ನವಣೆಯಿಂದ ಈ 12 ರುಚ್-ರುಚಿ ತಿಂಡಿ ಮಾಡ್ಬೋದು ಅಂತ ಗೊತ್ತಾದ್ಮೇಲೆ ಡಾಕ್ಟರ್ ತಿನ್ನಿ ಅನ್ನೋ ವರೆಗೂ ನೀವು ಕಾಯಲ್ಲ

ಜಾಮೂನ್ನೂ ಮಾಡ್ಬೋದು ರೀ!

ಸಿದ್ದರಾಮೇಶ್ವರರ ಈ ವಚನ ಈಗ ಎಷ್ಟೋಂದು ಸರಿ ಅಂತ ಅನ್ನಿಸತ್ತೆ...

ನೀರಿಲ್ಲದ ಭೂಮಿಯಲ್ಲಿ ಮೂರು ಹೇರು ನವಣೆಯ ಬೆಳೆದುದ ಕಂಡೆ
ಆ ನವಣೆ ಅಳೆದುಕೊಡುವಡೆ ಇಮ್ಮಡಿ ಮುಮ್ಮಡಿಯಾದುದ ಕಂಡೆ
ಕೊಂಡವಂಗೆ ಜನ್ಮಜನ್ಮದಲ್ಲಿ ಭೋಗಿಸುವುದಕ್ಕೆ ಕಣಜಗಳಾದುದ ಕಂಡೆ
ನೋಡಾ, ಕಪಿಲಸಿದ್ದಮಲ್ಲಿಕಾರ‍್ಜುನಾ|

ನವಣೆ ಒಂದು ಸತ್ವಯುತ ಕಿರುಧಾನ್ಯ. ನವಣೇಲಿ ಇರೋ ಪೌಷ್ಟಿಕತೆ ಎಲ್ಲಕ್ಕಿಂತ ಮಿಗಿಲಾದ್ದು ಅನ್ನೋದೆ ಇಲ್ಲಿ ಅಡಕವಾಗಿರೋ ಮುಖ್ಯ ಅಂಶ. ನವಣೆ ಭಾರತದ ಅತೀ ಹಳೇ ಸಿರಿಧಾನ್ಯಗಳಲ್ಲಿ ಒಂದು. ಸಾವಿರಾರು ವರ್ಷಗಳ ಹಿಂದಿನ ಇತಿಹಾಸವಿರುವ ನವಣೆ ಇಂದಿಗೂ ನಾನಾ ಬಗೆಗಳಲ್ಲಿ ಬಳಕೆಯಲ್ಲಿದೆ. ಭಾರತದಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತೆ ಬಿಹಾರ ರಾಜ್ಯದಲ್ಲಿ ನವಣೆ ಬೆಳೀತಾರೆ. ನಮ್ಮಲ್ಲಿ ಸಿಗೋ ತಳಿ ಅಂದ್ರೆ ಕರಿ ನವಣೆ, ಕೆಂಪು ನವಣೆ, ಜಡೆ ನವಣೆ, ಹುಲ್ಲು ನವಣೆ, ಹಾಲು ನವಣೆ ಹೀಗೆ ಹಲವಾರು. ಒಂದೊಂದು ತಳಿಗೂ ಒಂದೊಂದು ವಿಶೇಷ ಗುಣ ಇದೆ. ಇಂಗ್ಲೀಷ್ನಲ್ಲಿ ಫಾಕ್ಸ್ಟೈಲ್ ಮಿಲ್ಲೆಟ್ ಅಂತಾ ಕರೀತಾರೆ.

ನವಣೆ ಪ್ರೋಟೀನ್, ಸೂಕ್ಷ್ಮ ಪೋಷಕಾಂಶಗಳು ಮತ್ತೆ ನಾರಿನಾಂಶದಿಂದ ತುಂಬಿದೆ. ಇದು ಕೇವಲ ತೂಕ ಕಡಿಮೆ ಮಾಡೋರಿಗೆ ಮಾತ್ರ ಅಲ್ಲ ಡಯಾಬಿಟೀಸ್ನಿಂದ ಕಷ್ಟಪಡೊರಿಗೂ ಸಹ ಉತ್ತಮ ಆಹಾರ. ತೆಳು ಹಳದಿ ಬಣ್ಣದ ನವಣೆ ಅಕ್ಕಿ ಶರೀರದ ನರನಾಡಿಗಳಿಗೆ ಹುರುಪು ಕೊಡತ್ತೆ.

ನವಣೆ ಉಪ್ಯೋಗಿಸಿ ಏನೇನ್ ತಿಂಡಿ, ಅಡುಗೆ ಮಾಡ್ಬೋದು ಅಂತಾ ಇಲ್ಲಿ ನಿಮ್ಗೋಸ್ಕರ ಕೊಟ್ಟಿದ್ದೀವಿ...ಓದಿ, ಮಾಡಿ ನೋಡಿ. ನಿಮ್ಮ ಅರೋಗ್ಯ ನಿಮ್ಮ ಕೈಯಲ್ಲೇ ಇಟ್ಟುಕೊಳ್ಳಿ:-)

1. ನವಣೆ ತಂಬಿಟ್ಟು

ಬೇಕಾಗಿರೋ ಸಾಮಾನು ಏನಂದ್ರೆ...

ನವಣೆ ಅಕ್ಕಿ - 1/2 ಕೆ.ಜಿ, ಬೆಲ್ಲ - 1/2 ಕೆ.ಜಿ, ಒಣಕೊಬ್ರಿ - ಒಂದು ಬಟ್ಟಲು, ಏಲಕ್ಕಿ ಪುಡಿ - 1/2 ಟೀ ಚಮಚ, ಗಸಗಸೆ - ಒಂದು ಟೀ ಚಮಚ, ತುಪ್ಪ - 4 ಟೀ ಚಮಚ, ಒಣದ್ರಾಕ್ಷಿ, ಗೋಡಂಬಿ - 10 ಚೂರು

ಹೆಂಗೆ ಮಾಡೋದು ಅಂದ್ರೇ...

ನವಣೆ ಅಕ್ಕಿ ಚೆನ್ನಾಗಿ ತೊಳ್ದು ಒಂದು ದಿನ ನೆರಳಿನಲ್ಲಿ ಒಣಗಿಸಿ. ಆಮೇಲೆ ಬೀಸಿ ಹಿಟ್ಟು ಮಾಡ್ಕೊಳ್ಳಿ. ಆ ಹಿಟ್ಟಿಗೆ ಸ್ವಲ್ಪ ತುಪ್ಪ ಹಾಕಿ ಘಂ ಅನ್ನೋ ಹಾಗೆ ಹುರೀರಿ. ಹಿಟ್ಟು ತಣ್ಣಗೆ ಆಗ್ಲಿ. ಆಮೇಲೆ ಸಣ್ಣಗೆ ಬೆಲ್ಲ ತುರ್ಕೊಂಡು ಅದಕ್ಕೆ ಕಲಸಿ ಚೆನ್ನಾಗಿ ನಾದಿ ಏಲಕ್ಕಿ ಪುಡಿ , ಹುರಿದ ಗಸಗಸೆ ಮತ್ತು ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಒಣಕೊಬ್ಬ್ರಿ ಹಾಕಿ ಕೈಯಿಂದ ಚೆನ್ನಾಗಿ ನಾದಿ ಉಂಡೆ ಕಟ್ಟಿ. 

ಇದು ತಿಂಗಳಗಟ್ಟಲೇ ಇಟ್ರೂನೂ ಒಂಚೂರು ಕೆಡಲ್ಲ. ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿ ದಿನ ಈ ಉಂಡೆ ಮಾಡ್ತಾರೆ. 

2. ನವಣೆ ಹೋಳಿಗೆ

ಬೇಕಾಗಿರೋ ಸಾಮಾನು ಏನಂದ್ರೆ...

ನವಣೆ ಹಿಟ್ಟು - 1 ಲೋಟ, ಬೆಲ್ಲ - 1 ಲೋಟ, ಪುಟಾಣಿ ಹಿಟ್ಟು - 1/2 ಲೋಟ, ಏಲಕ್ಕಿ ಪುಡಿ - 1/2 ಟೀ ಚಮಚ, ಗಸಗಸೆ - ಒಂದು ಟೀ ಚಮಚ, ಕರಿಯಕ್ಕೆ ಎಣ್ಣೆ, ಕಣಕ ಮಾಡಕ್ಕೆ ಗೋಧಿ ಹಿಟ್ಟು - 1/2 ಲೋಟ, ಮೈದಾ ಹಿಟ್ಟು -  1/2 ಲೋಟ

ಹೆಂಗೆ ಮಾಡೋದು ಅಂದ್ರೇ...

ನವಣೆ ಅಕ್ಕಿನ ಹುರಿದು ಹಿಟ್ಟು ಮಾಡ್ಕೊಳ್ಳಿ. ಬಾಣಲೀಲಿ ಬೆಲ್ಲನ ನೀರ್ನಲ್ಲಿ ಹಾಕಿ ಎಳೆ ಪಾಕದ ಹದಕ್ಕೆ ಕುದಿಸಿ. ನಂತರ ಬಾಣಲಿ ಕೆಳಗಿಳಿಸಿ ಪಾಕಕ್ಕೆ ಏಲಕ್ಕಿ, ಗಸಗಸೆ, ನವಣೆ ಹಿಟ್ಟು, ಪುಟಾಣಿ ಹಿಟ್ಟು ಹಾಕೊಂಡು ಮಿಕ್ಸ್ ಮಾಡಿ. 

ಇದಕ್ಕೂ ಮೊದ್ಲೆ ಗೋಧಿ ಮತ್ತು ಮೈದಾ ಹಿಟ್ಟನ್ನ ಕಲಸಿ ಚಪಾತಿ ಹಿಟ್ಟಿಗಿಂತ ಸ್ವಲ್ಪ ಮೆತ್ತಗೆ ಕಲಿಸಿ ರೆಡಿ ಮಾಡ್ಕೊಳಿ. ಸಣ್ಣ ಉಂಡೆ ಮಾಡಿ ಆ ಉಂಡೆನಾ ಗುಂಡಗೆ ಲಟ್ಟಿಸಿ ಅದ್ರಲ್ಲಿ ನವಣೆ ಉಂಡೆನ ತುಂಬಿ ಪೂರಿ ಅಕಾರದಲ್ಲಿ ಲಟ್ಟಿಸಿ. ಬಾಣಲಿಯಲ್ಲಿ ಎಣ್ಣೆ ಕಾಯ್ಸ್ಕೊಳ್ಳಿ. ಅದಕ್ಕೆ ಲಟ್ಟಿಸಿದ ಪೂರಿಯನ್ನು ಹಾಕಿ ಕರಿದ್ರೆ ಗರಿ ಗರಿ ಹೋಳಿಗೆ ರೆಡಿ. 

ಉತ್ತರ ಕರ್ನಾಟಕದಲ್ಲಿ ಎಳ್ಳು ಅಮಾವಾಸ್ಯೆಗೆ ಈ ತಿಂಡಿ ಮಾಡ್ತಾರೆ.

ಮೂಲ

3. ನವಣೆ ಅಕ್ಕಿ ಮಸಾಲೆ ದೋಸೆ

ಬೇಕಾಗಿರೋ ಸಾಮಾನು ಏನಂದ್ರೆ...

ಉದ್ದಿನ ಕಾಳು - 1 ಲೋಟ, ನವಣೆ - 3 ಕಪ್, ಅಕ್ಕಿ - 1 ಕಪ್, ಜೀರಿಗೆ, ಮೆಂತ್ಯೆ - ಒಂದು 1.4 ಚಮಚ, ಟೊಮೆಟೊ - 1, ಸೌತೆಕಾಯಿ ತುರಿ - 1/2 ಕಪ್, ಈರುಳ್ಳಿ - 1, ಹಸಿಮೆಣಸಿನಕಾಯಿ - 3, ಹಸಿ ಶುಂಠಿ ಪೇಸ್ಟ್ - ಸ್ವಲ್ಪ, ಕೊತ್ತಂಬ್ರಿ ಸೊಪ್ಪು - ಸ್ವಲ್ಪ

ಹೆಂಗೆ ಮಾಡೊದು ಅಂದ್ರೇ...

ನವಣೆ, ಬಿಳಿ/ಕೆಂಪು ಅಕ್ಕಿ, ಉದ್ದು, ಮೆಂತ್ಯೆ, ಜೀರಿಗೆ ಇವನ್ನು ನಾಲ್ಕು ಘಂಟೆಗಳ ಕಾಲ ನೆನೆಸಿ, ರಾತ್ರಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿ ಇಡಿ. ಬೆಳಗ್ಗೆ ದೋಸೆ ಮಾಡೊ ಮುಂಚೆ ಏನಾದ್ರೂ ತರ್ಕಾರಿ ಬೇಕಾದ್ರೆ ತುರಿದು ಅಥವ ರುಬ್ಬಿ ಹಿಟ್ಟಿಗೆ ಸೇಸ್ಕೊಳ್ಳಿ. ಕವಲಿ ಮೇಲೆ ಈ ಹಿಟ್ಟನ್ನ ಹಾಕಿದ್ರೆ ಕೆಂಪಗೆ ಗರಿ ಗರಿಯಾಗಿ ದೋಸೆ ಏಳತ್ತೆ. ತಿನ್ನಕ್ಕೆ ಭಾಳ ರುಚಿ ಇರತ್ತೆ.

ಮೂಲ

4. ನವಣೆ ನುಚ್ಚಿನುಂಡೆ

ಬೇಕಾಗಿರೋ ಸಾಮಾನು ಏನಂದ್ರೆ...

ನವಣೆ, ಉದ್ದಿನಬೇಳೆ, ಕಡಲೆಬೇಳೆ, ಹೆಸ್ರುಬೇಳೇ, ತೊಗರಿಬೇಳೆ - ಎಲ್ಲಾ ಒಂದು ಬಟ್ಲು

ಹಸಿ ಮೆಣಸಿನಕಾಯಿ - 5-6, ಜೀರಿಗೆ - 1 ಚಮಚ, ಕೊತ್ತಂಬ್ರಿ ಸೊಪ್ಪು - 1 ಬಟ್ಲು, ತೆಂಗಿನ ತುರಿ - 1 ಬಟ್ಲು, ಉಪ್ಪು ಮತ್ತೆ ಪ್ಲೇಟಿಗೆ ಸವ್ರಕ್ಕೆ ಸ್ವಲ್ಪ ಎಣ್ಣೆ

ಹೆಂಗೆ ಮಾಡೋದು ಅಂದ್ರೇ...

ನವಣೇನಾ 10 ಘಂಟೆ ಕಾಲ ನೆನೆಸಿಡಿ. ಮಿಕ್ಕ ಎಲ್ಲಾ ಬೇಳೆಗಳನ್ನ 4 ಘಂಟೆ ನೆನೆಸಿದ್ರೆ ಸಾಕು. ನೀರನ್ನ ಪೂರ್ತಿ ತೆಗೆದು ತರಿತರಿಯಾಗಿ ರುಬ್ಬಿಕೊಳ್ಳಿ. ಹಸಿಮೆಣ್ಸಿನ್ಕಾಯಿ , ಜೀರಿಗೆ, ಕೊತ್ತಂಬರಿ ಸೊಪ್ಪು, ತೆಂಗಿನ ತುರಿನಾ ಕೂಡ ತರಿ ತರಿಯಾಗಿ ರುಬ್ಬಿಕೊಳ್ಳಿ. ರುಚಿಗೆ ಉಪ್ಪು ಸೇರ್ಸಿ ಚೆನ್ನಾಗಿ ಕೈಯಾದಿಸಿ. ಬೇಕಾದ ಅಕಾರದಲ್ಲಿ ಉಂಡೆ ಮಾಡಿ ಇಡ್ಲಿ ಬೇಯಿಸೋ ಪಾತ್ರೇಲಿ ಒಂದೊಂದೆ ಉಂಡೆ ಇಟ್ಟು ಬೇಯಿಸಿಕೊಳ್ಳಿ. ಒಂದು 15-20 ನಿಮಿಷ ಬೇಯಿಸಿ ಕಾಯಿ ಚಟ್ನಿ ಜೊತೆ ತಿನ್ನಕ್ಕೆ ಕೊಡಿ. ಬೆಳಗ್ಗೆ ತಿಂಡಿ ತರ ಇದನ್ನ ತಿಂದ್ರೆ ಸಂಜೇ ತನಕ ಹಸಿವಾಗಲ್ಲ ಅಂಥಾ ಸಾಲಿಡ್ ಆಗಿ ಹೊಟ್ಟೇಲಿ ಕೂತ್ಬಿಡತ್ತೆ. ಮೈಗೂ ಒಳ್ಳೇದು.

ಮೂಲ

5. ನವಣೆ ಮಸಾಲೆ ಅನ್ನ

ಬೇಕಾಗಿರೋ ಸಾಮಾನು ಏನಂದ್ರೆ...

ನವಣೆ ಅಕ್ಕಿ - 1 ಕಪ್, ಹೆಸರು ಬೇಳೆ - 1 ಕಪ್, ಈರುಳ್ಳಿ - 2, ಬೆಳುಳ್ಳಿ ಬೇಕಾದ್ರೆ ಒಂದು ಎಸಳು ಹಾಕೊಳ್ಳಿ, ಹಸಿಮೆಣಸಿನಕಾಯಿ - 6, ಹುಣಸೆಹಣ್ಣಿನ ರಸ - 1/4 ಕಪ್, ಹಸಿ ಶುಂಠಿ, ಮಸಾಲೆ ಪುಡಿ, ಉಪ್ಪು, ಅರಿಶಿನ ಪುಡಿ, ಸ್ವಲ್ಪ ಬೆಲ್ಲ

ಮತ್ತೆ ಒಗ್ಗರಣೆಗೆ - ಸಾಸಿವೆ, ಜೀರಿಗೆ, ಕರ್ಬೇವು, ಕೊತ್ತಂಬ್ರಿ ಸೊಪ್ಪು

ಹೆಂಗೆ ಮಾಡೋದು ಅಂದ್ರೇ...

ಕುಕ್ಕರ್ ಪಾತ್ರೇಲಿ ಎರಡು ಚಮಚ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಹಸಿ ಶುಂಠಿ, ಈರುಳ್ಳಿ, ಕರ್ಬೇವು ಮತ್ತೆ ಸಣ್ನಗೆ ಹೆಚ್ಚಿದ್ ಕೊತ್ತಂಬ್ರಿ ಸೊಪ್ಪು ಹಾಕಿ. ಆಮೇಲೆ ನವಣೆ ಅಕ್ಕಿ ಜೊತೆ ಹೆಸ್ರು ಬೇಳೇನಾ ತೊಳ್ಕೊಂಡು ಹಾಕಿ. ಮಸಾಲೆ ಪುಡಿ, ಅರಿಶಿನ ಮತ್ತೆ ಉಪ್ಪು ಹಾಕಿ ಮಿಕ್ಸ್ ಮಾಡಿ. ಅದಕ್ಕೆ 4 ಕಪ್ ನೀರು, ಹುಣಸೆಹಣ್ಣಿನ ರಸ, ಬೆಲ್ಲ, ಕೊತ್ತಂಬ್ರಿ ಸೊಪ್ಪು ಹಾಕಿ ಕುಕ್ಕರ್ 3 ಸಲ ಕೂಗಿಸಿ. ಇಷ್ಟ್ ಮಾಡಿದ್ರೆ ತಿನ್ನಕ್ಕೆ ರೆಡಿ.

6. ನವಣೆ ಹುರಿದ ಹಿಟ್ಟಿನ ಪಾನಕ

ಬೇಕಾಗಿರೋ ಸಾಮಾನು ಏನಂದ್ರೆ...

ನವಣೆ ಹುರಿದ ಹಿಟ್ಟು - 4 ಚಮಚ, ಬೆಲ್ಲದ ಪುಡಿ - 1 1/2 ಅಚ್ಚು, ಹುಣಸೆಹಣ್ಣು - ನಿಂಬೆ ಗಾತ್ರದ್ದು, ಜೀರಿಗೆ ಪುಡಿ - 1/2 ಚಮಚ, ನೀರು - ಅರ್ಧ ಲೀಟರ್, 

ಹೆಂಗೆ ಮಾಡೋದು ಅಂದ್ರೇ...

ನವಣೇನಾ ಒಂದು ದಿನ ನೀರ್ನಲ್ಲಿ ನೆನೆಸಿ ಚೆನ್ನಾಗಿ ತೊಳೀರಿ. ಒಣಗಿದ ಮೇಲೆ ಸ್ವಲ್ಪ ಸ್ವಲ್ಪವೇ ಕಾದ ಬಾಣಲೆಗೆ ಹಾಕಿ ಹುರೀರಿ. ಆಮೇಲೆ ಮಿಕ್ಸರ್ನಲ್ಲಿ ಪುಡಿ ಮಾಡಿ ಗಾಳಿಯಾಡದೆ ಇರೋ ತರದ ಡಬ್ಬದಲ್ಲಿ ಹಾಕಿಡಿ. ಇದು ಹುರಿ ಹಿಟ್ಟು ಆಯ್ತು.

ಪಾನಕಕ್ಕೆ ಏನ್ ಮಾಡ್ಬೇಕಂದ್ರೆ...ನೀರ್ನಲ್ಲಿ ಪುಡಿ ಬೆಲ್ಲ ಸೇರ್ಸಿ ಕರಗಿಸಿ. ಆಮೇಲೆ ಹುಣಸೆಹಣ್ಣಿನ ನೀರನ್ನ ಸೇರ್ಸಿ, ಅದಕ್ಕೆ ಜೀರಿಗೆ ಪುಡಿ, ಹುರಿದ ನವಣೆ ಹಿಟ್ಟು ಹಾಕಿ ಗಂಟಿಲದ ಹಾಗೆ ಕೆದಕಿದ್ರೆ ಪೌಷ್ಟಿಕ ನವಣೇ ಪಾನಕ ರೆಡಿ.

ಬೇಸಿಗೆಯಲ್ಲಿ ಬಾಯಾರಿಕೆ ಹೆಚ್ಚು. ಅಂಥ ಸಮಯದಲ್ಲಿ ಈ ಅರೋಗ್ಯಕರ ಪೇಯನ ಕುಡಿದ್ರೆ ಬಹಳ ಹಿತವಾಗಿರತ್ತೆ.

7. ನವಣೆ ವಡೆ

ಬೇಕಾಗಿರೋ ಸಾಮಾನು ಏನಂದ್ರೆ...

ನವಣೆ ಹಿಟ್ಟು - 1 ಪಾವು (ತೊಳೆದು ಆರಿಸಿ ಹಿಟ್ಟು ಮಾಡಿದ್ದು), ಸೀಮೆ ಅಕ್ಕಿ / ಸಬ್ಬಕ್ಕಿ - 1/4 ಪಾವು (ಆರು ಗಂಟೆ ನೀರ್ನಲ್ಲಿ ನೆನೆಸಿದ್ದು), 

ಬೇಯಿಸಿದ ಆಲೂಗೆಡ್ಡೆ - 2, ಜೀರಿಗೆ - 1 ಚಮಚ, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ - 4, ಸಣ್ಣಗೆ ಹೆಚ್ಚಿದ್ ಕರ್ಬೇವು ಮತ್ತೆ ಕೊತ್ತಂಬ್ರಿ ಸೊಪ್ಪು, ಕರಿಯಕ್ಕೆ ಎಣ್ಣೆ ಮತ್ತೆ ಸ್ವಲ್ಪ ಉಪ್ಪು

ಹೆಂಗೆ ಮಾಡೋದು ಅಂದ್ರೇ...

ನವಣೆ ಹಿಟ್ಟು, ಸೀಮೆ ಅಕ್ಕಿ ಒಂದು ಪಾತ್ರೇಲಿ ಹಾಕಿ. ಮಿಕ್ಕ ಎಲ್ಲಾ ಸಾಮಾನನ್ನ ಬೆರೆಸಿ ಹಿಟ್ಟು ಮಾಡ್ಕೊಳ್ಳಿ, ತುಂಬಾ ನೀರ್ ಮಾಡ್ಕೊಬಾರ್ದು. ವಡೆ ಆಕಾರದಲ್ಲಿ ತಟ್ಟಿ ಎಣ್ಣೇಲಿ ಕರೀರಿ.

ಸಂಜೆ ಸ್ನ್ಯಾಕ್ಸಿಗೆ ಕುರುಕುಲು ತಿಂಡಿಗೆ ಇದನ್ನ ಮಾಡ್ಬೋದು.

8. ನವಣೆ ಪೊಂಗಲ್

ಬೇಕಾಗಿರೋ ಸಾಮಾನು ಏನಂದ್ರೆ...

ಹೆಸರುಬೇಳೆ - 1/4 ಕಪ್, ನವಣೆ- 1/4 ಕಪ್, ಅಕ್ಕಿ- 2 ಚಮಚ, ನೀರು - 1 1/2 ಕಪ್, ಸ್ವಲ್ಪ ಕರಿಮೆಣಸು, ಗೋಡಂಬಿ - 10, ಜೀರಿಗೆ: 0.25 ಟೀ ಚಮಚ, ಹಸಿಮೆಣಸಿನಕಾಯಿ: 1 ಸೀಳಿರುವುದು, ಕರಿಬೇವು: 1 ಕಡ್ಡಿ

ಶುಂಠಿ - 1/4 ಇಂಚು, ಇಂಗು - 1 ಚಿಟಿಕೆ, ತುಪ್ಪ - 1 ಟೀ ಚಮಚ, ಸ್ವಲ್ಪ ಉಪ್ಪು

ಹೆಂಗೆ ಮಾಡೋದು ಅಂದ್ರೇ...

ಹೆಸ್ರುಬೇಳೆ ಮತ್ತೆ ನವಣೆ ಅಕ್ಕಿನ ನೀರ್ನಲ್ಲಿ ಚೆನ್ನಾಗಿ ತೊಳೀರಿ. ಸುಮಾರು 2 ಗಂಟೆ ಕಾಲ ನೀರ್ನಲ್ಲಿ ನೆನೆಸಿಡಿ. ಇವೆರಡನ್ನು 5 ಕಪ್ಸ್ ನಷ್ಟು ನೀರ್ನಲ್ಲಿ ನೆನೆಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಕುಕ್ಕರ್ನಲ್ಲಿ ಬೇಯಿಸಿ. ಒಂದು ಸಣ್ಣ ಪ್ಯಾನ್ ತೊಗೊಂಡು ತುಪ್ಪ ಕಾಯಿಸಿ ಅದಕ್ಕೆ ಜೀರಿಗೆ ಮತ್ತೆ ಇಂಗು ಹಾಕಿ. ನಂತರ ಮೆಣಸು, ಶುಂಠಿ, ಹಸಿಮೆಣಸಿನಕಾಯಿ, ಗೋಡಂಬಿ ಮತ್ತೆ ಕರ್ಬೇವು ಹಾಕಿ ಒಂದು ನಿಮಿಷ ಫ್ರೈ ಮಾಡಿ. ಇದನ್ನು ಬೇಯಿಸಿದ ಪೊಂಗಲ್ ಮೇಲೆ ಹಾಕಿ ಅಲಂಕರಿಸಿ. ಈ ನವಣೆ ಪೊಂಗಲ್ನ ಚಟ್ನಿ ಅಥವಾ ರಾಯ್ತದ ಜೊತೆಗೆ ಬೆಳಗ್ಗಿನ ತಿಂಡಿ ಅಥವಾ ಮಧ್ಯಾಹ್ನದ ಊಟ ಅಥವಾ ರಾತ್ರಿ ಊಟಕ್ಕೆ ತಿನ್ಬೋದು.

9. ನವಣೆ ಜಾಮೂನು

ಬೇಕಾಗಿರೋ ಸಾಮಾನು ಏನಂದ್ರೆ...

ನವಣೆ ಹಿಟ್ಟು 100 ಗ್ರಾಂ, ಸಪ್ಪೆ ಕೋವಾ 50 ಗ್ರಾಂ, ಸಿಹಿ ಕೋವಾ 100 ಗ್ರಾಂ, ಸ್ವಲ್ಪ ಏಲಕ್ಕಿ, ಪಾಕಕ್ಕೆ ಸಕ್ಕರೆ

ಹೆಂಗೆ ಮಾಡೋದು ಅಂದ್ರೇ...

ಮೊದಲು ಸಕ್ಕರೆ ಪಾಕನ ರೆಡಿ ಮಾಡಿಟ್ಟುಕೊಳ್ಳಿ. ಆಮೇಲೆ ನವಣೆ ಹಿಟ್ಟು, ಕೋವಾ ಮತ್ತೆ ಏಲಕ್ಕಿನ ಮಿಕ್ಸ್ ಮಾಡಿ ಉಂಡೆ ಮಾಡ್ಕೊಳ್ಳಿ, ಆ ಉಂಡೆಗಳ್ನ ಎಣ್ಣೆ ಅಥವಾ ತುಪ್ಪದಲ್ಲಿ ಕರೀರಿ. ಸ್ವಲ್ಪ ತಣ್ಣಗಾದ ಮೇಲೆ ಸಕ್ಕರೆ ಪಾಕಕ್ಕೆ ಹಾಕಿ. 3-4 ಗಂಟೆ ಬಿಟ್ಟು ನವಣೆ ಜಾಮೂನು ತಿನ್ನಿ.

10. ನವಣೆ ಉಪ್ಪಿಟ್ಟು 

ಬೇಕಾಗಿರೋ ಸಾಮಾನು ಏನಂದ್ರೆ...

ನವಣೆ ಅಕ್ಕಿ - 1 ಕಪ್, ಕ್ಯಾರೆಟ್, ಆಲೂಗೆಡ್ಡೆ, ಈರುಳ್ಳಿ, ಎಲೆಕೋಸು - 1 ಕಪ್, ಹಸಿಮೆಣಸಿನಕಾಯಿ - 6, ಗರಂ ಮಸಾಲೆ ಪುಡಿ

ಮತ್ತೆ ಒಗ್ಗರಣೆಗೆ - ಸಾಸಿವೆ, ಜೀರಿಗೆ, ಕರ್ಬೇವು, ಕೊತ್ತಂಬ್ರಿ ಸೊಪ್ಪು

ಹೆಂಗೆ ಮಾಡೋದು ಅಂದ್ರೇ...

ನವಣೇನಾ ನೀರ್ನಲ್ಲಿ ತೊಳೀರಿ. ಇನ್ನೋಂದ್ ಪಾತ್ರೇಲಿ ಎರಡು ಲೋಟ ನೀರು ಹಾಕಿ ಸ್ಟವ್ ಮೇಲಿಡಿ, ಮೊದಲ ಕುದಿ ಬಂದಾಗ ತೊಳೆದಿಟ್ಟ ನವಣೆ ಮತ್ತೆ ಸ್ವಲ್ಪ ಉಪ್ಪು ಹಾಕಿ ತಟ್ಟೆ ಮುಚ್ಚಿಡಿ, ಉರಿ ಸಣ್ಣಗಿರ್ಲಿ. 15-20 ನಿಮಿಷ ನಿಧಾನವಾಗಿ ನೀರು ಬತ್ತಿ ಹೋಗೋ ತನಕ ಬೇಯಿಸಿಕೊಂಡು ನಂತರ ತಟ್ಟೆ ಮೇಲೆ ಹರಡಿ. ಉಪ್ಪಿಟ್ಟನ್ನ ತಯಾರಿಸೋ ರೀತೀಲಿ ಒಗ್ಗರಣೆ ಹಾಕಿ. ಎಣ್ಣೆ ಹಾಕಿ, ಕಾದ ನಂತರ ಸಾಸಿವೆ, ಕರ್ಬೇವು, ಮೆಣಸಿನಕಾಯಿ ಮತ್ತು ಹೆಚ್ಚಿದ ಈರುಳ್ಳಿ, ಸಣ್ಣಗೆ ಹೆಚ್ಚಿದ ಕೋಸನ್ನ ಒಂದಾದ ಮೇಲೆ ಇನ್ನೊಂದನ್ನ ಹಾಕಿ, ನಂತರ ಬೇಯಿಸಿದ ಕ್ಯಾರೆಟ್ ಮತ್ತು ಆಲೂಗಡ್ಡೆ ಹಾಕಿ. ಕೊನಗೆ ಸ್ವಲ್ಪ ಗರಂ ಮಸಾಲ ಪುಡಿ ಮತ್ತೆ ನವಣೆ ಹಾಕಿ. ರುಚಿಗೆ ತಕ್ಕಷ್ಟು ಉಪ್ಪನ್ನ ಹಾಕಿ ಚೆನ್ನಾಗಿ ಕೈ ಅಲಾಡಿಸಿ. ಕೊನೆಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ತಿನ್ನಕ್ಕೆ ಕೊಡಿ.

ನವಣೇನ ಈ ಮೂಲಕ ನಿಮ್ಮ ಮೈಗೆ ಸೇರ್ಸ್ಕೊಂಡು ನಿಮ್ಮ ಆರೋಗ್ಯಾನಾ ನಿಮ್ಮ ಕೈನಲ್ಲೇ ಇಟ್ಟುಕೊಳ್ಳಿ.

11. ನವಣೆ ಬರ್ಗರ್ 

ಬೇಕಾಗಿರೋ ಸಾಮಾನು ಏನಂದ್ರೆ... 

ನವಣೆ ಅಕ್ಕಿ-1 ಕಪ್, ಅಕ್ಕಿ ಹಿಟ್ಟು-1/2 ಕಪ್, ಮೊಳಕೆ ಕಟ್ಟಿದ ಕಡ್ಲೆಕಾಳು, ಹೆಸರುಕಾಳು -1/2 ಕಪ್, ಟೊಮೆಟೋ-1 ಕ್ಯಾರೆಟ್-1 

ಹುರುಳಿಕಾಯಿ-100 ಗ್ರಾಂ, ಗರಂ ಮಸಾಲ-1 ಚಮಚ, ಅಚ್ಚ ಮೆಣಸಿನಕಾಯಿ ಪುಡಿ -ಸ್ವಲ್ಪ

ಕರಿಮೆಣಸು ಪುಡಿ-1 ಚಮಚ, ಎಣ್ಣೆ ಅಥವಾ ಬೆಣ್ಣೆ-1 ಚಮಚ, ಉಪ್ಪು, ಬರ್ಗರ್‌ ಬನ್-2 

ಹೆಂಗೆ ಮಾಡೋದು ಅಂದ್ರೇ...

ಮೊದಲು ನವಣೆ ತೊಳೀರಿ. ತರಕಾರಿಗಳನ್ನ ಹೆಚ್ಚಿಕೊಳ್ಳಿ. ಮೊಳಕೆ ಕಾಳುಗಳ ಜೊತೆ ಸ್ವಲ್ಪ ರುಚಿಗೆ ಉಪ್ಪು ಸೇರ್ಸಿ ಕುಕ್ಕರ್ನಲ್ಲಿ ಬೇಯಿಸಿಕೊಳ್ಳಿ. ಆಮೇಲೆ ಅದಕ್ಕೆ ಸ್ವಲ್ಪ ಅಕ್ಕಿ ಹಿಟ್ಟು ಮಿಕ್ಸ್ ಮಾಡಿ, ಗರಂ ಮಸಾಲ, ಖಾರದ ಪುಡಿ ಹಾಕಿ ಚೆನ್ನಾಗಿ ಕಲಿಸಿ ಟೊಮೇಟೋ ಪ್ಯೂರಿ ಸೇರಿಸಿ ಕಟ್ಲೆಟ್ ಹಿಟ್ಟಿನ ಹದಕ್ಕೆ ಮಾಡ್ಕೊಳ್ಳಿ. ಸಣ್ಣ ಉಂಡೆ ಮಾಡಿ ಕಟ್ಲೆಟ್‌ ತರ ಕಾದ ಕಾವಲಿ ಮೇಲೆ ಬೆಣ್ಣೆ ಹಚ್ಚಿ ಎರಡೂ ಕಡೆ ಬೇಯಿಸಿಕೊಳ್ಳಿ. ನಂತರ ಬರ್ಗರ್ ಬನ್ನಿನ ಮಧ್ಯದಲ್ಲಿ ಇಟ್ಟು ಟೊಮೇಟೋ ಸ್ಲೈಸ್, ಎಲೆಕೋಸು ಎಲಾ ಇಟ್ಟು ತಿನ್ನಕೆ ಕೊಡಿ. ಮಕ್ಕಳಿಗೆ ತುಂಬಾ ಇಷ್ಟ ಆಗತ್ತೆ.

12. ನವಣೆ ಪಾಯಸ

ಬೇಕಾಗಿರೋ ಸಾಮಾನು ಏನಂದ್ರೆ... 

ನವಣೆ ಅಕ್ಕಿ - 1/4 ಕೆಜಿ, ಸಾಕಷ್ಟು ಬೆಲ್ಲ, ಗಸಗಸೆ, ತೆಂಗಿನಕಾಯಿ ತುರಿ, ಗೋಡಂಬಿ, ದ್ರಾಕ್ಷಿ, ಏಲಕ್ಕಿ ಪುಡಿ, ತುಪ್ಪ, ಹಾಲು - 1/2 ಲೀಟರ್

ಹೆಂಗೆ ಮಾಡೋದು ಅಂದ್ರೇ...

ಮೊದ್ಲು ಗಸಗಸೆನಾ ಸ್ವಲ್ಪ ಹೊತ್ತು ನೆನಸಿ ತೆಂಗಿನ ಕಾಯಿ ಜೊತೆ ರುಬ್ಬಿಕೊಳ್ಳಿ. 4-5 ಚಮಚ ತುಪ್ಪದಲ್ಲಿ ಗೋಡಂಬಿ, ದ್ರಾಕ್ಷಿ ಹುರಿದುಕೊಳ್ಳಿ.

ಕುಕ್ಕರ್ನಲ್ಲಿ ನವಣೆ ಅಕ್ಕಿ, ಸ್ವಲ್ಪ ಬೆಲ್ಲ, ಸ್ವಲ್ಪ ಕಾಯಿತುರಿ, ಅರ್ಧ ಲೀಟರ್‌ ಹಾಲು ಹಾಕಿ ಹದವಾಗಿ ಬೇಯಿಸಿಕೊಳ್ಳಿ. ಪ್ರೆಶರ್ ಕಡಿಮೆ ಆದ ಮೇಲೆ ಮುಚ್ಚಳ ತೆಗೆದು ಹುರಿದ ಗೋಡಂಬಿ ದ್ರಾಕ್ಷಿ, ಏಲಕ್ಕಿ ಪುಡಿ ಸೇರ್ಸಿ ಚೆನ್ನಾಗಿ ಕುದಿಸಿ. ಪಾಯಸ ರೆಡಿ!

ನವಣೆ ತಿನ್ನಿ ತಿನ್ನಿ ಅಂತ ಇತ್ತೀಚೆಗೆ ಡಾಕ್ಟರ್ಗಳೇ ಹೇಳ್ತಿದಾರೆ. ಅಕ್ಕಿ, ಗೋಧಿ ತಿನ್ನೋ ಬದ್ಲು ಸಾವಿರ ಪಾಲು ವಾಸಿ ಅಂತಿದಾರೆ. ಆದ್ರೆ ನವಣೆಯಿಂದ ರುಚ್-ರುಚಿಯಾಗಿ ಅಡುಗೆ ಮಾಡ್ಬೋದು ಅಂತ ಸಾಮಾನ್ಯವಾಗಿ ಗೊತ್ತಿರಲ್ಲ. ಈಗ ಗೊತ್ತಾಯ್ತಾ? ಮತ್ಯಾಕ್ ಕಾಯ್ತೀರಿ?

 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಕಷ್ಟ ಬಂದಾಗ ಈ 12 ಸತ್ಯಗಳ್ನ ನೆನಪಿಸಿಕೊಂಡರೆ ಇನ್ನಷ್ಟು ಗಟ್ಟಿಯಾಗಿ ಹೊರಬರ್ತೀರಿ

ಸೋಲು ಗೆಲುವು ಎಲ್ಲಕ್ಕೂ ಮನಸ್ಸೇ ಕಾರಣ

ಕಷ್ಟ ಅನ್ನೋದ್ ಎಲ್ಲಾರ್ಗೂ ಬಂದೇ ಬರತ್ತೆ. ಒಂದೊಂದ್ಸಲ ಯಾವಾಗ್ ಮುಗ್ಯತ್ತಪ್ಪ ಅನ್ನೋ ಅಷ್ಟು ಕಷ್ಟಗಳು ಬರತ್ತೆ. 

ಆದ್ರೆ ನಮಗೆ ನಾವೇ ಈ 12 ಸತ್ಯಗಳ್ನ ಹೇಳ್ಕೊಂಡ್ ಸಮಾಧಾನ ಮಾಡ್ಕೊಂಡ್ರೆ ಕಷ್ಟಾನ ಎದುರಿಸೋ ಧೈರ್ಯ ಬರತ್ತೆ.

1. ಗೆಲ್ಲೋದಕ್ಕೆ ಸೋಲೋದಕ್ಕೆ ಎರಡಕ್ಕೂ ನಮ್ಮ ಮನಸ್ಸೇ ಕಾರಣ

ನಾವ್ ಮನಸ್ಸಿನಲ್ಲಿ ಏನ್ ಯೋಚ್ನೆ ಮಾಡ್ತೀವೋ ಅದೇ ತರ ನಡ್ಕೊಳ್ತೀವಿ. ನಮಗೆ ಅದೇ ತರ ಸಂದರ್ಭಗಳು ಒದಗಿ ಬರತ್ತೆ.

ನಾವು ಒಳ್ಳೇದನ್ನ ಯೋಚ್ನೆ ಮಾಡ್ತಾ, ಒಳ್ಳೇ ಕೆಲ್ಸಾನೇ ಯಾವಾಗ್ಲೂ ಮಾಡ್ತಾ ಇದ್ರೆ, ಮನಸ್ಸೂ ಒಳ್ಳೇದಾಗಿರತ್ತೆ. 

2. ನೋವು ಬರತ್ತೆ ಹಾಗೆ ಹೋಗತ್ತೆ

ಎಲ್ಲಾರ್ ಬದುಕಲ್ಲೂ ಒಂದಲ್ಲ ಒಂದು ತೊಂದ್ರೆ ಇದ್ದೇ ಇರತ್ತೆ, ಮನಸ್ಸಿಗೆ ನೋವು ತರೋ ಸಂದರ್ಭನೂ ಇದ್ದಿದ್ದೇ. ಇವೆಲ್ಲ ನಮ್ಮನ್ನ ಇನ್ನೂ ಗಟ್ಟಿ ಆಗ್ಸತ್ತೆ. ಕುಗ್ಗಕ್ಕೆ ಅವಕಾಶ ಕೊಡ್ಬಾರ್ದು ಅಷ್ಟೆ.

3. ಯೋಚ್ನೆ ಮಾಡೋದ್ರಿಂದ ಯಾವ ಸಮಸ್ಯೆನೂ ಪರಿಹಾರ ಆಗಲ್ಲ

ಯೋಚ್ನೆ ಮಾಡೋದ್ರಿಂದ ಯಾವ್ದೂ ಸರಿ ಹೋಗಲ್ಲ. ಅದ್ರಿಂದ ಮನಸ್ಸಿಗೆ ಮತ್ತೆ ದೇಹಕ್ಕೆ ಒತ್ತಡ ಜಾಸ್ತಿ ಆಗತ್ತೆ ಅಷ್ತೇ

4. ಕಷ್ಟ ಎದುರಿಸಕ್ಕೆ ಭಯಪಟ್ರೆ ಮುಂದೆ ಹೋಗಕ್ಕೆ ಆಗಲ್ಲ

ಕಷ್ಟ ಬಂತು ಅಂತ ಭಯದಿಂದ ಮನಸ್ಸು ಮುದುಡಿಕೊಂಡು ಕೂತ್ಕೋಂಡ್ರೆ ಯಾವ ಕೆಲ್ಸನೂ ಆಗಲ್ಲ.  ಹಿಂದೇನೆ ಉಳೀತೀವಿ.

ನಿಮಗೆ ಬೇಕಾಗಿರೋದೆಲ್ಲಾ ಭಯದ ಇನ್ನೊಂದು ಕಡೆ ಇದೆ. ಧೈರ್ಯವಾಗಿ ಮುನ್ನುಗ್ಗಿ ಗುರಿ ಸಾಧಿಸಿ.

5. ಅನುಭವಾನೇ ಇಲ್ದಿದ್ರೆ ಯಾವ್ದೇ ಪಾಠಾನೂ ಇರಲ್ಲ

ನಾವು ತುಂಬಾ ದ್ವೇಷ ಮಾಡೋಂಥ, ಮತ್ತೆ ನಮಗೆ ಬೇಡದೇ ಇರೋ ಅನುಭವಗಳೇ ನಮ್ಮನ್ನ ಗಟ್ಟಿಯಾಗಿ ನಿಲ್ಲೋಹಂಗೆ ಮಾಡೋದು.

6. ಪ್ರಯತ್ನಪಡದೆ ಯಾವ್ದೂ ಬದಲಾಗಲ್ಲ

ಬದಲಾವಣೆ ಅನ್ನೋದು ಏನಾದ್ರೂ ಮಾಡೋದಿಕ್ಕೆ ಸಂಬಂಧಿಸಿದ್ದು. ಸುಮ್ಮನೆ ಇರೋಕಲ್ಲ. ಯಾವುದೇ ವಿಚಾರಾನ ಬದಲಾಯಿಸಕ್ಕೆ ಪ್ರಯತ್ನ ಪಡ್ದೇ ಇದ್ರೆ ಏನೂ ಬದಲಾಗೋದೇ ಇಲ್ಲ.

7. ಆಗೋಗಿರೊದನ್ನ ಬದಲಾಯ್ಸಕ್ಕೂ ಆಗಲ್ಲ

ಆಗೋಗಿದ್ದು ಹಿಂದೆ ಸರಿದಿದ್ದು ಆಯ್ತು. ಅದನ್ನ ಬದಲಾಯ್ಸಕ್ಕೆ ಬ್ರಹ್ಮನಿಂದ್ಲೂ ಆಗಲ್ಲ

8. ರಾತ್ರೋರಾತ್ರಿ ಯಾವ್ದೇ ಕೆಲ್ಸ ಮುಗ್ಸಕ್ಕಾಗಲ್ಲ

ಯಾವ್ದೇ ಕೆಲ್ಸಾನೂ ಒಂದ್ ನಿಮಿಷದಲ್ಲಿ, ಒಂದ್ ದಿನದಲ್ಲಿ ಆಗೋದಿಲ್ಲ. ಸರಿಯಾಗಿ ಮಾಡ್ಬೇಕೂಂದ್ರೆ ಸಮಯ ಬೇಕು. ತಾಳ್ಮೆ ಇರ್ಬೇಕು. ದೊಡ್ಡ ದೊಡ್ಡ ಕನಸುಗಳನ್ನ ಸಾಧಿ ತೋರ್ಸ್ಬೇಕಾದ್ರೆ ಗುರಿ ಅಷ್ಟೆ ಅಲ್ಲ ಅದರ ಕಡೆ ಹೆಜ್ಜೆ ಹೆಜ್ಜೆನೂ ಮೆಲುಕು ಹಾಕ್ತ ಸರಿಯಾದ ದಾರೀಲಿ ನಡಿತಾ ಇದ್ದೀರಾ ಅಂತ ವಿಮರ್ಶೆ ಮಾಡೊ ಛಲ ಇರಲಿ. ಅತುರದಲ್ಲಿ ಮುಗ್ಸಕ್ಕೆ ಹೋಗಿ ಕೈ ಸುಟ್ಕೋಳೋದು ಸರಿಯಲ್ಲ.

9. ಎಲ್ಲಾ ಕೆಟ್ಟದ್ರಲ್ಲೂ ಒಳ್ಳೇದೇನೋ ಒಂದ್ ಇರತ್ತೆ

ಬರೀ ಕೆಟ್ಟದಾಗ್ತಾ ಇದೆ ಅಂತ ಆ ಟೈಮಲ್ಲಿ ಆಗೊ ಒಳ್ಳೇದನ್ನ ಗಮನ್ಸೋದೇ ಇಲ್ಲ ನಾವು. ಆದ್ರೆ, ಎಷ್ಟೇ ಕೆಟ್ಟದಾಗ್ತಾ ಇದ್ರೂ ಏನೋ ಒಂದ್ ಒಳ್ಳೇದ್ ಇದ್ದೇ ಇರತ್ತೆ.

10. ಸೋಲು ಗೆಲ್ಲೋದಿಕ್ಕೆ ಒಂದ್ ಮೆಟ್ಟಿಲು ಅಷ್ಟೇ

ಸೋತೋದೆ ಅಂತ ಆಕಾಶ ಏನೂ ತಲೆ ಮೇಲೆ ಬೀಳಲ್ಲ. ಸೋಲು ಅನ್ನೋದ್ ಗೆಲ್ಲಕ್ಕೆ ಒಂದೊಂದೇ ಮೆಟ್ಟಿಲು.

11. ಬಂದಿರೋ ಕಷ್ಟನ ಎದುರಿಸಕ್ಕೆ ನನ್ನ ಕೈಲಿ ಆಗತ್ತೆ

ಯಾರೋ ಏನೋ ಮಾಡಿದ್ರೂ ಅಂದ್ರೆ ಅದೆಲ್ಲಾ ನಮಗೂ ಆಗ್ಬೇಕೂಂತ ಏನೂ ಇಲ್ಲ. ಐದು ಬೆರೆಳೂ ಸಮ ಇರಲ್ಲ; ಹಾಗೆ ಇದೂನು. ಅವರಿವರಿಗೆ ಹೋಲಿಸಿಕೊಂಡ್ರೆ ನಿಮಗೆ ನೀವು ಅವಮಾನ ಮಾಡ್ಕೊಂಡ್ ಹಾಗೆ.

12. ಯಾರೂ ಒಂಟಿ ಅಲ್ಲ

ಈ ಪ್ರಪಂಚ್ದಲ್ಲಿ ಯಾರೂ ಒಂಟಿ ಅಲ್ಲ. ಏನೇನೆ ಅಡ್ಡಿ ಆತಂಕ ಬಂದ್ರೂ ಯಾರ್ದಾದ್ರೂ ಸಹಾಯ ಸಿಕ್ಕೇ ಸಿಗತ್ತೆ. ಎಲ್ಲಾರ್ಗೂ ಅವರವರ್ ಕಷ್ಟ ಇರತ್ತೆ. ಅದನ್ನ ಗೆದ್ದು ಬರೋ ದಾರಿ ನೋಡ್ಕೋಬೇಕು ಅಷ್ಟೇ.

ನೀವು ಎದುರಿಸ್ತಾ ಇರೋ ಸಂಕಷ್ಟ ಯಾವ್ದೇ ಇರ್ಲಿ – ಈ 12 ಸತ್ಯಗಳ್ನ ಹೇಳ್ಕೊಳಿ. ಮುನ್ನಗ್ಗಕ್ಕೆ ಧೈರ್ಯ ಬಂದೇ ಬರತ್ತೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: