ಜೀವನದಲ್ಲಿ ಆತಂಕ ಕಡಿಮೆ ಮಾಡ್ಕೊಳಕ್ಕೆ ನೀವು ಮಾಡಬೇಕಾಗಿರೋ ಕೆಲವು ಮುಖ್ಯವಾದ ಕೆಲಸಗಳಿವೆ ಕೇಳಿ

ಸೂಕ್ಷ್ಮ ಮನಸ್ಸಿನವರಿಗಂತೂ ಇದು ಬಹಳ ಮುಖ್ಯ

ಒಂದಲ್ಲಾ ಒಂದು ಸಂದರ್ಭದಲ್ಲಿ ಎಲ್ರೂ ಆತಂಕಕ್ಕೆ ಒಳಗಾಗಿರ್ತೀವಿ. ಇನ್ನೇನಾಗುತ್ತದೋ ಏನೋ ಅನ್ನೋ ಗಾಬರಿಯನ್ನ ನಮ್ಮಲ್ಲಿ ಉಂಟು ಮಾಡುತ್ತೆ ಆತಂಕ. ಒಬ್ಬ ಹುಡುಗ/ಹುಡುಗಿಗೆ ಪ್ರಪೋಸ್ ಮಾಡ್ಬೇಕು, ಕೆಲಸಕ್ಕೆ ಇಂಟರ್‌ವ್ಯೂಗೆ ಹೋಗಬೇಕು... ಇಂತ ಸಂದರ್ಭಗಳಲ್ಲಿ ಸಹಜವಾಗೇ ಅಂಗೈಯಲ್ಲಿ ಸಣ್ಣಗೆ ಬೆವರು, ಎದೆ ಡವಡವ ಅಂತ ಬಡ್ಕೊಳೋದು ಎಲ್ಲಾ ಆಗುತ್ತೆ. ಮನಸ್ಸಲ್ಲಿ ಆತಂಕ ಇದ್ದಾಗ ಸರಿಯಾಗಿ ನಿದ್ದೆ ಬರಲ್ಲ, ನೆಮ್ಮದಿ ಇರಲ್ಲ, ಯಾವ ಕೆಲಸಾನೂ ಸರಿಯಾಗಿ ಮಾಡಕ್ಕಾಗಲ್ಲ. ಅದರಲ್ಲೂ ತುಂಬಾ ಸೂಕ್ಷ್ಮ ಮನಸ್ಸಿನವರಾದ್ರೆ ಇನ್ನೂ ಕಷ್ಟ. ಆತಂಕ ಕಡಿಮೆ ಮಾಡ್ಕೊಳ್ಳೋದೆಂಗೆ? ಇಲ್ಲಿದೆ ನೋಡಿ 10 ಉಪಾಯ.

1. ನಿಮ್ಮನ್ನ ನೀವು ಕೀಳಾಗಿ ಕಾಣೋದು ನಿಲ್ಲಿಸಿ

ಮನಸ್ಸಲ್ಲಿ ಒಳ್ಳೇ ಆಲೋಚನೆಗಳನ್ನ ಮಾಡೋದ್ರಿಂದ್ಲೂ ಆತಂಕದಿಂದ ಹೊರಗ್ ಬರ್ಬೋದು. ನಿಮ್ಮಲ್ಲಿರೋ ಬೇರೆ ಗುಣಗಳನ್ನ ಗುರುತಿಸ್ಕೊಳ್ಳಿ. ಉದಾಹರಣೆಗೆ ಹೇಳ್ಬೇಕು ಅಂದ್ರೆ ಬೇರೆಯವರ ಬಗ್ಗೆ ತುಂಬಾ ಅನುಕಂಪ ಇರುತ್ತೆ, ಇಲ್ಲಾ ನಿಮ್ಮಲ್ಲಿ ಒಳ್ಳೇ ಕ್ರಿಯೇಟೀವ್ ಆಲೋಚನೆ ಇರುತ್ತೆ. ಅವುಗಳ ಕಡೆ ಗಮನ ಕೊಡೋದ್ರಿಂದ, ಅಥವಾ ಏನಾದರೂ ಹೊಸಾದು ಕಲೀಯೋದ್ರಿಂದ ಆತಂಕ ಕಡಿಮೆ ಆಗುತ್ತೆ.

2. ಆತಂಕ ಅನ್ನೋದು ಕ್ಷಣಿಕ ಅಂತ ಅರ್ಥ ಮಾಡ್ಕೊಳಿ

ಈವತ್ತಿದ್ದಂಗೆ ಇನ್ನೊಂದ್ ದಿನ ಇರಲ್ಲ. ವಾತಾವರಣಾನ್ನೂ ಅಷ್ಟೇ ಕ್ಷಣಕ್ಷಣಕ್ಕೂ ಬದಲಾಗ್ತಾನೇ ಇರತ್ತೆ. ಇಲ್ಲಿ ಯಾವುದೂ ಶಾಶ್ವತ ಅಲ್ಲ. ಆತಂಕನೂ ಅಷ್ಟೇ ಕ್ಷಣಿಕ. ಆತಂಕ, ಭಯ, ಗಾಬರಿ ಜಾಸ್ತಿ ಮಾಡ್ಕೊಳ್ಳೋದ್ರಿಂದ ನಿಮ್ಮ ಅಂತಃಶಕ್ತಿಯನ್ನೇ ಅಲ್ಲಾಡಿಸಿಬಿಡುತ್ತೆ. "ಈ ಜಗತ್ತಿನಲ್ಲಿ ಯಾವುದೂ ಶಾಶ್ವತ ಅಲ್ಲ, ನಮ್ಮ ಸಮಸ್ಯೆಗಳೂ ಅಷ್ಟೇ'' ಅಂತ ಚಾರ್ಲಿ ಚಾಪ್ಲಿನ್ ಹೇಳಿದ ಮಾತನ್ನ ಜ್ಞಾಪಕ ಇಟ್ಕೊಳ್ಳಿ.

3. ಯಾತಕ್ಕೆ ಆತಂಕ ಪಟ್ಕೊಂಡಿದೀರಿ ಅಂತ ಯಾರ ಹತ್ತಿರ ಆದ್ರೂ ಹೇಳ್ಕೊಳಿ

ಆತಂಕ ಅನ್ನೋದು ಏಕಾಂತವಾದ ಅನುಭವ. ಎಷ್ಟು ಏಕಾಂಗಿಯಾಗಿರ್ತಾರೋ ಅಷ್ಟು ಆತಂಕ ಜಾಸ್ತಿ ಆಗುತ್ತೆ ಅನ್ನೋದು ಗೊತ್ತಿರ್ಲಿ. ನಿಮ್ಮ ಆತಂಕಕ್ಕೆ ಕಾರಣ ಏನು, ಯಾವ ವಿಚಾರವಾಗಿ ಆತಂಕ ಪಡ್ತಿದ್ದೀರಾ ಅನ್ನೋದನ್ನ ನಿಮ್ಮ ಆತ್ಮೀಯರ ಹತ್ತಿರ ಹೇಳ್ಕೊಳ್ಳಿ. ಹಾಗಂತ ಯಾರಯಾರ ಹತ್ರಾನೋ ಹೇಳ್ಕೊಂಡ್ರೆ ಆತಂಕ ಕಡಿಮೆ ಆಗಲ್ಲ. ನಿಮ್ಮ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತಿರ್ಬೇಕು. ನಿಮ್ಮನ್ನ ಅರ್ಥ ಮಾಡ್ಕೊಳ್ಳೋ ಅಂತಾವ್ರು ಆಗಿರ್ಬೇಕು ಅಷ್ಟೇ.

4. ಯಾರಿಂದ ನಿಮಗೆ ಆತಂಕ ಆಗ್ತಿದೆ ಅಂತ ಗುರುತಿಸಿಕೊಳ್ಳಿ

ಕೆಲವು ಸಂಬಂಧಗಳೇ ನಿಮ್ಮ ಆತಂಕಕ್ಕೆ ಕಾರಣ ಅನ್ನೋದಾದ್ರೆ ಅದನ್ನ ಸೀರಿಯಸ್ಸಾಗಿ ಆಲೋಚನೆ ಮಾಡ್ಲೇಬೇಕು. ಒಬ್ರಿಂದ ನಿಮಗೆ ತುಂಬಾ ಆತಂಕ ಆಗ್ತಿದೆ ಅಂದ್ರೆ ಅಂತಹ ಸಂಬಂಧ ಕಡಿದುಕೊಳ್ಳೋದೆ ಉತ್ತಮ. ಅದರ ಬಗ್ಗೆ ಏನ್ ಬೇಜಾರ್ ಮಾಡ್ಕೋಬೇಡಿ.

5. ಸಮಸ್ಯೆ ಎದುರಿಸಿ... ಓಡೋಗ್ಬೇಡಿ

ನಿಮ್ಮ ಆತಂಕಕ್ಕೆ ಕಾರಣ ಆಗಿರೋ ವಿಚಾರ ಅಥವಾ ವ್ಯಕ್ತಿಯಿಂದ ದೂರ ಸರಿಯೋದ್ರಿಂದ ಆತಂಕ ಇನ್ನೂ ಜಾಸ್ತಿ ಆಗತ್ತೆ ಹೊರತು ಕಡಿಮೆಯಂತೂ ಆಗಲ್ಲ. ಅದೇನಾಗುತ್ತೋ ನೋಡೇ ಬಿಡೋಣ ಅಂತ ಎದ್ ನಿಂತ್ಕೊಳ್ಳಿ. ಸಮಸ್ಯೇನ ಫೇಸ್ ಮಾಡಿ. ಆತಂಕ ಅನ್ನೋದು ಆ ಕ್ಷಣದಲ್ಲಿ ಆಗೋಂತ ಭಯ ಅಷ್ಟೇ. ನೀವು ಆತಂಕದಲ್ಲೇ ಒದ್ದಾಡ್ತಾ ಇದ್ರೆ ಏನೂ ಮಾಡಕ್ಕಾಗಲ್ಲ. ಸಮಸ್ಯೇನ ಎದುರಿಸ್ದಾಗ್ಲೇ ಆತಂಕದಿಂದ ಹೊರಗ್ ಬರೋಕ್ ಸಾಧ್ಯ.

6. ಒಂದೊಂದ್ಸಲ ಏನ್ ಆಗಬೇಕು ಅಂತಿರುತ್ತೋ ಅದು ಆಗೇ ಆಗುತ್ತೆ, ತಪ್ಸಕ್ಕಾಗಲ್ಲ ಅಂತ ಮರೀಬೇಡಿ

ಆಗಲೇ ಬೇಕು ಅಂತಿದ್ರೆ ಅದನ್ನ ಯಾರ್ ಕೈಲೂ ತಪ್ಸೋಕಾಗಲ್ಲ. ಆದ್ರೆ ಆ ಸಂದರ್ಭದಲ್ಲಿ ನೀವ್ ಹೆಂಗ್ ರಿಯಾಕ್ಟ್ ಮಾಡ್ತೀರ ಅನ್ನೋದು ನಿಮ್ ಕೈಯಲ್ಲೇ ಇದೆ. ಆತಂಕ ಜಾಸ್ತಿ ಮಾಡ್ಕೊಳ್ಳೋದು ಬಿಡೋದು ಅಷ್ಟೇ. ''ಒತ್ತಡದಿಂದ ನಾವ್ಯಾರೂ ಸಾಯಲ್ಲ, ಅದಕ್ಕೆ ನಾವು ಹೇಗೆ ರಿಯಾಕ್ಟ್ ಮಾಡ್ತೀವಿ ಅನ್ನೋದ್ರೆ ಮೇಲೆ ಅದು ಅವಲಂಭಿಸಿದೆ'' ಅಂತ ಸ್ಟ್ರೆಸ್ ಸಂಶೋಧನೆಯ ಪಿತಾಮಹ  ಡಾ.ಹನ್ಸ್ ಸೆಲ್ಯೇ ಹೇಳಿರೋ ಮಾತನ್ನ ಗಮನಿಸಿ.

7. ಆತಂಕ ಮಾಡ್ಕೊಳೋದ್ರಿಂದ ಏನೂ ಸಾಧಿಸಕ್ಕಾಗಲ್ಲ ಅನ್ನೋದು ಮರೀಬೇಡಿ

ಆತಂಕದಿಂದ ಗುರಿ ಮುಟ್ಟಕ್ಕಾಗಲ್ಲ. ಆತಂಕ ಪಡ್ತಾ ಪಡ್ತಾ ಆರೋಗ್ಯ ಕೆಡುತ್ತೆ. ಇದ್ರಿಂದ ಸಮಯ ಹಾಳಾಗುತ್ತೆ ಹೊರತು, ಜೀವನದಲ್ಲಿ ಏನನ್ನೂ ಸಾಧಿಸಕ್ಕೆ ಆಗಲ್ಲ. ಆತಂಕದಿಂದ ಜೀವನದಲ್ಲಿ ನಷ್ಟಾನೇ ಹೊರತು ಲಾಭ ಅಂತೂ ಇಲ್ಲ. ಆದ್ರಿಂದ ಆತಂಕವನ್ನ ಅಲ್ಲೇ ಬಿಟ್ಟು..ಮುಂದೆ ನಡಿಯೋದೆ ಜಾಣರ ಲಕ್ಷಣ.

8. ಪ್ರಾಣಾಯಾಮ, ಧ್ಯಾನ, ವ್ಯಾಯಾಮದಿಂದ ಮನಸ್ಸು ಪ್ರಶಾಂತವಾಗಿಟ್ಕೊಳ್ಳಿ

ದೀರ್ಘವಾಗಿ ಉಸಿರೆಳೆದ್ಕೊಳ್ಳಿ, ಸ್ವಲ್ಪ ಹೊತ್ತು ಹಾಗೇ ಬಿಗಿಹಿಡ್ದು ಆಮೇಲೆ ನಿಧಾನವಾಗಿ ಉಸಿರನ್ನ ಹೊರಗ್ ಬಿಡಿ. ಇದ್ರಿಂದ ಮನಸ್ಸಿನ ಭಾರ ಕಡಿಮೆ ಆಗುತ್ತೆ. ಒಂದ್ ಕಪ್ ಕಾಫಿ ಕುಡೀರಿ. ವ್ಯಾಯಾಮ ಮಾಡಿ, ಯೋಗ ಧ್ಯಾನ ಪ್ರಾಣಾಯಾಮ ಮಾಡಿ. ಇದ್ರಿಂದ ನಿಮ್ಮ ದೇಹ ಮನಸ್ಸು ಆತಂಕದಿಂದ ಹೊರಗ್ ಬರುತ್ತೆ. ಆತಂಕ ಜಾಸ್ತಿ ಆದಷ್ಟೂ ನಮ್ ದೇಹದಲ್ಲಿ ಅಡ್ರೆನಾಲಿನ್ ಪ್ರಮಾಣ ಜಾಸ್ತಿ ಆಗುತ್ತೆ. ವ್ಯಾಯಾಮ ಅದನ್ನ ಕರಗಿಸುತ್ತೆ. ಬೆಚ್ಚಗಿರೋ ನೀರಲ್ಲಿ ಹಿತವಾದಂತ ಒಂದ್ ಸ್ನಾನ ಮಾಡಿ. ಒಳ್ಳೇ ಸಂಗೀತ ಕೇಳಿ. ಇಂಟರ್-ನೆಟ್ಟಲ್ಲಿ ಜಾಲಾಡಿ, ನಿಮಗಿಷ್ಟವಾಗಿರೋ ಸಿನಿಮಾ ನೋಡಿ. ರಿಲ್ಯಾಕ್ಸ್ ಆಗೋದಕ್ಕೆ ಏನೋ ಒಂದು ಮಾಡಿ. ಆತಂಕಪಡ್ತಾ ಮಾತ್ರ ಕೂರ್ಬೇಡಿ.

9. ನಿಮ್ಮ ಆರೋಗ್ಯಕ್ಕಿಂತ ಯಾವುದೂ ಮುಖ್ಯ ಅಲ್ಲ ಅನ್ನೋದು ಗಮನದಲ್ಲಿ ಇರಲಿ

ನಿಜವಾದ ಸಮಸ್ಯೆ ಏನು ಅನ್ನೋದನ್ನ ಮೊದಲು ತಿಳ್ಕೊಳ್ಳಿ. ಸುಮ್ನೆ ಮನಸ್ಲನ್ನೇ ಹಂಗಾಗಿರತ್ತೆ, ಹಿಂಗಾಗಿರುತ್ತೆ ಅಂತ ಕಲ್ಪಿಸಿಕೊಳ್ಳೋದ್ರಿಂದ ಸಮಸ್ಯೆ ಇನ್ನಷ್ಟು ದೊಡ್ದದಾಗಿ ಕಾಣಾಕೆ ಶುರುವಾಗುತ್ತೆ. ಯಾವ ಸಮಸ್ಯೇನು ನಾವು ಊಹಿಸಿಕೊಂಡಷ್ಟು ದೊಡ್ಡದಾಗಿರಲ್ಲ. ಆರೋಗ್ಯಕ್ಕಿಂತ್ಲೂ ಯಾವುದೂ ಮುಖ್ಯ ಅಲ್ಲ. ಆತಂಕ, ಭಯ, ಒತ್ತಡ ಅನ್ನೋದು ವಿಷ ಇದ್ದಂತೆ ಅನ್ನೋದು ಗಮನದಲ್ಲಿರ್ಲಿ.

10. ಹಿಂದೇನೂ ನಿಮಗೆ ಆತಂಕ ಆಗಿತ್ತು, ಆಗಲೂ ನೀವು ಗೆದ್ದು ಹೊರಗೆ ಬಂದಿದ್ರಿ ಅಂತ ನೆನಪಿಸಿಕೊಳ್ಳಿ

ಯಾವತ್ತೂ ಆತಂಕ ಆಗಿದ್ದಾಗ ಅದರಿಂದ ಹೊರಗೆ ಬರಕ್ಕೇ ಆಗಲ್ವೇನೋ‌ ಅನ್ನಿಸ್ತಾ ಇರುತ್ತೆ. ಆದರೆ ನಿಮಗೇ ಎಷ್ಟೋ‌ ಸಲ ಎಂತೆಂಥದೋ ಆತಂಕಗಳಿಂದ ಹೊರಗೆ ಬಂದಿರೋ ಅನುಭವ ಇರುತ್ತೆ. ಬೇಕಾದರೆ ಯೋಚಿಸಿ ನೋಡಿ. ಹಾಗೇ ಈ ಸಲಾನೂ ಕಡೆಗೆ ಎಲ್ಲಾ ಸರಿ ಹೋಗುತ್ತೆ. ಯಾಕೆ ಅಂತೀರಾ? ಯಾಕಂದ್ರೆ ಈ ಆತಂಕಗಳೆಲ್ಲ ಬರೋದೇ‌ ನಿಮ್ನ ಪರೀಕ್ಷಿಸೋದಕ್ಕೆ. ನೀವು ಗೆದ್ದೇ ಗೆಲ್ತೀರಿ. ಪ್ರಯತ್ನ ಮಾಡಬೇಕಷ್ಟೆ.

ಇಷ್ಟು ಮಾಡುದ್ರೆ ನಿಮ್ಮ ಆತಂಕ ಎಷ್ಟು ಹೊತ್ತು ಉಳಿಯುತ್ತೆ? ಯೋಚನೆ ಮಾಡಿ. ಹೀಗೆ ಮಾಡೋದು ಬಿಟ್ಟು ಏನೂ ತೋಚ್ತಾ ಇಲ್ಲ ಅಂತ ಕೂತ್ಕೊಂಡ್ರೆ ಕೂತ್ಕೊಂಡೇ ಇರ್ತೀರಿ... ಏಳಿ, ಎದ್ದೇಳಿ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಒಂದಲ್ಲ ಒಂದ್ ರೀತೀಲಿ ದಿನಾ ಕರಿಬೇವು ತಿನ್ನೋರ್ಗೆ ಈ 11 ಲಾಭ ಗ್ಯಾರಂಟಿ

ಕೊಲೆಸ್ಟ್ರಾಲ್ ಕಡಿಮೆ ಮಾಡತ್ತೆ

ನಮ್ಮ ಕರ್ನಾಟಕ ಏನು ಭಾರತದಲ್ಲಿ ಎಲಾ ಕಡೆ ಕರ್ಬೇವು ಇಲ್ದೆ ಅಡುಗೆನೇ ಮಾಡಲ್ಲ. ಹಿಂದಿನ ಕಾಲದಿಂದ್ಲೂ ಈ ಪದ್ದತಿ ನಡ್ಕೊಂಡು ಬಂದಿದೆ. ಒಗ್ಗರಣೆಗೆ ಕರ್ಬೇವು ಇಲ್ದೆ ಎಲ್ಲಾದ್ರು ಅಡುಗೆ ಮಾಡೊದುಂಟೆ? ಕರ್ಬೇವಿನಲ್ಲಿ ವಿಟಮಿನ್ ಏ, ವಿಟಮಿನ್ ಬಿ, ಬಿ2, ವಿಟಮಿನ್ ಸಿ, ಕ್ಯಾಲ್ಸಿಯಮ್ ಹಾಗೂ ಕಬ್ಬಿಣದಂಶ ಹೆಚ್ಚಾಗಿ ಇರತ್ತೆ. ಹೊಟ್ಟೆಯಲ್ಲಿ ತಿಂದಿದ್ದು ಅರಗಕ್ಕೆ ಬೇಕಾಗೋ ರಾಸಾಯನಿಕ ಕಿಣ್ವಗಳು ಉತ್ಪತ್ತಿ ಆಗೋ ಹಾಗೆ ಪ್ರಚೋದಿಸತ್ತೆ. ನಮ್ ದೇಶ ನೋಡ್ಕೊಂಡು ಬೇರೆ ದೇಶಗಳಲ್ಲಿ ಕೂಡ ಕರ್ಬೇವು ಉಪ್ಯೋಗಿಸಕ್ಕೆ ಶುರು ಮಾಡಿದ್ದಾರೆ. ಕರ್ಬೇವಿನ ಎಣ್ಣೆ ಕೂಡ ಬಳಕೆ ಮಾಡ್ತಾರೆ. 

ಮಕ್ಕಳಿಗಂತೂ ಕರ್ಬೇವು ಯಾಕಾದ್ರೂ ಹಾಕ್ತಾರೋ, ಬರೀ ತೆಗೆಯೋದೇ ಆಗೋಗತ್ತೆ ಅಂತ ಬೇಜಾರ್ ಮಾಡ್ಕೊತಾರೆ. ಮಕ್ಕಳಿಗೇನ್ ಗೊತ್ತು ಅಲ್ವಾ? ಕರ್ಬೇವಿನ ಒಳ್ಳೆ ಗುಣಗಳ ಬಗ್ಗೆ ಇಲ್ಲಿ ಓದಿ ನಿಮ್ಮ ಮಕ್ಕಳಿಗೂ ತಿಳಿಸಿಕೊಡಿ.

1. ರುಚಿ ಹತ್ತದೆ ಇರೋ ನಾಲಿಗೆಗೆ ಕಿಕ್ ಕೊಡತ್ತೆ

ಏನೋ ಹುಷಾರ್ ತಪ್ಪಿ ಸಿಕ್ಕಾಪಟ್ಟೆ ಆಂಟಿಬಯಾಟಿಕ್ಸ್ ಮಾತ್ರೆ ತೊಗೊಂಡ ನಂತರ ನಾಲಿಗೆ ಬೆಂಡಾಗಿರೋ ಅನುಭವ ಆಗತ್ತಲ್ಲ ಆಗ ಕರ್ಬೇವಿನ ಚಟ್ನಿ ಅಥವಾ ಮೊದಲನೆ ಅನ್ನದಲ್ಲಿ ಕರ್ಬೇವಿನ ಚಟ್ನಿಪುಡಿ ಹಾಕೊಂಡು ತಿಂದ್ರೆ ನಾಲಿಗೆಯ ರುಚಿ ಸರಿಹೋಗತ್ತೆ. ಕರಿಬೇವಿನ ಚಿತ್ರಾನ್ನ ಜ್ವರ ಬಂದು ಹೋದ ನಂತರ ತಿಂದ್ರೆ ಸಕತ್ ಕಿಕ್ ಕೊಡತ್ತೆ. ಟ್ರೈ ಮಾಡಿ ನೋಡಿ.

ತೀರ ರುಚಿನೇ ಹತ್ತಲ್ಲ, ಹಸಿವೇ ಇಲ್ಲ ಅಂತ ಅನ್ನಿಸಿದಾಗ ಕರ್ಬೇವು ಪೇಸ್ಟ್ ಮಾಡ್ಕೊಂಡು ಸ್ವಲ್ಪ ಜೀರಿಗೆ ಪುಡಿ ಮತ್ತೆ ಕಪ್ಪು ಉಪ್ಪನ್ನ ಮಿಕ್ಸ್ ಮಾಡಿ ಮಜ್ಜಿಗೆಗೆ ಹಾಕಿ ಕುಡಿದ್ರೆ ಹೊಟ್ಟೆಗೆ ಒಳ್ಳೇದು.

2. ಸಿಕ್ಕಾಪಟ್ಟೆ ಪಿತ್ತ ಆಗಿದ್ರೆ ಕಡಿಮೆ ಮಾಡತ್ತೆ

ಬೆಳಗ್ಗೆ ಎದ್ದಾಗ ಒಂಥರಾ ತಲೆ ಸುತ್ತೋದು ಅಥವಾ ವಾಂತಿ ಆಗೋ ಹಾಗೆ ಆದ್ರೆ ಅಥವಾ ಹಳದಿ ರಸ ವಾಂತಿ ಆದ್ರೆ ನಮ್ ಮೈನಲ್ಲಿ ಪಿತ್ತ ಜಾಸ್ತಿ ಆಗಿದೆ ಅಂತ ಅರ್ಥ. ಆಗ ಕರ್ಬೇವ್ ಉಪ್ಯೋಗ್ಸಿ ಕಡಿಮೆ ಮಾಡೊಬೋದು, ಹೇಗೆ ಅಂದ್ರೇ...

ಒಂದು  - ಕರ್ಬೇವಿನ ಪೇಸ್ಟ್ ಮಾಡ್ಕೊಂಡು ಅದಕ್ಕೆ ಹುರಿದ ಉದ್ದಿನ ಕಾಳು ಮತ್ತು ಸ್ವಲ್ಪ ಉಪ್ಪು ಸೇರ್ಸ್ಕೊಂಡು ಒಂದೆರಡು ದಿನ ಬೆಳಗ್ಗೆ ಎದ್ದ ತಕ್ಷಣ ತಿನ್ನೋದು. ತಲೆಸುತ್ತು ಹಾಗೆ ವಾಂತಿ ಕಡಿಮೆ ಆಗತ್ತೆ ಇದ್ರಿಂದ.

ಎರಡನೇದು - ಕರ್ಬೇವಿನ ಪೇಸ್ಟ್ ಮಾಡ್ಕೊಂಡು ಅದಕ್ಕೆ ಸ್ವಲ್ಪ ನಿಂಬೆ ಹುಳಿ ಹಿಂಡಿ, ಸ್ವಲ್ಪ ಸಕ್ಕರೆ ಸೇರ್ಸಿ ತೊಗೊಳ್ಳೊದು. ಇದು ಕೂಡ ಪಿತ್ತ ಕಡಿಮೆ ಮಾಡತ್ತೆ.

3. ಕಣ್ಣಿಗೆ ಶಕ್ತಿ ಕೊಡತ್ತೆ, ಪೊರೆ ಬರೋ ಅವಕಾಶ ಕಡಿಮೆ

ದೃಷ್ಟಿ ದೋಷ ಇದ್ರೆ ಕಡಿಮೆ ಮಾಡತ್ತೆ. ಅದಕ್ಕೆ ಹೇಳೋದು ಊಟ-ತಿಂಡಿಗೆ ಹಾಕಿರೋ ಕರ್ಬೇವ್ನ ತಿನ್ನಿ, ಬಿಸಾಕ್ಬೇಡಿ ಅಂತ ದೊಡ್ಡೋರು :-)

ವಿಟಮಿನ್ ಏ ಹೆಚ್ಚಾಗಿ ಇರೋದ್ರಿಂದ ಕಣ್ಣಿನ ಪೊರೆ ಬರಕ್ಕೆ ತೀರಾ ವಯಸ್ಸಾಗೋ ತನಕ ಅವಕಾಶ ಮಾಡ್ಕೊಡಲ್ಲ. ಇದಲ್ದೆ ಕರ್ಬೇವಲ್ಲಿರೋ ಫೋಲಿಕ್ ಆಸಿಡ್ ಅಂಶ ನಾವು ತಿನ್ನೋ ಇತರ ಅಹಾರದಿಂದ ಕಬ್ಬಿಣದ ಅಂಶನ ನಮ್ ದೇಹ ಹೀರ್ಕೊಳ್ಳೊ ಹಾಗೆ ಮಾಡತ್ತೆ. ಆಯುರ್ವೇದದಲ್ಲಿ ಕರ್ಬೇವಿನ ಎಲೆ ಜ್ಯೂಸ್ ಮಾಡಿ ಕಣ್ಣಿಗೆ ಹಾಕಿ ದೃಷ್ಟಿಹೀನತೆಯನ್ನ ಪರಿಹಾರ ಮಾಡೋ ಪದ್ದತಿ ಇದ್ಯಂತೆ.

4. ಅಜೀರ್ಣ, ಹೊಟ್ಟೆ ಹುಣ್ಣು ಕಡಿಮೆ ಮಾಡತ್ತೆ

ಕರ್ಬೇವು ನೋಡಕ್ಕೆ ಬರೀ ಎಲೆ ಆದ್ರೆ ಹೊಟ್ಟೆ ಒಳಗೆ ಹೋದ್ರೆ ಜೀರ್ಣ ಆಗಕ್ಕೆ ಬೇಕಾದ ರಾಸಾಯನಿಕನ ಬೇಗ ಉತ್ಪತ್ತಿ ಆಗೋ ಹಾಗೆ ಪ್ರಚೋದನೆ ಮಾಡತ್ತೆ. ಇದಲ್ಲದೆ ನಮ್ ಮೈನಲ್ಲಿ ಕೊಬ್ಬು ಶೇಖರಣೆ ಆಗಕ್ಕೆ ಬಿಡಲ್ಲ. ಕರಗಿಸತ್ತೆ ಅಂದ್ರೆ ಜೀರ್ಣ ಆಗೋ ಹಾಗೆ ಮಾಡೊ ಶಕ್ತಿ ಕರ್ಬೇವಿನಲ್ಲಿದೆ.

ಇದಕ್ಕೆ ಒಂದು ಮುಷ್ಟಿ ಕರ್ಬೇವಿನ ಎಲೆ+ಕೆಂಪು ಮೆಣಸಿನಕಾಯಿ ತೊಗೊಂಡು ಸ್ವಲ್ಪ ತುಪ್ಪದಲ್ಲಿ ಹುರಿದು, ಅದಕ್ಕೆ ಉಪ್ಪು ಮತ್ತು ಹುಣಸೆಹಣ್ಣು ಹಾಕಿ ಚಟ್ನಿ ಅಥವಾ ಚಟ್ನಿಪುಡಿ ಮಾಡ್ಕೊಂಡು ಬಿಸ್ಬಿಸಿ ಅನ್ನಕ್ಕೆ ಹಾಕೊಂಡು ಊಟ ಮಾಡಿ. ಅಥವಾ ಒಂದು ಲೋಟ ಮಜ್ಜಿಗೆಗೆ ಕರ್ಬೇವಿನ ಎಲೆ ಮತ್ತೆ ಸ್ವಲ್ಪ ಇಂಗು ಹಾಕೊಂಡು ಊಟದ ನಂತರ ಕುಡಿರಿ. ಅಜೀರ್ಣ, ಭೇದಿ, ಹೊಟ್ಟೆ ಉಬ್ರ, ವಾಂತಿ, ತಲೆಶೂಲೆ ಎಲ್ಲಾ ಕಡಿಮೆ ಆಗತ್ತೆ.

ಮೂಲವ್ಯಾಧಿಗೆ ಕರ್ಬೇವಿನ ಚಿಗುರು ಎಲೆಗಳ್ನ ಜೇನುತುಪ್ಪದಲ್ಲಿ ಅದ್ದಿ ತಿಂದ್ರೆ ಸ್ವಲ್ಪ ಅರಾಮ ಸಿಗತ್ತೆ.

 

5. ಹೇಳೋದೇ ಬೇಕಾಗಿಲ್ಲ, ಡಯಾಬಿಟಿಸ್ಗೆ ಹೇಳಿ ಮಾಡ್ಸಿದ ಔಷಧಿ

ಡಯಾಬಿಟೀಸ್ ಇರೋರ್ಗೆ ಮೈಕೈಯೆಲ್ಲಾ ನೋವಿರತ್ತೆ, ಹಾಗೆ ಅವಾಗವಾಗ ತಲೆ ಸುತ್ತು, ಸುಸ್ತು ಮತ್ತೆ ಕಣ್ಣು ಮಂಜಾಗೋದು, ಕತ್ಲು ಕಟ್ಟೊದು ಎಲ್ಲಾ ಇರೋರು ಅವಾಗವಾಗ ಸ್ವಲ್ಪ ಕರ್ಬೇವಿನ ಎಲೆ ಹಾಕೊಂಡು ಜಗಿದ್ರೆ ಸ್ವಲ್ಪ ಮಟ್ಟಿಗೆ ಉತ್ತಮ ಆಗತ್ತೆ.

ಅಯ್ಯೋ ನಂಗೆ ಡಯಾಬಿಟೀಸ್ ಹೆರಿಡಿಟರಿ, ನಮ್ಮ ಅಪ್ಪ ಅಮ್ಮಂಗೆ ಇತ್ತು ಅಂತ ಅಳೋರಿಗೆ ಬೆಳಗಾನೆ ಎದ್ದು ಈ ತರ ಮಾಡ್ಬೋದು.

--- 10 ಕರ್ಬೇವಿನ ಎಲೇನ ಮೂರು ತಿಂಗಳ ಕಾಲ ಎಡಬಿಡದೆ ತಿನ್ನೋದು.

--- ಕರ್ಬೇವ್ನ ಬಿಸಿಲಲ್ಲಿ ಒಣಗಿಸಿಕೊಂಡು ಅದರ ಕಷಾಯ ಕೂಡ ಅಗಾಗ್ಗೆ ಕುಡಿಯೋದು

--- ಕರ್ಬೇವಿನ ಎಲೆ ಜೊತೆ ಒಂದೆರಡು ಮೆಣಸಿನ ಕಾಳನ್ನ ಅಗಿಯೋದು

ಹೀಗ್ ಮಾಡಿರೆ ಸಕ್ಕರೆ ಮಟ್ಟ ಹತೋಟಿಗೆ ಬರೋದಲ್ಲ್ದೆ ಬೊಜ್ಜು ಕೂಡ ಕಡಿಮೆ ಆಗತ್ತಂತೆ.

6. ಕೊಲೆಸ್ಟ್ರಾಲ್ ಕಡಿಮೆ ಮಾಡತ್ತೆ

ನಮ್ ಮೈನಲ್ಲಿ ಕೊಲೆಸ್ಟ್ರಾಲ್ ಜಾಸ್ತಿ ಆದ್ರೆ ಬೊಜ್ಜಿನ ಸಮಸ್ಯೆ, ಬ್ಲಡ್ ಪ್ರೆಶರ್ ಇನ್ನಿತರ ಖಾಯಿಲೆ ಬರತ್ತೆ ಅಲ್ವಾ. ಹಾಗಾಗಿ ನಾವು ಬಳಸೋ ಎಣ್ಣೆನ ಕೂಡ ಕರ್ಬೇವು ಹಾಕಿ ಕಾಯಿಸಿ ಶೋಧಿಸಿಟ್ಟುಕೊಂಡ್ರೆ ಎಣ್ಣೆಲಿರೋ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗತ್ತಂತೆ.

ಇದಕ್ಕೆ 1 kg ಅಡುಗೆ ಎಣ್ಣೇಲಿ 15-20 ಕರ್ಬೇವಿನ ಎಲೆ ಹಾಕಿ ರೆಡಿ ಮಾಡಿ. ಈ ಎಣ್ಣೇನ ಅಡುಗೆ ಮಾಡ್ಬೇಕಾದ್ರೆ ಉಪ್ಯೋಗ್ಸಿ.

ಕರ್ಬೇವಿನ ಎಣ್ಣೇನ ಸೋಪ್ ಮಾಡಕ್ಕೂ ಬಳಸ್ತಾರೆ.

7. ಭೇದಿ ನಿಲ್ಸಕ್ಕೆ ರಾಮಬಾಣ

40 gm ಕರ್ಬೇವು ಎಲೆ ತೊಗೊಂಡು, ಅದಕ್ಕೆ 10 gm ಜೀರಿಗೆ ಪುಡಿ ಹಾಕಿ ಕುಡೀಬೇಕು. ಆಮೇಲೆ ಒಂದು ಲೋಟ ಬೆಚ್ಚನೆಯ ನೀರನ್ನ ಕುಡೀಬೇಕು. 10 ನಿಮಿಷದ ನಂತರ ಒಂದು ಸ್ಪೂನ್ ಜೇನುತುಪ್ಪ ತಿನ್ಬೇಕು. ಹೀಗೆ ದಿನಕ್ಕೆ 3-4 ಟೈಮ್ ಮಾಡಿದರೆ ಭೇದಿ ನಿಲ್ಲತ್ತಂತೆ.

8. ಬಾಲನರೆ ತಡೆಯತ್ತೆ

ಹುಡ್ಗೂರು ಹುಡ್ಗೀರು ಇಬ್ರಿಗೂ ಈಗಿನ ಕಾಲದಲ್ಲಿ ಬಹಳ ಬೇಗ ಕೂದ್ಲು ನರೆ ಆಗೋದು ನೋಡ್ತಿದ್ದೀವಿ. ಅಂಥೋರು ಕರ್ಬೇವು ತಿಂದು ಕರ್ಬೇವು ತಲೆಗೆ ಹಚ್ಚ್ಕೊಂಡು ಬಿಳಿ ಕೂದ್ಲಾಗೋದನ್ನ ತಡಿಬೋದು. ತಲೆ ಹೊಟ್ಟು ಕೂಡ ಕಡಿಮೆ ಮಾಡ್ಕೊಬೋದು. ಹೀಗೆ ಮಾಡಿ:

ಒಂದು ಲೀಟರ್ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆ ತೊಗೊಳ್ಳಿ. 10-20 ಕರ್ಬೇವಿನ ಎಲೆ ತೊಗೊಂಡು ಅದಕ್ಕೆ ಹಾಕಿ ಚೆನ್ನಾಗಿ ಒಲೆ ಮೇಲಿಟ್ಟು ಕಾಯಿಸಿ. ಕಾದ ಎಣ್ಣೆನ ಆರಕ್ಕೆ ಬಿಡಿ. ಆಮೇಲೆ ಬಾಟಲ್ನಲ್ಲಿ ತುಂಬಿಟ್ಟುಕೊಂಡು ತಲೆಸ್ನಾನ ಮಾಡೊ ಮುಂಚೆ ತಲೆ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ 15-20 ನಿಮಿಶ ಬಿಟ್ಬಿಡಿ. ನಂತರ ಸೀಗೆಕಾಯಿ ಅಥವಾ ಶಾಂಪೂ ಹಾಕಿ ತಲೆ ತೊಳೆದ್ರಾಯ್ತು! ವಾರಕ್ಕೆ ಒಂದೆರಡು ಬಾರಿ ಹೀಗೆ ಮಾಡಿದ್ರೆ ನರೆಕೂದ್ಲಾಗೋದನ್ನ ತಡಿಬೋದು.

ಇನ್ನೂ ಹೆಚ್ಚಿಗೆ ಮಾಡೊದಾದ್ರೆ ಇದೇ ಕೊಬ್ಬರಿ ಎಣ್ಣೆಗೆ ಕರ್ಬೇವ್ ಜೊತೆ ದಾಸವಾಳದ ಎಲೆ, ನಲ್ಲಿಕಾಯಿ ಹಾಗೂ ತುಳಸಿ ಎಲೆ ಹಾಕ್ಬೋದು.

9. ಮೂಳೆಗೆ ಬೇಕಾದ ಕ್ಯಾಲ್ಶಿಯಮ್ ಕೊಡತ್ತೆ

ಮೂಳೆ ಸೆವೆತದಿಂದ ಕಷ್ಟ ಪಡ್ತಿರೋರು ತಮ್ಮ ಊಟ ತಿಂಡೀಲಿ ಕರ್ಬೇವಿಗೆ ಆದ್ಯತೆ ಕೊಟ್ರೆ ಅದ್ರಿಂದ ಅವರ ದೇಹಕ್ಕೆ ಬೇಕಾದ ಕ್ಯಾಲ್ಶಿಯಮ್ ಪೂರೈಕೆ ಆಗತ್ತೆ.

10. ಮೊಡವೆ ಹೋಗ್ಸಿ ಚರ್ಮದ ಸೌಂದರ್ಯ ಹೆಚ್ಚಿಸತ್ತೆ

ಬೇಸಿಗೇಲಿ ಚರ್ಮದ ಮೇಲೆ ಚಿಕ್ಕ ಚಿಕ್ಕ ಗುಳ್ಲೆ ಏಳೋದುಂಟು. ಅದಕ್ಕೆ ಕರ್ಬೇವಿನ ಪೌಲ್ಟೀಸ್ ಅಥವಾ ಪೇಸ್ಟ್ ಹಚ್ಚಿದ್ರೆ ಬೇಗ ಉರಿ ಕಡಿಮೆ ಆಗಿ ಮಾಯತ್ತೆ.

ಕರ್ಬೇವ್ ಎಲೇನ ತೊಗೊಂಡು ಪೇಸ್ಟ್ ತರ ಮಾಡ್ಕೊಂಡು ಸ್ವಲ್ಪ ಅರಿಶಿನ ಮಿಕ್ಸ್ ಮಾಡಿ ಮುಖಕ್ಕೆ ಸ್ವಲ್ಪ ದಿನ ಹಚ್ಚುತ್ತಾ ಬಂದ್ರೆ ಮುಖದ ಚರ್ಮ ಸಿಕ್ಕಾಪಟ್ಟೆ ಕ್ಲೀನ್ ಅಂಡ್ ಕ್ಲಿಯರ್ ಆಗತ್ತೆ!

ಕರ್ಬೇವು ಗಿಡ ಕೂಡ ಹಣ್ಣು ಬಿಡತ್ತೆ. ಕಾಯಿ ಆಗಿದ್ದಾಗ ಹಸಿರು ಬಣ್ಣ, ಹಣ್ಣಾದಾಗ ನೇರಳೆ ಬಣ್ಣ ಇರತ್ತೆ. ಈ ಕಾಯಿ/ಹಣ್ಣಿನ ಜ್ಯೂಸ್ ತೊಗೊಂಡು ಅದಕ್ಕೆ ಸಮ ಪ್ರಮಾಣ ನಿಂಬೆ ರಸ ಹಾಕಿ ಹುಳ ಅಥವಾ ವಿಷದ ಹಾವು ಕಚ್ಚಿರೋ ಜಾಗಕ್ಕೆ ಹಚ್ಚಿದ್ರೆ ತಕ್ಷಣ ಉರಿ ಕಡಿಮೆ ಆಗತ್ತಂತೆ.

11. ಬಾಯಿ ದುರ್ವಾಸನೆ ವಸಡಿನ ಫಂಗಸ್ ಪ್ರಾಬ್ಲಂಗೂ ಕರ್ಬೇವು ಮದ್ದು

ಹಲ್ಲಿನ ಮೇಲೆ ಕೂತ್ಕೊಳೊ ಕೊಳೆ ಮತ್ತೆ ಅದ್ರಿಂದ ಉಂಟಾಗೋ ಕೆಟ್ಟ ವಾಸನೆನ ಕಡಿಮೆ ಮಾಡಕ್ಕೆ ಕರಿಬೇವು ಸಹಾಯ ಮಾಡತ್ತೆ. 

 

ನಿಮ್ಮ ದಿನನಿತ್ಯದ ಊಟ-ತಿಂಡೀಲಿ...ವಡೆ, ಚಿತ್ರಾನ್ನ, ಸಾರು, ಗೊಜ್ಜು, ತಂಬೂಳಿಗಳಿಗೆ ಕರ್ಬೇವು ಬಳಸುತ್ತಾ ಬನ್ನಿ. ಹಾಗೆ ಅದನ್ನ ಚೆಲ್ಲದೆ ತಿನ್ನೋ ಪ್ರಾಕ್ಟೀಸ್ ಕೂಡ ಮಾಡ್ಕೊಳ್ಳಿ ಅಂತ ಹೇಳಕ್ಕೆ ಮೇಲಿನ 11 ಕಾರಣಕ್ಕಿಂತ ಮತ್ತೇನ್ ಬೇಕು?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: