ ಆಗಿರ್ತೀರಿ.

ಮೂಲ

2. ಯಾವಾಗಲೂ ಲೇಟು ಅನ್ನಿಸಿಕೋಬೇಡಿ, ನಿಮ್ಮ ದಿನಾನ ಸರಿಯಾಗಿ ಪ್ಲಾನ್ ಮಾಡಿ

ದಿನ ತಡವಾಗಿ ಹೋಗಿ ಹೋಗಿ ಒತ್ತಡ ಜಾಸ್ತಿ ಆಗ್ತಿದ್ರೆ ನಿಮ್ಮ ದಿನದ ಪ್ಲ್ಯಾನ್ ನಲ್ಲಿ ಬದಲಾವಣೆ ಮಾಡಿಕೊಳ್ಳಿ. ಗಾಡಿ ಓಡಿಸೋ ಸಮಯ, ಟ್ರಾಫಿಕ್ ಜೊತೇಲಿ ನಿಮ್ಮ ಸಣ್ಣ ಪುಟ್ಟ ಕೆಲಸಗಳಿಗೂ ಸಮಯ ಕೊಟ್ಟು ಪ್ಲ್ಯಾನ್ ಮಾಡಿ,  ಬಸ್ ಬೇಗ ಹತ್ತಿ, ಅರ್ಧ ಗಂಟೆ ಮುಂಚೆ ಮನೆಯಿಂದ ಹೊರಡಿ, ಆಗ ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸಗಳು ಆಗುತ್ವೆ.

ಮೂಲ

3. ಮಾಡಬೇಕಾದ ಕೆಲಸ ಬೆಟ್ಟದಂಗೆ ಬೆಳೀಬಾರದು… ಹಂಗೆ ನೋಡ್ಕೊಳಿ

ಬೆಳಗಾದ ತಕ್ಷಣ ನಿಮ್ಮ ಕಣ್ಮುಂದೆ ರಾಶಿ ರಾಶಿ ಕೆಲಸ ಕಂಡ್ರೆ ಯಾರಿಗೆ ತಾನೆ ಖುಷಿ ಆಗುತ್ತೆ ಹೇಳಿ!! ಆದ್ರೆ ಹಾಗಂತ ನಾವು ತಪ್ಪಿಸ್ಕೊಳ್ಳೋಹಾಗೂ ಇಲ್ಲ ಅಲ್ವ? ಆದ್ರಿಂದ ನಿಮ್ಮ ಕೆಲಸಗಳ ಎರಡು ಪಟ್ಟಿ ಮಾಡ್ಕೊಳ್ಳಿ. ಒಂದು ನಿಮಗೆ ಖುಷಿ ಕೊಡೋದು ಮತ್ತೊಂದು ನಿಮಗೆ ಇಷ್ಟ ಆಗದ್ದು. ಈಗ ಇವರಡನ್ನೊ ಸಮಾನವಾಗಿ ಮಾಡುತ್ತಾ ಹೋಗಿ.

ನಿಮಗೆ ನಿಮ್ಮ ಹೆಂಡತಿನ ಶಾಪಿಂಗ್ ಕರ್ಕೊಂಡು ಹೋಗೋದು ಇಷ್ಟ ಇಲ್ಲ ಅಂದ್ರೆ, ನಿಮಗೆ ಬೇಕಾದನ್ನು ನೀವೂ ಕೊಳ್ಳಬಹುದಾದ ಅಂಗಡಿಗೆ ಹೋಗಿ. ನಿಮಗೆ ಬೇಕಾದ್ದು ನೀವು ತಗೊಳ್ಳಿ ಅವರಿಗೆ ಬೇಕದ್ದು ಅವರು ತಗೋತಾರೆ, ಕೆಲಸ ಖುಷಿಲೇ ಮುಗೀತಲ್ವ?

ಮೂಲ

4. ನಿಮ್ಮ ಸಾಮಾನು ಚೆಲ್ಲಾಪಿಲ್ಲಿ ಆಗದೆ ಇರೋಹಂಗೆ ನೋಡ್ಕೊಳ್ಳಿ

ವಾರ ಇಡೀ ಬ್ಯುಸಿ ಆಗಿರೋ ನಿಮಗೆ ಬಳಸಿದ ವಸ್ತುಗಳನ್ನ ಅದದೇ ಜಾಗಗಳಿಗೆ ಸೇರಿಸೋದು ಕಷ್ಟ ಆಗಿ ನಾಳೆ ನಾಳೆ ಅನ್ಕೋತಾ ಒಂದು ರಾಶಿ ಆಗಿದ್ರೆ ಅದನ್ನೆಲ್ಲ ಶನಿವಾರ ಮಾಡಬೇಕನ್ನೋ ಒತ್ತಡ ಕಾಡುತ್ತಿದ್ರೆ. ಬೇಸರ ಇಲ್ಲದೆ ನಿಮಗಿಷ್ಟ ಆಗೋ ಸಂಗೀತ ಕೇಳುತ್ತ ಕೆಲಸ ಮಾಡಿ, ಜೊತೇಲಿ ಕೆಲಸ ಎಲ್ಲ ಮುಗಿದ ಮೇಲೆ ನಿಮಗಿಷ್ಟ ಆಗೋ ಜಾಗಕ್ಕೆ ಹೋಗೋ ಪ್ಲಾನ್ ಮಾಡ್ಕೊಳ್ಳಿ ಆಗ ಒತ್ತಡ ಇರಲ್ಲ.

ಮೂಲ

5. ಭಿನ್ನಾಭಿಪ್ರಾಯಗಳನ್ನ ಪಕ್ಕಕ್ಕಿಡಿ

ಎಷ್ಟೋ ಸಾರಿ ಎದುರಿಗೆ ಇರೋ ವ್ಯಕ್ತಿಗೆ ನಮ್ಮ ಮನಸ್ಸಿನಲ್ಲಿರೋ ಮಾತು ಹೇಳೋಕಾಗ್ದೆ ಒಳಗೊಳಗೇ ಗೊಣಗಾಡ್ತ ಇರ್ತೀವಿ. ಇದು ನಿಮಗೆ ಒತ್ತಡ ಹೇರುತ್ತೆ. ಇದರಿಂದ ಹೊರಬರೋಕೆ ಮಾತುಗಳನ್ನ ಆಡೋ ಅಭ್ಯಾಸ ಮಾಡಿಕೊಂಡ್ರೆ ಒಳ್ಳೇದು ಇಲ್ಲ ಅಂದ್ರೆ 10 ನಿಮಿಷಕ್ಕಿಂತ ಹೆಚ್ಚು ಯಾವುದೇ ವಿಷಯಕ್ಕೂ ತಲೆ ಕೆಡಿಸಿಕೊಳಲ್ಲ ಅಂತ ನಿರ್ಧಾರ ಮಾಡಿ. ಅಕಸ್ಮಾತ್ ನಿಮ್ಮ ಮನಸ್ಸು ನಿಮ್ಮ ಮಾತು ಕೇಳ್ತಿಲ್ಲ ಅಂದ್ರೆ ಒಂದು ಪೇಪರ್ ನಲ್ಲಿ ನಿಮಗನ್ನಿಸಿದ್ದನ್ನೆಲ್ಲ ಬರೆದು ಸುಟ್ಟು ಹಾಕಿ, ಮನಸ್ಸು ನಿರಾಳ ಅನ್ಸುತ್ತೆ.

ಮೂಲ

6. ಇಲ್ಲ/ಆಗಲ್ಲ ಅನ್ನೋದನ್ನ ಅಭ್ಯಾಸ ಮಾಡ್ಕೊಳ್ಳಿ

ಯಾರಾರು ಏನಾರು ಕೆಲಸ ಹೇಳಿದಾಗ ಮನಸ್ಸು ಆಗಲ್ಲ ಅಂತಿದ್ರು ತುಟಿ ಹೂ ಅನ್ನೋಕೆ ಬಿಡಬೇಡಿ. ನಿಮಗಿಷ್ಟ ಇಲ್ಲದ್ದನ್ನ ಕೇಳಿದ್ರೆ ಇಲ್ಲ ಅನ್ನೋ ಅಭ್ಯಾಸ ಮಾಡ್ಕೊಳ್ಳಿ ಅಥವಾ ಆ ಕೆಲಸ ಇಷ್ಟ ಪಡೋ ವ್ಯಕ್ತಿಗೆ ಅದನ್ನ ಹೇಳೋ ಅಭ್ಯಾಸ ಮಾಡ್ಕೊಳ್ಳಿ ನಿಮಗೂ ಖುಷಿ ಅವರಿಗೂ ಖುಷಿ. ಹತ್ತು ಕೆಲಸ ಒಪ್ಪಿಕೊಂಡು ಸರಿಯಾಗಿ ಮಾಡದೇ ಇರೋಕ್ಕಿಂತ ಒಂದನ್ನ ಸರಿಯಾಗಿ ಮಾಡೋದು ಒಳ್ಳೇದಲ್ವಾ?

ಮೂಲ

7. ಮನೆಯೋರ ಜೊತೆ ಹೆಂಗಿರಬೇಕು ಅಂತ ತಿಳ್ಕೊಳಿ

ಯಾವುದಾದ್ರೂ ಹಬ್ಬ ಹರಿದಿನಗಳಲ್ಲಿ ಎಲ್ಲರೂ ಒಂದು ಕಡೆ ಸೇರಿ ಮಾತಾಡೋ ಪರಿಸ್ಥಿತೀಲಿ ನಿಮಗೆ ಅಲ್ಲಿಂದ ಓಡೋಗ್ಬೇಕು ಅಂತ ಅನ್ಸಿದ್ರೆ ನಿಮಗೆ ನಿಮ್ಮ ಕುಟುಂಬದಲ್ಲೂ ಒತ್ತಡ ಇದೆ ಅಂತರ್ಥ. ನೆಂಟರ ಕೊಂಕು, ಅದಕ್ಕೆ ತಲೆ ಆಡಿಸೋ ಅಪ್ಪ - ಅಮ್ಮ ನಿಮಗೆ ಹಿಂಸೆ ಅನ್ನಿಸ್ತಿದ್ರೆ ಅವ್ರನ್ನೆಲ್ಲ ಬದಿಗಿಟ್ಟು ಯೋಚ್ನೆ ಮಾಡಿ ಅಥವಾ ಅವರು ಮಾತು ಆರಂಬಿಸೋಕೆ ಮುಂಚೆ ನೀವೇ ನಿಮಗಿಷ್ಟ ಆಗೋ ಮಾತು ಶುರು ಮಾಡಿ, ಇನ್ನು ಕಷ್ಟ ಅನ್ಸಿದ್ರೆ ಸ್ವಲ್ಪ ಸಮಯ ಮಾತ್ರ ಅವರ ಜೊತೆಲಿರಿ, ನಿಮಗೆ ಹೆಚ್ಚು ತೊಂದ್ರೆ ಕೊಡೊ ಸಂಬಂಧಗಳು ದೂರ ಇದ್ದಷ್ಟು ಒಳ್ಳೇದು.

ಮೂಲ

8. ಹಿಂದೆ ಮಾಡಿದ ಕೆಲಸ ಆಡಿದ ಮಾತು ಮರೆತುಬಿಡಿ

ಹಿಂದೆ ಯಾರ ಜೊತೆಲಾದ್ರೂ ಜಗಳ ಆಡಿದ್ರೆ ಅಥವಾ ಚಿಕ್ಕವಯಸ್ಸಿನಲ್ಲಿ ಯಾವತ್ತಾದ್ರೂ ತಪ್ಪು ಮಾಡಿದ್ರೆ ಅದನ್ನೇ ಮೆಲುಕು ಹಾಕೋದು ಬಿಡಿ, ಅದರಿಂದ ಏನೂ ಬದಲಾಗಲ್ಲ ಅನ್ನೋದು ನಿಮಗೆ ಗೊತ್ತಿದೆ ತಾನೇ. ನೆನ್ನೆ ಬಗ್ಗೆ ಯೋಚ್ನೆ ಮಾಡೋದ್ರಿಂದ ನೀವು ಅದೇ ಘಟನೆಗಳಲ್ಲಿ ಜೀವನ ಮಾಡೋದು ಹೆಚ್ಚು, ಅದು ನಿಜ ಜೀವನದ ಒತ್ತಡಕ್ಕಿಂತ ನಿಮಗೆ ಹೆಚ್ಚು ತೊಂದ್ರೆ ಕೊಡುತ್ತೆ. ಹಳೇದನ್ನ ಮರೆಯೋ ಪ್ರಯತ್ನ ಮಾಡಿ ಅಥವಾ ಬೇರೆ ವಿಷಯಗಳಲ್ಲಿ ನಿಮ್ಮನ್ನ ತೊಡಗಿಸಿಕೊಳ್ಳಿ.

ಮೂಲ

ಕೇಳಿದ್ರೇನೇ ನಿರಾಳ ಅನ್ಸುತ್ತೆ ಇನ್ನು ಮಾಡಿದ್ರೆ.... ಹಾಗಿದ್ರೆ ತಡ ಯಾಕೆ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: