ಈ 15 ಸೂಪರ್ ಫೋಟೋಗಳ್ನ ನೋಡುದ್ರೆ ಚಳಿಗಾಲದಲ್ಲಿ ಉತ್ತರ ಭಾರತಕ್ಕೆ ಹೋಗಬೇಕು ಅನ್ನಿಸುತ್ತೆ

ನೆನಸ್ಕೊಂಡ್ರೇನೆ ಮೈಯಲ್ಲಾ ಝುಂ ಅನ್ಸತ್ತೆ

ನಮ್ಮಲ್ಲಿ ಚಳಿಗಾಲ ಅಂದ್ರೆ 25 ಡಿಗ್ರಿ ಸೆಲ್ಷಿಯಸ್‌ಗೆ ಗಡಗಡ ಅಂತ ನಡುಗ್ತೀವಿ. ಅದೇ ಉತ್ತರ ಭಾರತದಲ್ಲಾದ್ರೆ ಕೆಲವು ಕಡೆ ಮೈನಸ್‌ನಲ್ಲಿರುತ್ತೆ ಉಷ್ಣಾಂಶ. ಆಹಾ ಆ ಚಳಿಯನ್ನ ಅನುಭವಿಸೋದೆ ಒಂದು ಮಜಾ ಕಣ್ರಿ. ಮಂಜುಗಡ್ಡೆ ಮೇಲೆ ನಡೆದಾಡೋದು, ಐಸ್‌ಕ್ರೀಮಿನಂತ ಮಂಜಿನ ಜೊತೆಗೆ ಆಟ ಆಡೋದು ನೆನೆಸಿಕೊಂಡ್ರೆ ಮೈ ಎಲ್ಲಾ ಝುಂ ಅನ್ಸತ್ತೆ. ಇಲ್ಲಿರೋಂತ 15 ಫೋಟೋಗಳನ್ನ ನೋಡ್ತಿದ್ರೆ ಚಳಿಗಾಲದಲ್ಲಿ ಉತ್ತರ ಭಾರತಕ್ಕೆ ಹೋಗ್ಬೇಕು ಅನ್ಸತ್ತೆ.

1. ಸನ್‌ಮಾರ್ಗ್, ಕಾಶ್ಮೀರ

ಈ ಜಾಗ ಆಹಾ ಎಂಥಾ ತಂಪು ಪ್ರದೇಶ ಅಲ್ವಾ? ಈ ರೀತಿಯ ಹಿಮ ನಮ್ಮ ಕರ್ನಾಟಕದ ಬೇರೆ ಯಾವ ಪ್ರದೇಶದಲ್ಲೂ ಕಾಣಸಿಗಲ್ಲ. 

2. ಔಲಿ, ಉತ್ತರಾಖಾಂಡ್

ಓಹೋ ಹಿಮಾಲಯ...ಶಿವನಿಗು ಗಿರಿಜೆಗು ದೇವಾಲಯ...ನವ ವರ ವಧುವಿಗೆ ಪ್ರೇಮಾಲಯ ಅನ್ನೋ ಹಾಡು ಇಲ್ಲಿ ನೆನಪಾಗ್ದೆ ಇರಲ್ಲ. ಹಿಮವನ್ನೇ ಹೊದ್ದುಕೊಂಡಿರೋಂತ ಮನೆಗಳು, ಬೆಚ್ಚಗೆ ಏನಾದ್ರೂ ಕುಡಿದ್ರೆ ಅಷ್ಟೇ ಈ ಸೌಂದರ್ಯ ಅನುಭವಿಸಕ್ಕೆ ಸಾಧ್ಯ.

3. ಗುಲ್‌ಮಾರ್ಗ್, ಕಾಶ್ಮೀರ

ಸ್ವಿಡ್ಜರ್‌ಲ್ಯಾಂಡ್‌ಗೆ ಹೋಗಕ್ಕೆ ಆಗ್ದಿದ್ರೂ ಪರ್ವಾಗಿಲ್ಲ. ಈ ಜಾಗಾನಾ ಮಾತ್ರ ಮಿಸ್ ಮಾಡ್ಕೋಬೇಡಿ. ಸ್ವಿಡ್ಜರ್‌ಲ್ಯಾಂಡನ್ನ ಮೀರಿಸೋಂತ ಸೌಂದರ್ಯ ಇಲ್ಲಿ ಕಣ್ತುಂಬ್ಕೋಬೋದು. 

4. ಮನಾಲಿ, ಹಿಮಾಚಲಪ್ರದೇಶ

ನಮ್ಮ ಕನ್ನಡ ಸೇರಿದಂತೆ ಬಾಲಿವುಡ್‌ನ ತುಂಬಾ ಸಿನಿಮಾಗಳನ್ನ ಇಲ್ಲೇ ಚಿತ್ರೀಕರಿಸಿಕೊಂಡಿದ್ದಾರೆ. ನಮ್ ಕರ್ನಾಟಕದಲ್ಲಂತೂ ಈ ರೀತಿ ಹಿಮಾವೃತವಾಗಿರುವ ರಸ್ತೆಗಳು, ಭೂಮಿ ಸಿಗೋದು ಕಷ್ಟ. 

5. ಶಿಮ್ಲಾ, ಹಿಮಾಚಲಪ್ರದೇಶ

ಬ್ರಿಟೀಷ್ ಶೈಲಿ ಮನೆಗಳು, ಇಂಗ್ಲೆಂಡನ್ನ ನೆನಪಿಸೋ ತರ ಇರೋಂತ ವಾತಾವರಣ. ಚಳಿಯನ್ನ ಅನುಭವಿಸ್ತಾ ಪ್ರಕೃತಿ ಸೌಂದರ್ಯವನ್ನ ಕಣ್ತುಂಬಿಕೊಳ್ಳೋದ್ರಲ್ಲೇ ಇದೆ ಮಜಾ. 

6. ನೈನಿತಾಲ್, ಉತ್ತರಖಾಂಡ್

ಆಕಾಶ ಭೂಮಿ ಒಂದಾದಂತೆ ಇರೋ ಜಾಗ ಇದು. ಮೋಡಗಳು ಹಂಗೆ ನಮ್ಮನ್ನ ತಾಗಿಕೊಂಡು ಹೋಗ್ತಿದ್ರೆ ಆ ರೋಮಾಂಚನಾನ ಅನುಭವಿಸಿಯೇ ತೀರ್ಬೇಕು.

7. ಕುಫ್ರಿ, ಹಿಮಾಚಲಪ್ರದೇಶ

ಒಂದು ಕಡೆ ಪರ್ವತಗಳು, ಇನ್ನೊಂದು ಕಡೆ ಕಾಡು. ಕಣ್ಣು ಹಾಯಿಸಿದಷ್ಟೂ ದೂರ ಕಾಣೋ ಮಂಜಿನ ಟೋಪಿ ಹಾಕ್ಕೊಂಡ ಬೆಟ್ಟಗುಡ್ಡಗಳು. ಈ ತರಹ ಮಂಜು, ಚಳಿ ನೋಡ್ಬೇಕು ಅಂದ್ರೆ ಉತ್ತರ ಭಾರತದಲ್ಲಿ ಮಾತ್ರ ಸಾಧ್ಯ.

8. ಸರ್‌ಪಾಸ್ ಟ್ರೆಕ್, ಹಿಮಾಚಲಪ್ರದೇಶ

ಎಲ್ಲೆಲ್ಲೋ ಟ್ರೆಕ್ಕಿಂಗ್ ಮಾಡಿರ್ತೀರ, ಆದರೆ ಈ ರೀತಿ ಮಂಜಿನ ಮೇಲೆ ನಡ್ಕೊಂಡು ಟ್ರೆಕ್ಕಿಂಗ್ ಮಾಡ್ಬೇಕು ಅಂದ್ರೆ ಹಿಮಾಚಲಪ್ರದೇಶದ ಸರ್‌ಪಾಸ್ ಟ್ರೆಕ್‌ಗೆ ಹೋಗ್ಲೇಬೇಕು.

9. ಮುನ್ಸಿಯಾರಿ, ಉತ್ತರಖಾಂಡ

ಬೆಟ್ಟದ ಮೇಲಿರೋಂತ ಊರು ಇದು. ಇಲ್ಲಿಂದ ನೋಡ್ತಿದ್ರೆ ವಿಶಾಲವಾಗಿರೋಂತ ಬೆಟ್ಟಗಳು, ಹಂಗೇ ಕೈಗೆ ತಾಕೋಂತ ಆಕಾಶ ನೋಡ್ತಾ ಕೂರ್ಬೋದು. 

10. ಲೇಹ್, ಲಡಾಕ್

ಹಿಮಾಲಯದ ಸೌಂದರ್ಯವನ್ನ ಕಣ್ಣಾರೆ ಕಾಣ್ಬೇಕು ಅದನ್ನ ಮನಸಾರೆ ಅನುಭವಿಸ್ಬೇಕು ಅಂದ್ರೆ ಲೇಹ್‌ಗೆ  ಒಂದ್ಸಲಾನಾದ್ರೂ ಹೋಗ್ಬೇಕು. ಇಲ್ಲಿಗೆ ಹೋದ್ರೆ ಚಳಿ ಅಂದ್ರೆ ಏನೂ ಅಂತ ಗೊತ್ತಾಗುತ್ತೆ!

11. ಗುವಾಹಟಿ, ಅಸ್ಸಾಂ

ಒಂದು ಕಡೆ ಸರೋವರ, ಇನ್ನೊಂದು ಕಡೆ ಸುರೀತಿರೋಂತ ಮಂಜು. ಇದನ್ನೆಲ್ಲಾ ನೋಡ್ಬೇಕು ಅಂದ್ರೆ ಅಸ್ಸಾಂನ ಗುವಾಹಟಿಗೆ ಹೋದ್ರೆ ಗೊತ್ತಾಗುತ್ತೆ. 

12. ಗೊಂಡೋಲ, ಗುಲ್‌ಮಾರ್ಗ್

ಮೋಡಗಳ ಮೇಲೆ ತೇಲಾಡ್ಬೇಕಾ? ಪ್ರಕೃತಿ ಸೌಂದರ್ಯವನ್ನ ಸವೀಬೇಕು ಅಂದ್ರೆ ಗುಲ್‌ಮಾರ್ಗ್‍ನ ಗೊಂಡೋಲಾಗೆ ಹೋಗಿ ಬಂದ್ರೆ ಜನ್ಮ ಸಾರ್ಥಕ ಅನ್ಸತ್ತೆ.

13. ಆಗ್ರಾ, ಉತ್ತರ ಪ್ರದೇಶ

ತಾಜ್ ಮಹಲ್ ಅಂದ್ರೆ ಪ್ರೇಮದ ಸಂಕೇತ. ಪ್ರೇಮಿಗಳಿಗೆ ಹೇಳಿ ಮಾಡಿಸಿರೋಂತ ಜಾಗ ಇದು. ಅದರಲ್ಲೂ ಚಳಿಗಾಲದಲ್ಲಿ ಆಗ್ರಾಗೆ ಹೋಗಕ್ಕೂ ಅದೃಷ್ಟ ಮಾಡಿರ್ಬೇಕು. 

14. ಚಾದರ್ ಟ್ರೆಕ್, ಲಡಾಕ್

ಜುಳುಜುಳೂಂತ ಹರೀತಿರೋ ನೀರಿನ ಮೇಲೆ ನಡ್ಕೊಂಡ್ ಹೋಗೋ ಅನುಭವ ಪಡೀಬೇಕು ಅಂದ್ರೆ ಲಡಾಕಿನ ಚಾದರ್ ಟ್ರೆಕ್‌ಗೆ ಹೋಗ್ಲೇಬೇಕು. 

15. ಪಹಲ್‌ಗಮ್, ಕಾಶ್ಮೀರ

ಮಂಜು ತುಂಬಿದ ರಸ್ತೆ, ಅದರ ಮೇಲೆ ಟಾಂಗಾದಲ್ಲಿ ಹೋಗ್ತಿದ್ರೆ ಅದರ ಮಜಾನೇ ಬೇರೆ. ಈ ರೀತಿ ದಕ್ಷಿಣ ಭಾರತದಲ್ಲೆಲ್ಲೂ ಸಿಗಲ್ಲ. ಅದಕ್ಕೆ ಚಳಿಗಾಲದಲ್ಲಿ ಉತ್ತರ ಭಾರತಕ್ಕೆ ಹೋಗಬೇಕು ಅನ್ನಿಸುತ್ತೆ. 

 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ರಾಮಾಯಣ ಅರಿದು ಕುಡಿದಿದ್ದರೆ ಮಾತ್ರ ನಿಮಗೆ ಈ 10 ವಿಚಿತ್ರ ಸತ್ಯಗಳು ಗೊತ್ತಿರಕ್ಕೆ ಸಾಧ್ಯ

ಇಲ್ಲದಿದ್ದರೆ ಬಹಳ ಆಶ್ಚರ್ಯ ಆಗುತ್ತೆ

ಕೆಲವ್ರು ರಾಮಾಯಣ ಮತ್ತೆ ಮಹಾಭಾರತ ಅರಿದು ಕುಡಿದು ಬಿಟ್ಟಿದ್ದೀವಿ ಅಂತಿರ್ತಾರೆ. ಆದ್ರೂ ಕೆಲವೊಂದು ವಿಷಯಗಳು ಎಷ್ಟೋ ಮಂದಿಗೆ ಗೊತ್ತಿರಲ್ಲ. ವಾಲ್ಮೀಕಿ ಬರೆದಿರೋಂತ ರಾಮಾಯಣದ ರಾಮ, ಲಕ್ಷ್ಮಣ, ಸೀತೆ ಇಂದಿನವ್ರಿಗೂ ಆದರ್ಶ. ಈವತ್ತಿಗೂ ರಾಮಾಯಣ, ಅದ್ರ ಪಾತ್ರಗಳು ನಮಗೆಲ್ಲಾ ದಾರಿ ತೋರಿಸೋ ತರಹ ಇವೆ. ಆದ್ರೂ ರಾಮಾಯಣದ  ಬಗ್ಗೆ ಎಷ್ಟೋ ಸತ್ಯಗಳು ಜನಕ್ಕೆ ಗೊತ್ತಿರಲ್ಲ. ಮಹಾನ್ ಪಂಡಿತರಿಗೆ ಮಾತ್ರ ಗೊತ್ತಿರುವಂಥ 10 ವಿಚಿತ್ರ ಸತ್ಯಗಳನ್ನು ನಾವಿಲ್ಲಿ ಕೊಡ್ತಿದ್ದೇವೆ.

1. ರಾಮನಿಗೆ ಶಾಂತಾ ಅಂತ ಒಬ್ಬಳು ಅಕ್ಕ ಇರ್ತಾಳೆ

ದಶರಥನಿಗೆ ಕೌಸಲ್ಯೆಯಿಂದ ಹುಟ್ಟಿದ ಮಗಳು ಇವಳು. ಅಂಗದೇಶದ ರಾಜ ರೋಮಪಾದ ಅವಳನ್ನ ದತ್ತು ತೊಗೊಂಡಿರ್ತಾನೆ.

2. ರಾವಣನಿಗೆ 10 ತಲೆಗಳು ಬಂದದ್ದು ಈಶ್ವರನಿಂದ

ಈಶ್ವರನ ಪರಮ ಭಕ್ತನಾಗಿದ್ದ ರಾವಣ. ಘೋರ ತಪಸ್ಸು ಮಾಡಿ ತಲೆಯನ್ನೇ ಈಶ್ವರನಿಗೆ ಅರ್ಪಿಸಿದ್ದ. ಆದರೂ ತಲೆ ಮತ್ತೆ ಬೆಳೀತಿತ್ತಂತೆ. ಹತ್ತು ಸಲ ತಲೆ ಈಶ್ವರನಿಗೆ ಅರ್ಪಿಸಿದರೂ ಅದು ಮತ್ತೆಮತ್ತೆ ಬೆಳೀತಾನೇ ಇತ್ತಂತೆ. ಕೊನೆಗೆ ಶಿವನು ಪ್ರತ್ಯಕ್ಷನಾಗಿ ಎಲ್ಲಾ ಹತ್ತು ತಲೆಗಳನ್ನು ವಾಪಸ್ಸು ಕೊಟ್ನಂತೆ. ಹಾಗಾಗಿ ರಾವಣನಿಗೆ 10 ತಲೆಗಳು ಬಂದವು ಅಂತ ಪುರಾಣ ಹೇಳುತ್ತೆ.

3. ರಾವಣನಿಗಿಂತ ಮೊದಲು ಲಂಕೇನ ಕುಬೇರ ಆಳ್ತಿರ್ತಾನೆ

ಲಂಕೆಯನ್ನ ಕಟ್ಟಿ ಆಳ್ತಾ ಇದ್ದದ್ದು ಕುಬೇರ. ಅವನ ಮಲಣ್ಣ ರಾವಣ ಯುದ್ದ ಮಾಡಿ ಕುಬೇರನಿಂದ ಲಂಕೆಯನ್ನ ಕಿತ್ತುಕೊಂಡ ಅಂತ ಪುರಾಣ ಹೇಳುತ್ತೆ.

 

4. ಲಕ್ಷ್ಮಣ ಶೇಷನಾಗನ (ಆದಿಶೇಷನ) ಅವತಾರ

ವಿಷ್ಣುವಿನ ಅವತಾರ ರಾಮ ಅನ್ನೋದು ಎಲ್ರಿಗೂ ಗೊತ್ತು. ಆದರೆ ಶೇಷನಾಗನ ಅವತಾರ ಲಕ್ಷ್ಮಣ ಅನ್ನೋದು ಬಹಳಷ್ಟು ಮಂದಿಗೆ ಗೊತ್ತಿಲ್ಲ.   

5. ಹದಿನಾಲ್ಕು ವರ್ಷಗಳ ವನವಾಸದಲ್ಲಿ ಲಕ್ಷ್ಮಣ ನಿದ್ದೇನೇ ಮಾಡಲ್ಲ

ಯಾಕಂದ್ರೆ ವನವಾಸದಲ್ಲಿದ್ದ ರಾಮ ಮತ್ತೆ ಸೀತೆಯನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡ್ಕೋಬೇಕಾಗಿತ್ತು. ಅದಕ್ಕಾಗಿ ತನಗೆ ನಿದ್ದೆ ಬರದೆ ಇರೋಹಂಗೆ ನಿದ್ರಾದೇವಿಯ ವರ ಪಡ್ಕೊಂಡಿರ್ತಾನೆ ಲಕ್ಷ್ಮಣ.

6. ಶ್ರೀಕೃಷ್ಣನನ್ನ ಬೇಟೆಗಾರನಾಗಿ ಬಂದು ಕೊಂದದ್ದು ವಾಲಿ

ಮರದ ಕೆಳಗೆ ಮಲಗಿ ನಿದ್ದೆ ಮಾಡ್ತಿದ್ದಾಗ ಶ್ರೀಕೃಷ್ಣನನ್ನ ಜರಾ ಅನ್ನೋ ಬೇಟೆಗಾರ ಬಾಣಬಿಟ್ಟು ಕೊಂದ. ಈ ಬೇಟೆಗಾರ ಬೇರೆ ಯಾರು ಅಲ್ಲ, ವಾಲಿ ಅವತಾರ. 

7. ಲಕ್ಷ್ಮಣ ಸಾಯೋದು ರಾಮನ ಒಂದು ಮಾತಿಂದ

ಒಮ್ಮೆ ಯಮಧರ್ಮನನ್ನು ರಾಮ ಭೇಟಿಯಾಗಿ ನಮ್ಮಿಬ್ಬರ ಮಾತುಕತೆಗೆ ಯಾರೇ ಬಂದು ಅಡ್ಡಿಪಡಿಸಿದ್ರೂ ಅವರನ್ನ ಸಾಯಿಸಿಬಿಡು ಅಂತ ಕೇಳ್ಕೊಂಡಿದ್ದ. ಅದೇ ಟೈಮಿಗೆ ಪಾಪ ಲಕ್ಷ್ಮಣ ಬರ್ತಾನೆ. ರಾಮನನ್ನ ಮಾತಾಡ್ಬೇಕು ಅಂತಾನೆ. ಆಗ ರಾಮ ಹೇಳಿದಂಗೆ ಲಕ್ಷ್ಮಣನ್ನ ಯಮ ಸಾಯಿಸ್ತಾನೆ.

8. ಹನುಮಂತನಿಗೆ ಒಂದು ಹೂವಿನಿಂದ ಭಜರಂಗಬಲಿ ಅಂತ ಹೆಸರು ಬಂತು

ಸಿಂಧೂರ ಹೂವು ತಲೆ ಮೇಲೆ ಇದ್ದಷ್ಟು ಹೊತ್ತು ರಾಮ ಆರೋಗ್ಯವಾಗಿರ್ತಾನೆ ಅಂತ ಹನುಮಂತನಿಗೆ ಒಮ್ಮೆ ಸೀತೆ ಹೇಳಿದ್ಲು. ಅದನ್ನ ಕೇಳಿ ಹನುಮ ದೇಹವನ್ನೇ ಸಿಂಧೂರವಾಗಿ ಬದಲಾಯಿಸಿಕೊಂಡಿದ್ದ. ಭಜರಂಗ್ ಅಂದ್ರೆ ಸಿಂಧೂರ ಅಂತ ಅರ್ಥ. ತನ್ನನ್ನು ತಾನು ಸಿಂಧೂರವಾಗಿಸಿಕೊಂಡ ಕಾರಣ ಭಜರಂಗಬಲಿ ಅಂತ ಹೆಸರು ಬಂತು.

9. ಅಳಿಲು ಬೆನ್ನ ಮೇಲೆ ಮೂರು ಗೆರೆ ಇರೋದಕ್ಕೆ ರಾಮ ಕಾರಣ

ಲಂಕೆಗೆ ಹೋಗ್ಬೇಕಾದ್ರೆ ಕಪಿಸೈನ ರಾಮಸೇತು ಕಟ್ಟಿತು. ಅದನ್ನ ಕಟ್ಟಬೇಕಾದ್ರೆ ಅಳಿಲುಗಳು ಮಣ್ಣನ್ನ ತಂದುಕೊಡ್ತಿದ್ವು. ಇದನ್ನ ಕಂಡ ಕಪಿಸೈನ್ಯ ನಗಾಡ್ತಿತ್ತು. ಆದರೆ ರಾಮನು ಅವುಗಳ ಅಳಿಲು ಸೇವೆಯನ್ನ ತುಂಬಾ ಇಷ್ಟಪಟ್ಟಿದ್ದ. ಅಳಿಲನ್ನ ಎತ್ಕೊಂಡು ಬೆನ್ನು ಸವರಿದಾಗ ಈ ಮೂರು ಗೆರೆಗಳು ಮೂಡಿದ್ವಂತೆ. 

 

10. ಶೂರ್ಪಣಖೀಗೆ ಅಣ್ಣ ರಾವಣನ್ನ ಸಾಯಿಸಬೇಕು ಅನ್ನೋ ಬಯಕೆ ಇರುತ್ತೆ

ಇದು ನಿಜವಾಗ್ಲೂ ಅಚ್ಚರಿ ಪಡೋಂತ ಸಂಗತಿ. ಶೂರ್ಪಣಕಿಯ ಗಂಡ ದುಷ್ಟಬುದ್ಧಿ ಅನ್ನೋನ್ನ ರಾವಣ ಸಾಯಿಸಿರ್ತಾನೆ. ಕೆಲವು ರಾಮಾಯಣಗಳಲ್ಲಿ ರಾವಣನ ಮೇಲೆ ಸೇಡು ತೀರಿಸಿಕೊಳಕ್ಕೆ ಶೂರ್ಪಣಕಿ ದೊಡ್ಡ ನಾಟಕ ಮಾಡಿ, ಯುದ್ಧ ಆಗೋಹಾಗೆ ನೋಡ್ಕೊಂಡು ರಾವಣನ ಸಾವಿಗೆ ಕಾರಣ ಆಗ್ತಾಳೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: